
ಜನಪ್ರಿಯ ಸಾಹಿತಿ, ಹಿರಿಯ ಕವಿ ದೊಡ್ಡರಂಗೇಗೌಡರು ನಟಿಸಿರುವ ‘ಸ್ವಚ್ಛ ಕರ್ನಾಟಕ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಎಲ್ ರವಿ ಕುಮಾರ್ ಅವರು ಕತೆ, ಚಿತ್ರಕತೆ, ಸಂಭಾಷಣೆ ಬರೆದು, ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ಹೆಸರೇ ಸೂಚಿಸುವಂತೆ ಶುಚಿತ್ವದ ಅಗತ್ಯವನ್ನು ಸಾರಲಾಗಿದೆ.
ಚಿತ್ರದ ನಾಯಕ ಅರ್ಜುನ್ ಅವರಿಗೆ ಇದು ಎರಡನೇ ಚಿತ್ರ. ವಿದೇಶದಿಂದ ಮರಳಿ ನಾಡಿಗೆ ಬಂದು ಹೆಲ್ತ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುವ ಪಾತ್ರ ಅವರದು. ಸಾಮಾಜಿಕ ಜಾಗೃತಿ ಮೂಡಿಸುವ ಇಂಥದೊಂದು ಚಿತ್ರದಲ್ಲಿ ನಟಿಸುವ ಅವಕಾಶ ದೊರಕಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಚಿತ್ರದಲ್ಲಿ ನನ್ನ ಬಾಮೈದನ ಪಾತ್ರ ಮಾಡಿರುವ ಮಂಜು ಕೂಡ ವಿದೇಶದಿಂದ ಬಂದಿರುತ್ತಾರೆ. ಹಾಗಾಗಿ ನಾವೆಲ್ಲ ವಿದೇಶದಲ್ಲಿ ಕಂಡ ಸ್ವಚ್ಛತೆ ನಮ್ಮಲ್ಲಿ ಏಕಿಲ್ಲ ಎಂದು ಚಿಂತಿಸಿ, ಆ ನಿಟ್ಟಿನಲ್ಲಿ ಪ್ರಯತ್ನಿಸುವ ಪಾತ್ರ. ದೊಡ್ಡರಂಗೇಗೌಡ ಅವರು ನನ್ನ ಮಾವನ ಪಾತ್ರ ಮಾಡಿದ್ದಾರೆ ಎಂದು ಅರ್ಜುನ್ ಹೇಳಿದರು.
ಚಿತ್ರದ ಮೂಲಕ ಮೊದಲ ಬಾರಿಗೆ ಕ್ಯಾಮೆರ ಎದುರಿಗೆ ಬಂದಿರುವ ಬಾಲನಟಿ ಖುಷಿ ತಾವು ದೊಡ್ಡರಂಗೇಗೌಡರ ಮೊಮ್ಮಗಳ ಪಾತ್ರ ಮಾಡಿರುವುದಾಗಿ ತಿಳಿಸಿದರು. ಯುವನಟ ಮನು ಶರ್ಮ ಮಾತನಾಡಿ ನಾನು ಚಿತ್ರದಲ್ಲಿ ಮಾರಿ ಎನ್ನುವ ಖಳನ ಪಾತ್ರ ಮಾಡಿದ್ದೇನೆ ಎಂದರು. ತಮ್ಮದು ಸ್ವಚ್ಛತೆಗೆ ವಿರುದ್ಧವಾಗಿರುವ ಭ್ರಷ್ಟಾಚಾರಿಯ ಪಾತ್ರ ಎಂದರು. ಕುಡುಕನ ಪಾತ್ರ ಮಾಡಿರುವ ಸತೀಶ್,
ನೆಲ ನರೇಂದ್ರ ಬಾಬು ಪುತ್ರ ನಟ ಮಂಜು ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕ ರವಿಕುಮಾರ್ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಸಂಬಂಧಿಕರು ಹೌದು ಎನ್ನುವುದನ್ನು ನೆನಪಿಸಿಕೊಂಡ ದೊಡ್ಡರಂಗೇಗೌಡರು ಈ ಚಿತ್ರವು ಡಾ.ರಾಜ್ ಕುಮಾರ್ ಅವರ ‘ಬಂಗಾರದ ಮನುಷ್ಯ’ದಂತೆ ಹೆಸರಾಗಬಹುದು ಎಂದರು. ಯಾಕೆಂದರೆ ಬಂಗಾರದ ಮನುಷ್ಯ ಸಿನಿಮಾದ ಆಶಯ ಚೆನ್ನಾಗಿತ್ತು. ಅದನ್ನು ಜನ ಅನುಸರಿಸಿದ್ದಾರೆ. ಈ ಚಿತ್ರ ಕೂಡ ಜನತೆಯ ಮನಪರಿವರ್ತನೆ ಮಾಡುವಂತಾಗಲಿ ಎನ್ನುವುದು ಹಾರೈಕೆ ಎಂದರು.
ಮರಾಠಿ ಪುಂಡರಿಗೆ ಖಂಡನೆ
ಇದೇ ಸಂದರ್ಭದಲ್ಲಿ ಎಂ ಇ ಎಸ್ ಸಂಘಟನೆಯ ಪುಂಡಾಟಿಕೆಯ ಬಗ್ಗೆ ಮಾತನಾಡಿದ ಕವಿ ದೊಡ್ಡರಂಗೇಗೌಡರು ಒಂದೇ ದೇಶದವರಾಗಿದ್ದುಕೊಂಡು ಸ್ವಾತಂತ್ರ್ಯ ಹೋರಾಟಗಾರನ ಪ್ರತಿಮೆಗೆ ಘಾಸಿಗೊಳಿಸುವ ಕೃತ್ಯ ನಡೆಸಿರುವುದು ತಪ್ಪು ಎಂದಿದ್ದಾರೆ.