ಕನ್ನಡ ರಂಗಭೂಮಿಯಲ್ಲಿ ಪ್ರಯೋಗಗಳಿಗೆ ಕೊರತೆ ಇಲ್ಲ ಎನ್ನುವುದನ್ನು ಸಾಬೀತು ಮಾಡುವಂತೆ ತಯಾರಾಗಿರುವ ನಾಟಕ `ಯಥಾ ಪ್ರಕಾರ’. ಗಂಡ ಹೆಂಡತಿ ಸಂಬಂಧ ಎನ್ನುವುದು ಹೀಗೆಯೇ ಇರುವುದು ಸಾಮಾನ್ಯ ನೋಟ. ಆದರೆ ಅದರೊಳಗೆ ಇರುವ ತುಮುಲಗಳೇನು ಎನ್ನುವುದನ್ನು ಎಲ್ಲರನ್ನೂ ತಲುಪುವ ಹಾಗೆ ಮಾಡುವಂಥ ನಾಟಕ ಇದು.
ಈಗಾಗಲೇ ಎರಡು ಪ್ರದರ್ಶನಗಳ ಮೂಲಕ ಜನ ಮನ ಗೆದ್ದಿರುವ ಯಥಾ ಪ್ರಕಾರ ಇನ್ನಷ್ಟು ಪ್ರದರ್ಶನಗಳಿಗೆ ಅಣಿಯಾಗುತ್ತಿದೆ. ರಾಮಯ್ಯ ಅವರು ತಮ್ಮ ಸಹೃದಯಿ ಸ್ನೇಹಿತರೊಂದಿಗೆ ಸೇರಿಕಟ್ಟಿದ ‘ಅಂತರಂಗ ಬಹಿರಂಗ’ ತಂಡದ ಎರಡನೇ ನಾಟಕ ಇದು. ಮೊದಲನೆಯದು '
ಸ್ನಿಗ್ಧ’. ಈ ನಾಟಕಗಳ ಕರ್ತೃ ಮತ್ತು ಯಥಾ ಪ್ರಕಾರದ ನಿರ್ದೇಶಕ ಭೀಷ್ಮ ರಾಮಯ್ಯ ಅವರು ನಾಟಕದ ಬಗ್ಗೆ ಸಿನಿಕನ್ನಡ.ಕಾಮ್ ಜೊತೆಗೆ ಮಾತನಾಡಿದ್ದಾರೆ.
ಇದು ಗಂಡ ಹೆಂಡತಿಯ ಸಂಬಂಧದ ಕುರಿತಾದ ಕತೆ. ಅಂದರೆ ಕತೆಯೊಳಗೆ ಗಂಡ ಒಬ್ಬ ಸಿನಿಮಾ ಕಲಾವಿದ ಮತ್ತು ಆತನ ಪತ್ನಿ ಗೃಹಿಣಿ ಅವಿಭಕ್ತ ಕುಟುಂಬದಲ್ಲಿ ಜೀವನ ನಡೆಸುವವರು. ಪತ್ನಿಗೆ ಅದು ಬೇಕು ಇದು ಬೇಕು ಎನ್ನುವ ಏನೇನೋ ಆಸೆಗಳು. ಆದರೆ ಪತಿ ಆರ್ಥಿಕವಾಗಿ ಹಿನ್ನಡೆ ಹೊಂದಿರುತ್ತಾನೆ. ಆಕೆ ತನ್ನ ಬಯಕೆಗಳ ಈಡೇರಿಕೆಗಾಗಿ ಗಂಡನ ಜೊತೆಗೆ ನಡೆಸುವ ಹೋರಾಟ ಮತ್ತು ಆತ ನಡೆಸುವ ಹೊಂದಾಣಿಕೆಯ ಪ್ರಯತ್ನಗಳೇ ಈ ನಾಟಕದ ಕಥಾ ಹಂದರ ಎಂದು ಹೇಳಬಹುದು. ಕೊನೆಯಲ್ಲಿ ಪತ್ನಿಯಾದವಳು ತೆಗೆದುಕೊಳ್ಳುವ ನಿರ್ಧಾರಗಳೇ ಹೈಲೈಟ್ ಎಂದು ಹೇಳಬಹುದು ಎನ್ನುತ್ತಾರೆ ನಿರ್ದೇಶಕ ಭೀಷ್ಮ ರಾಮಯ್ಯ.
ಹತ್ತು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರು. ಇದುವರೆಗೆ ಸುಮಾರು ಹದಿನೈದು ನಾಟಕಗಳ ಮೂಲಕ ನೂರೈವತ್ತರಷ್ಟು ಪ್ರದರ್ಶನದಲ್ಲಿ ಅಭಿನಯಿಸಿರುವಂಥ ಅನುಭವಿ. ಪ್ರಸ್ತುತ `ಅಂತರಂಗ ಬಹಿರಂಗ’ ಎನ್ನುವ ತಂಡ ಕಟ್ಟಿಕೊಂಡು ತಾವೇ ನಿರ್ದೇಶಿಸುತ್ತಿರುವ ಪ್ರಥಮ ನಾಟಕ ಇದು ಎನ್ನುವ ಮಾಹಿತಿಯನ್ನು ಅವರು ನೀಡಿದ್ದಾರೆ.
ಸ್ವಾತಿ ಮತ್ತು ಸೂರಜ್ ಎನ್ನುವ ಹೆಂಡತಿಯ ಪಾತ್ರಗಳನ್ನು ವಸಂತ್ ಮತ್ತು ನಾಗಲಕ್ಷ್ಮಿ ಎನ್ನುವ ಇಬ್ಬರು ಕಲಾವಿದರು ಮಾತ್ರ ಸೇರಿಕೊಂಡು ಒಂದು ಗಂಟೆ ಹದಿನೈದು ನಿಮಿಷಗಳ ಈ ನಾಟಕವನ್ನು ವೇದಿಕೆಯ ಮೇಲೆ ನಿಭಾಯಿಸುತ್ತಿರುವುದು ವಿಶೇಷ.