ನಾವಿರುವ ಸಮಾಜದಲ್ಲಿ ಇಂದಿಗೂ ಕೂಡ ಮಾಂಸಾಹಾರವನ್ನು ಹೊಲಸು ಎನ್ನುವಂತೆ ಚಿತ್ರಿಸುತ್ತಿದೆ. ಮತ್ತೊಂದೆಡೆ ಮಾಂಸಾಹಾರ ಪ್ರಿಯರು ‘ಬಾಡೇ ನಮ್ ಗಾಡು’ ಎಂದು ಹೇಳುವ ಜೊತೆಗೆ ಸಸ್ಯಾಹಾರಿಗಳ ಆಹಾರವನ್ನು ಪುಳ್ಚಾರ್ ಎಂದು ತಮಾಷೆ ಮಾಡುತ್ತಾರೆ ಎರಡೂ ತಪ್ಪು ಪರಸ್ಪರರ ಆಹಾರದ ಮೇಲೆ ಗೌರವವಿರಲಿ ಎನ್ನುತ್ತಾರೆ ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್
ಆಹಾರ ಪದ್ಧತಿಯ ಬಗ್ಗೆ ಚರ್ಚೆ ಆಗುತ್ತಿರುವ ಈ ಹೊತ್ತಿನಲ್ಲಿ , ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ‘ಬಾಡೇ ನಮ್ಮ ಗಾಡು’ ಎಂದು ಅಭಿಯಾನ ನಡೆಸುತ್ತಿರುವ ವೇಳೆಯಲ್ಲಿ ಮೊತ್ತ ಮೊದಲಿಗೆ ಆಗಬೇಕಾಗಿರುವುದು ಮಾಂಸಹಾರಿಗಳಲ್ಲೇ ತಮ್ಮ ಆಹಾರದ ಬಗ್ಗೆ ಮೂಡಿಸಲಾಗಿರುವ ಕೀಳರಿಮೆ ತೊಲಗಬೇಕು. ತಮ್ಮ ಆಹಾರದ ಬಗ್ಗೆ ಪದೇ ಪದೇ ಇಂತಹಾ ಕೀಳರಿಮೆ ಮೂಡಿಸಲು ಮತ್ತು ಅದನ್ನು ಜಾರಿಯಲ್ಲಿಡಲು ಏನೆಲ್ಲಾ ಹುನ್ನಾರಗಳನ್ನು ಶತಮಾನಗಳಿಂದ ಹೆಣೆಯಲಾಗಿದೆ
ಮತ್ತು ಅವೆಲ್ಲವನ್ನೂ ಮಾಂಸಾಹಾರಿಗಳೇ ಮನಸಾರೆ ಒಪ್ಪಿಕೊಂಡು ಶಿರಸಾವಹಿಸಿ ಚಾಚೂ ತಪ್ಪದೆ ಪಾಲಿಸಲು ಎಂತಹಾ ಕುಶಾಗ್ರಮತಿಯ ಬಲೆ ನೇಯಲಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.
ಈ ದಿಸೆಯಲ್ಲಿ ನಮ್ಮ ಮಲೆನಾಡು ಸೇರಿದಂತೆ ಬಹುತೇಕ ಕಡೆ ಈಗಲೂ ಚಾಲ್ತಿಯಲ್ಲಿರುವ ಬೌದ್ಧಿಕ ದಿವಾಳಿತನ, ನಿರಭಿಮಾನದ ವಿಚಾರ, ಪದ್ದತಿಯೊಂದು ನನಗೆ ಬಹಳ ವಿಷಾದಯುತ ಬೆರಗು ಮತ್ತು ಬೇಸರ ತರಿಸುತ್ತದೆ. ಮಲೆನಾಡಿನ ಬಹುಸಂಖ್ಯಾತ ಜನರ ಆಹಾರ ಪದ್ಧತಿಗೆ ಇಡಲಾಗಿರುವ ಹೆಸರು ‘ಹೊಲಸು’ .
ತಮ್ಮ ನೆಚ್ಚಿನ ಆಹಾರಕ್ಕೆ ಇಡಲಾಗಿರುವ ಹೊಲಸು ಎಂಬ ಹೆಸರನ್ನು ಒಂಚೂರು ಆಕ್ಷೇಪಣೆ , ಚಿಂತನೆ , ಸ್ವಾಭಿಮಾನ ಇಲ್ಲದೇ ಮೆದುಳಿಗೆ ಲಕ್ವಾ ಹೊಡೆದವರಂತೆ ಒಪ್ಪಿಕೊಂಡು, ಅದನ್ನೇ ವರಪ್ರಸಾದ ಎಂಬಂತೆ ಪಾಲಿಸುವವರ ಬೌದ್ಧಿಕ ದಾರಿದ್ರ್ಯದ ಬಗ್ಗೆ ಅಸಹ್ಯ ಎನಿಸುತ್ತದೆ. ತಮ್ಮ ಆಹಾರವನ್ನು ಹೊಲಸು ಎಂದಿದ್ದಕ್ಕೆ ತಮ್ಮ ಭಾವನೆಗೆ ದಕ್ಕೆ ಆಯಿತೆಂದು ಒಬ್ಬರೂ ಒಂದಿಂಚು ಮಿಸುಕಾಡಿದ್ದನ್ನು ಕಾಣೆ.
ಆ ಮಟ್ಟಿಗಿನ ಬೌದ್ಧಿಕ ದಾಸ್ಯ ನಮ್ಮದು. ಒಬ್ಬರ ಆಹಾರ ಪದ್ದತಿಯನ್ನು ಹೊಲಸು ಅನ್ನುವುದಕ್ಕಿಂತ ಅತ್ಯಂತ ಕ್ರೂರ ರೇಸಿಸಂ ಇನ್ನೇನಿದೆ ??
ಹಲವು ಮನೆಗಳಲ್ಲಿ , ಮನೆಯ ಒಳಗಿನ ಅಡುಗೆ ಮನೆಯಲ್ಲಿ ನಾವು ಹೊಲಸು ಮಾಡುವುದಿಲ್ಲ, ಆ ದಿನ ಹೊಲಸು ತಿನ್ನಲ್ಲ, ಈ ದಿನ ಹೊಲಸು ತಿನ್ನಲ್ಲ ಎಂದು ಅದೊಂದು ಹೀನಾಯ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅದಕ್ಕಾಗಿಯೇ ಮನೆಯ ಹೊರಗೊಂದು ಅಡುಗೆ ಒಲೆ ಇರುತ್ತದೆ. ಅಥವಾ ತಾತ್ಕಾಲಿಕ ಒಲೆ ನಿರ್ಮಿಸಿ ಅಲ್ಲಿ ಮಾಂಸಾಹಾರ ತಯಾರಿಸುತ್ತಾರೆ . ನಾನು ಎಷ್ಟೋ ಬಾರಿ ಹೀಗೆ ಹೇಳೋರನ್ನೇ ಪ್ರಶ್ನಿಸಿದ್ದೇನೆ . “ಅಲ್ಲಾರೀ..ನೀವು ಹೊಟ್ಟೆಗೆ ತಿನ್ನೋ ಆಹಾರವನ್ನೇ ನೀವೇ ಹೊಲಸು ಅಂತೀರಲ್ರೀ..ಹೊಲಸು ಅಂತಾ ನೀವೇ ಅನ್ನೋದಾದರೆ ಹೊಲಸನ್ನು ಮತ್ತ್ಯಾಕೆ ತಿಂತೀರಿ ?” ಅಂದಾಗೆಲ್ಲಾ ಒಂದು ಪೆದ್ದು ನಗೆ ಬೀರಿ “ಏನ್ಮಾಡಕಾಗುತ್ತೆ ಹಿಂದಿನಿಂದ ಬಂದಿದ್ದು ?” ಅಂತಾರೆ.
ಈಗ ಬಾಡೇ ನಮ್ ಗಾಡು ಎಂದು ಅಭಿಯಾನ ನಡೆಸುತ್ತಿರುವವರಲ್ಲು ಇಂತಹ ‘ಸ್ಪ್ಲಿಟ್ ಪರ್ಸನಾಲಿಟಿ’ ಹೊಂದಿರುವ ಹಲವು ಜನರು ಖಂಡಿತವಾಗಿಯೂ ಇದ್ದಾರೆ.ಹಾಗೇ ಬಾಡೇ ನಮ್ಮ ಗಾಡು ಅನ್ನುತ್ತಾ ಇನ್ನೊಂದು ವರ್ಗದ ಸಸ್ಯಾಹಾರವನ್ನು ‘ಪುಳ್ಚಾರು’ ಎಂದು ಛೇಡಿಸುವುದು ಕೂಡಾ ಮತ್ತದೇ ರೀತಿಯ ತಪ್ಪು ಮನಸ್ಥಿತಿಯೇ. ಪರಸ್ಪರರ ಆಹಾರ ಕ್ರಮವನ್ನು ಗೌರವಿಸುವ ಪ್ರಬುದ್ಧ ಮನಸ್ಥಿತಿ ಬೆಳೆಸಿಕೊಳ್ಳಬೇಕಾಗಿದೆ.
ಯಾರದೋ ಜನ್ಮದಿನ , ಇನ್ಯಾವುದೋ ಹಬ್ಬ ಎಂದು ಬಹುಸಂಖ್ಯಾತರ ಆಹಾರದ ಮೇಲೆ ಆ ದಿನಗಳಲ್ಲಿ ನಿಷೇಧ ಹೇರುವುದು ಮಾನವನ ಆಹಾರ ಹಕ್ಕಿನಂತ ಅತ್ಯಂತ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ. ಕಿಂಚಿತ್ತಾದರೂ ಆತ್ಮಗೌರವ ಇದ್ದರೆ ಇಂತಹ ನಿಷೇಧಗಳೆಂಬ ದೌರ್ಜನ್ಯಗಳನ್ನು ಯಾವ ಕಾರಣಕ್ಕೂ ಸಹಿಸಿಕೊಳ್ಳಬಾರದು. ಮೊದಲಿಗೆ ಇಂತಹಾ ಎಲ್ಲಾ ನಿಷೇಧಗಳು ತೆರವಾಗಬೇಕು.
ಬಾಡೇ ನಮ್ಮ ಗಾಡು ಎನ್ನುವ ಮೊದಲು ಆ ವಾರ ತಿನ್ನಲ್ಲ , ಈ ವಾರ ತಿನ್ನಲ್ಲ ಎಂಬ ಸೋಗಲಾಡಿತನ ಬಿಡಬೇಕು. ದೇವರಿಗಾಗಿ ತಿನ್ನಲ್ಲ, ದೇವಸ್ಥಾನಕ್ಕೆ ಹೋದಾಗ ತಿನ್ನಲ್ಲ ಅನ್ನುವುದು ಕೂಡಾ ತಮ್ಮ ಆಹಾರವನ್ನು ತುಚ್ಚವಾಗಿ ಕಾಣುವ ಇನ್ನೊಂದು ಮಜಲು. ನಾನು ನಾಸ್ತಿಕನಾದರೂ ಚರ್ಚೆಯ ಸಲುವಾಗಿ ಆಸ್ತಿಕವಾದದ ಪರವಾಗಿಯೇ ಮಾತಾಡುವುದಾದರೆ ಮನುಷ್ಯ ದೇಹವೇ ಮೂಳೆ ಮಾಂಸದ ತಡಿಕೆಯಾಗಿರುವಾಗ ಯಾವ ದೇವರು, ಎಲ್ಲಿ ಹೇಳಿದ್ದಾರೆ ಇಂತಹಾ ವಾರ ಮಾಂಸ ಸೇವಿಸಬಾರದು , ಮಾಂಸ ಸೇವಿಸಿ ದೇವಸ್ಥಾನಕ್ಕೆ ಬರಬಾರದು ಎಂದು. ಹೀಗೆ ಫರ್ಮಾನು ಹೊರಡಿಸಿದವರ ಮೂಲ ಉದ್ದೇಶ ನಿಮ್ಮ ಆಹಾರದ ಬಗ್ಗೆ ನಿಮ್ಮೊಳಗೆ ಕೀಳರಿಮೆ ತುಂಬುವುದಷ್ಟೇ.
ಜಿಂಕೆಯನ್ನು ಸೃಷ್ಟಿಸಿ ಅದನ್ನು ಹುಲಿಯ ಆಹಾರವನ್ನಾಗಿಸಿದ್ದು ನಿಮ್ಮ ದೇವರೆ ಅಥವಾ ನಾವು ದೇವರು ಅಂದುಕೊಳ್ಳುವ ಪ್ರಕೃತಿಯೇ ಅಲ್ಲವೇ ?? ಹುಲಿ , ಸಿಂಹಗಳು ಸೋಮವಾರ , ಶನಿವಾರ ಮಾಂಸಾಹಾರ ತ್ಯಜಿಸುತ್ತವೆಯೇ ???
ಅವರೇ ಹೇಳುವಂತೆ ಭಕ್ತಿ ಎಂಬುದು ಮನಸ್ಸಿನಲ್ಲಿ ಇರಬೇಕಿರುವುದೇ ಹೊರತು ಇಂತಹ ಯಾರದೋ ಮೂಗಿನ ನೇರದ ಅರ್ಥಹೀನ ಆಚರಣೆಗಳಲ್ಲಲ್ಲ.
ಅಲ್ಲಿ ನಾಗನಡೆ ಇದೆ, ಇಲ್ಲಿ ನಾಗನೆಡೆ ಇದೆ ಮನೆಯಲ್ಲಿ ಹೊಲಸು ಮಾಡಬೇಡಿ ಎಂದವರ ಮಾತು ನಂಬಿ ಚಾಚು ತಪ್ಪದೆ ಪಾಲಿಸುವವರಿಗೆ ,ಅದೇ ನಾಗ ಸಂದಿಗೊಂದಿಗಳಲ್ಲಿ ನುಗ್ಗಿ ಇಲಿ , ಕಪ್ಪೆಯನ್ನು ಹಿಡಿದು ಹಸಿಹಸಿಯಾಗಿ
ಭಕ್ಷಿಸುವುದು ಕಾಣುವುದಿಲ್ಲವೇ ??
ಬಹುಶಃ ದಾಸ್ಯ, ಮೌಡ್ಯ, ಅವಿವೇಕ, ಅಂಧಶ್ರದ್ಧೆ ನಮ್ಮ ಜನರ ನರನಾಡಿಗಳಲ್ಲಿ ಸೇರಿ ಹೋಗಿದೆ ಅನಿಸುತ್ತದೆ. ಗ್ರಹ , ಗ್ರಹಣ ,ಹಾವು ,ಹುಪ್ಪಟೆ ಹೀಗೆ ಪ್ರಕೃತಿಯ ಒಂದೊಂದು ವಿಸ್ಮಯಗಳನ್ನು ತೋರಿಸಿ ಅದಕ್ಕೊಂದು ಕಥೆ ಕಟ್ಟಿ ಜನರ ಶೋಷಣೆ ಮಾಡುವುದು ದಿನೇ ದಿನೇ ಹೆಚ್ಚುತ್ತಲೇ ಇದೆ. ಅದಕ್ಕೆಲ್ಲಾ ಗುರಾಣಿಯಂತೆ ‘ನಂಬಿಕೆ’ ಅನ್ನೋ ಹೆಸರು , ನಂಬಿಕೆಗಳನ್ನು ಪ್ರಶ್ನಿಸುವಂತಿಲ್ಲ ಎಂಬ ಕಟ್ಟಾ ಫರ್ಮಾನು ಬೇರೆ. ನಂಬಿಕೆ ಅನ್ನೋದೊಂದು anticipatory ರಕ್ಷಣಾ ವ್ಯವಸ್ಥೆ ಆಗಿಬಿಟ್ಟಿದೆ. ಯಾವುದೇ ವಿಷಯದಲ್ಲಿ ಪ್ರಶ್ನೆಯೆತ್ತಬಾರದು ಎಂದರೆ ಅವರ ಬಳಿ ಸಮಂಜಸ ಉತ್ತರವಿಲ್ಲ, ಅಲ್ಲೇನೋ ಹುಳುಕಿದೆ ಎಂದೇ ಅರ್ಥ
ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ , ಎಲ್ಲಾ ಧರ್ಮಗಳಲ್ಲೂ ಬೇರೆ ಬೇರೆ ಆಯಾಮಗಳಲ್ಲಿ ಇಂತಾ ಶೋಷಕರಿದ್ದಾರೆ.
ಆದರೆ ಜೀವಸಂಕುಲದಲ್ಲೆ ಸ್ವಂತಕ್ಕೆ ದೇಹದಲ್ಲೊಂದು ಅತ್ಯಂತ ಅಭಿವೃದ್ಧಿ ಹೊಂದಿರುವ ಮೆದುಳು ಹೊಂದಿರುವ ಮನುಷ್ಯ ಯಾವತ್ತೂ ಸತ್ಯವನ್ನು ಮಾತ್ರ ನಂಬಬೇಕು , ಸತ್ಯವು ಮಾತ್ರ ನಂಬಿಕೆಯಾಗಬೇಕು. ಆಗಲೇ ಇಂತಹಾ ಅಪಸವ್ಯಗಳಿಗೆ ಕೊನೆ.