ರಾಕಿಂಗ್ ಸ್ಟಾರ್ ಯಶ್ ನಟನೆಯ ಜನಪ್ರಿಯ ಸಿನಿಮಾಗಳಲ್ಲಿ ಒಂದಾದ ‘ಕಿರಾತಕ’ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ನಿಧನರಾಗಿದ್ದಾರೆ. ಕಳೆದ ಐದು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿದ್ದ ಪ್ರದೀಪ್ ರಾಜ್ (46) ಇಂದು ಮುಂಜಾನೆ ಪಾಂಡಿಚೇರಿಯಲ್ಲಿ ಇಹಲೋಕ ತ್ಯಜಿಸಿರುವುದಾಗಿ ಪ್ರದೀಪ್ ಸಹೋದರ ಪ್ರಶಾಂತ್ ಸಿನಿಕನ್ನಡ.ಕಾಮ್ ಗೆ ತಿಳಿಸಿದ್ದಾರೆ.
ಕಳೆದ ಹದಿನೆಂಟು ವರ್ಷಗಳಿಂದ ಮಧುಮೇಹ ರೋಗಿಯಾಗಿದ್ದ ಪ್ರದೀಪ್ ರಾಜ್ ಅವರಿಗೆ ಇದೇ ಕಾರಣದಿಂದ ಕೊರೊನಾ ಬಂದಾಗ ತೀವ್ರ ಅನಾರೋಗ್ಯ ಉಂಟಾಗಿತ್ತು. ಬಳಿಕ ಬಹುಅಂಗಾಗ ವೈಫಲ್ಯ ಎದುರಿಸಬೇಕಾಗಿ ಬಂದ ಕಾರಣ ಮತ್ತೆ ಚೇತರಿಸಿಕೊಳ್ಳಲಿಲ್ಲ. ಕೆಜಿಎಫ್ ಬಂದ ಬಳಿಕ ಕಿರಾತಕ-2 ಪ್ರಾಜೆಕ್ಟ್ ನಿಂದ ಯಶ್ ಹಿಂದೆ ಸರಿದಿದ್ದರು. ಹಾಗಾಗಿ ಹೊಸಮುಖಗಳನ್ನು ಇರಿಸಿಕೊಂಡು ಪ್ರದೀಪ್ ರಾಜ್ ಕಿರಾತಕ-2 ಚಿತ್ರ ರೆಡಿ ಮಾಡಿದ್ದು ಬಿಡುಗಡೆಗೆ ತಯಾರಾಗಿ ನಿಂತಿದೆ. ಪ್ರದೀಪ್ ರಾಜ್ ಅವರು ಈ ಹಿಂದೆ ಬೆಂಗಳೂರು 560023, ಕಿಚ್ಚು, ಮಿಸ್ಟರ್ 420, ನೀನಾಸಂ ಸತೀಶ್ ನಟನೆಯ ಅಂಜದ ಗಂಡು, ದುನಿಯಾ ವಿಜಯ್ ನಟನೆಯ ರಜನಿಕಾಂತ ಚಿತ್ರಗಳನ್ನು ನಿರ್ದೇಶಿಸಿದ್ದರು.
ಪ್ರದೀಪ್ ರಾಜ್ ಮೂಲತಃ ಪಾಂಡಿಚೇರಿಯವರಾಗಿದ್ದು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪತ್ನಿ ಶಾಲಿನಿ ಗೃಹಿಣಿ. ದೊಡ್ಡ ಮಗ ಬಿಟೆಕ್ ವಿದ್ಯಾರ್ಥಿಯಾಗಿದ್ದು ಪಾಂಡಿಚೇರಿಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ಕಿರಿಯ ಪುತ್ರ ಅನಿರುದ್ಧ್ ಒಂಬತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ಸಂಜೆ 3ಗಂಟೆಗೆ ಪಾಂಡಿಚೇರಿಯಲ್ಲೇ ನೆರವೇರಲಿರುವುದಾಗಿ ತಿಳಿಸಿದ್ದಾರೆ.