
ಕಣ್ಣಲ್ಲಿ ಕಾಂತಿ, ನಗುವಲ್ಲಿ ಪ್ರೀತಿ ತುಂಬಿಕೊಂಡೇ ಬಂದ ಹುಡುಗಿ ಅದಿತಿ ಪ್ರಭುದೇವ. ಸುದೀಪನ ಎನ್ನುವ ಹೆಸರಲ್ಲಿ ಬಂದು ಅದಿತಿಯಾಗಿ ಹೆಸರಾದವಳು. ಗ್ಲಾಮರ್ ಲೋಕದಲ್ಲಿ ತಾರೆಯಾಗಿದ್ದರೂ ಹಳ್ಳಿ ಮೇಲಿನ ಅಭಿಮಾನ ಬಿಡದ ಅದಿತಿ ಈಗ ಚೆಲುವನೊಬ್ಬನ ಮನದೊಡತಿ! ಹೌದು, ಅದತಿ ಪ್ರಭುದೇವ ನಿಶ್ಚಿತಾರ್ಥವಾಗಿದೆ. ಈ ಬಗ್ಗೆ ಸ್ವತಃ ಅವರೇ ಸಿನಿಕನ್ನಡ.ಕಾಮ್ ಜೊತೆಗೆ ಮಾತನಾಡಿದ್ದಾರೆ.
ಅಭಿನಂದನೆಗಳು.. ನಿಶ್ಚಿತಾರ್ಥ ಆಗಿದ್ದು ಯಾವಾಗ?
ವಂದನೆಗಳು.. ಮೊನ್ನೆ.. ಡಿಸೆಂಬರ್ 26ರಂದು ಎಂಗೇಜ್ಮೆಂಟ್ ಆಯ್ತು. ಎರಡು ಮನೆಯವರು ಸೇರಿ ತಾಂಬೂಲ ಬದಲಿಸಿದ್ದೀವಿ. ಅವರ ಹೆಸರು ಯಶಸ್. ಕಾಫಿ ಪ್ಲಾಂಟರ್ ಆ್ಯಂಡ್ ಬಿಲ್ಡರ್. ನಿಶ್ಚಿತಾರ್ಥ ಕಾರ್ಯಕ್ರಮ ತುಂಬ ಸಣ್ಣದಾಗಿ ಆಯಿತು. ಶೂಟಿಂಗ್ ಮುಗಿಸ್ಕೊಂಡು ಜಮಾಲಿ ಗುಡ್ಡ ಶೂಟಿಂಗ್ಗೆ ಬಂದಿದ್ದೇನೆ. ನಿನ್ನೆ ರಾತ್ರಿ ಕೂಡ ಶೂಟಿಂಗ್ ಇತ್ತು. ಈಗ ಬೆಳಿಗ್ಗೆಯೂ ಶೂಟಿಂಗ್ನಲ್ಲೇ ಇದ್ದೀನಿ.
ಫಸ್ಟ್ ಲವ್ ಆಗಿ ಈಗ ನಿಶ್ಚಿತಾರ್ಥ ಆಗ್ತಿರೋದ?
ಹೇ.. ಖಂಡಿತವಾಗಿ ಇಲ್ಲ. ಕೆಲವರೇನೋ ಹಾಗೆಲ್ಲ ಬರ್ಕೊಂಡಿದ್ದಾರೆ! ಎರಡು ವರ್ಷ ಲವ್ವಲ್ಲಿದ್ದೆ ಅಂತೆ!! ಹಾಗೆಲ್ಲ ಇದ್ದಿದ್ದರೆ ಇಷ್ಟೊತ್ತಿಗೆ ಸುದ್ದಿ ಆಗ್ತಿತ್ತಲ್ವ? ಇವರು ರಿಲೇಶನ್ ಅಲ್ಲವಾದರೂ ಫ್ಯಾಮಿಲಿ ಫ್ರೆಂಡ್ ಮೂಲಕ ನಮ್ಮ ಮನೆಗೆ ಪರಿಚಯವಾಗಿ, ಕಮ್ಯುನಿಟಿ ಒಳಗಿನಿಂದಲೇ ಮನೆಯವರು ಆಯ್ಕೆ ಮಾಡಿದ ಹುಡುಗ. ಈಗಂತೂ ಖಂಡಿತವಾಗಿ ಲವ್ ಮಾಡ್ತಿದ್ದೀನಿ.
ನೀವು ನಿರೀಕ್ಷೆ ಮಾಡಿದ್ದ ಹುಡುಗನ ಗುಣಗಳೆಲ್ಲ ಇವರಲ್ಲಿವೆಯಾ?
ಖಂಡಿತವಾಗಿ! ನಾನು ಮುಖ್ಯವಾಗಿ ಹೇಳ್ತಿದ್ದಿದ್ದೇ ಹುಡುಗನಿಗೆ ಕೃಷಿ ಬ್ಯಾಕ್ಗ್ರೌಂಡ್ ಇರಬೇಕು.. ಎತ್ತರದ ಹುಡುಗ ಆಗಿರಬೇಕು ಅಂತ. ಆ ಎರಡೂ ಗುಣಗಳಂತೂ ಇವೆ. ಇವರು ಕಾಫಿ ಪ್ಲಾಂಟರು. ಅಗ್ರಿಕಲ್ಚರ್ ಬಗ್ಗೆ ತುಂಬ ಒಲವು ಇರೋರು. ಆರಡಿ ಎತ್ತರವೂ ಇದ್ದಾರೆ. ಹಾಗೆ ಮನೆಯವರ ಆಯ್ಕೆಗೆ ನಾನು ಒಪ್ಪಿದ್ದೇನೆ.
ನಿಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಹುಡುಗನ ಬಗ್ಗೆ ಹೆಚ್ಚಿನ ವಿವರ ನಿರೀಕ್ಷೆ ಮಾಡಬಹುದ?
ಯಾವುದನ್ನೂ ಪ್ಲ್ಯಾನ್ ಮಾಡಿಲ್ಲ. ಸದ್ಯಕ್ಕೆ ಶೂಟಿಂಗ್ ಬ್ಯುಸಿಯಲ್ಲಿದ್ದೇನೆ. ಮದುವೆಗೆ ಇನ್ನೂ ಒಂದಷ್ಟು ಸಮಯವಂತೂ ಇದೆ. ಆ ದಿನಗಳೊಳಗೆ ಬಂದರೂ ಬರಬಹುದು.