ಚಿತ್ರ : ಮಾನಾಡು
ನಿರ್ದೇಶನ: ವೆಂಕಟ ಪ್ರಭು
ನಿರ್ಮಾಣ: ದೀಪನ್ ಭೂಪತಿ, ಸುರೇಶ ಕಮಾಚಿ
ತಾರಾಗಣ: ಟಿ.ಆರ್. ಸಿಲಂಬರಸನ್, ಎಸ್.ಜೆ.ಸೂರ್ಯ, ಕಲ್ಯಾಣಿ ಪ್ರಿಯದರ್ಶನ್, ವೈ.ಜಿ. ಮಹೇಂದ್ರನ್
ಸಮಯ ಎಂದಿಗೂ ನಿಲ್ಲುವುದಿಲ್ಲ. ಅಕಸ್ಮಾತ್ ನಿಂತರೆ? ಎಂಬ ಪ್ರಶ್ನೆ ಇಂದ ಚಿತ್ರದ ಆರಂಭ. ಆರಂಭದಲ್ಲೇ ಒಂದು ಯೋಚನೆಯ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಮಾನಾಡು. ವೆಂಕಟ ಪ್ರಭು ಅವರ ನಿರ್ದೇಶನದ ತಮಿಳು ಚಿತ್ರ 2021ರ ಕೊನೆಯಲ್ಲಿ ತೆರೆಕಂಡಿತ್ತು. ಇದೀಗ ಸೋನಿ ಲೈವ್ ಅಲ್ಲಿ ಲಭ್ಯವಿದೆ.
ಈಗಾಗಲೇ ಒಂದಷ್ಟು ಚಿತ್ರಗಳನ್ನು ನಿರ್ದೇಶಿಸಿ ಅದಕ್ಕೆ ಪ್ರಶಸ್ತಿಗಳನ್ನು ಪಡೆದ ವೆಂಕಟ ಪ್ರಭು ಅವರ ವಿಭಿನ್ನ ಪ್ರಯತ್ನ ಈ ಸಿನಿಮಾ ಎನ್ನಬಹುದು. ನಾವು ಸಾಕಷ್ಟು ಇಂಗ್ಲಿಷ್ ಚಲನಚಿತ್ರಗಳನ್ನು ‘ಟೈಮ್ ಲೂಪ್’ ಎಂಬ ವಿಷಯದಲ್ಲಿ ನೋಡಿದ್ದೇವೆ. ಉದಾಹರಣೆಗೆ ‘ಡಾಕ್ಟರ್ ಸ್ಟ್ರೇಂಜ್’ ಅಂತಹ ಚಿತ್ರಗಳಲ್ಲಿ ಬರುವ ಸನ್ನಿವೇಶಗಳು ಅಥವಾ ‘ಟೆನೆಟ್’ ಇರಬಹುದು. ತಮಿಳಿನಲ್ಲಿ ಇಂಥದೊಂದು ಚಿತ್ರ ಮಾಡಿ ಅದನ್ನು ಅಚ್ಚುಕಟ್ಟಾಗಿ ತೋರಿಸಿದ್ದಕ್ಕೆ ಇಡೀ ಚಿತ್ರತಂಡ ಅಭಿನಂದನಾರ್ಹ.
ಕತೆ ಶುರುವಾಗುವುದು ಒಬ್ಬ ಅನಿವಾಸಿ ಭಾರತೀಯ ತನ್ನ ಗೆಳತಿಯ ಮದುವೆಗೆಂದು ಊಟಿಗೆ ಬರುವುದರ ಮೂಲಕ. ಚಿತ್ರದಲ್ಲಿನ ಸನ್ನಿವೇಶಗಳು ವೇಗವಾಗಿ ಸಾಗಿ ಮತ್ತೇನೋ ಇದೆ ಎಂದುಕೊಳ್ಳುತ್ತಿದ್ದಂತೆಯೇ ಒಂದು ಅಚ್ಚರಿ ಮೂಡಿಸುತ್ತದೆ. ಅದು ಆ ಸಾಮಾನ್ಯ ಮನುಷ್ಯ ಟೈಮ್ ಲೂಪಿನಲ್ಲಿ ಸಿಲುಕಿಕೊಂಡಿರುತ್ತಾನೆ. ಪ್ರತಿ ಬಾರಿಯೂ ಒಂದು ಹೊಸ ಹೊಸ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುತ್ತಾ ಹೋಗುತ್ತಾನೆ. ನಾಯಕನ ಪಾತ್ರದಲ್ಲಿ ಸಿಲಂಬರಸನ್ ಅವರು ಕಾಣಿಸಿಕೊಂಡಿದ್ದು ಅವರ ನಟನೆ ಅತ್ಯುತ್ತಮ ಎಂದು ಪರಿಗಣಿಸುವುದು ಕಷ್ಟ. ಕೆಲವೊಂದು ದೃಶ್ಯಗಳಲ್ಲಿ ಮನಮುಟ್ಟುವಂತೆ ನಟಿಸಿದ್ದರೂ , ಇಡಿಯಾಗಿ ಗಮನಿಸಿದಾಗ ಸಾಧಾರಣ ಎನ್ನಬಹುದು. ಎಲ್ಲೋ ಒಂದು ಕಡೆ ಕೆಲವೊಂದು ಡೈಲಾಗ್ ಹೇಳುವಾಗ ಇನ್ನೂ ಹೆಚ್ಚಿನ ತೂಕ ಬೇಕಿತ್ತು ಅಂತ ಅನ್ನಿಸುತ್ತದೆ. ಆದರೆ ಹೊಸ ಪ್ರಯೋಗಕ್ಕೆ ಕಾಲಿಟ್ಟು ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ ಎನ್ನಬಹುದು.
ಇದರ ನಡುವೆ ಮುಖ್ಯಮಂತ್ರಿಯನ್ನು ಕೊಲ್ಲುವ ಷಡ್ಯಂತ್ರವನ್ನು ಕೇಂದ್ರೀಕರಿಸಿ ಚಿತ್ರದ ಕಥೆ ಸಾಗುತ್ತದೆ. ಒಂದೇ ಘಟನೆಯನ್ನು ಹಲವಾರು ರೂಪಕಗಳಿಂದ ಚಿತ್ರಿಸಿ, ಹಲವಾರು ಆಯಾಮಗಳಿಂದ ತೋರಿಸಿದ ರೀತಿ ನೋಡುವಾಗ ನಿಜಕ್ಕೂ ಖುಷಿಯಾಗುತ್ತದೆ. ಅನಿರೀಕ್ಷಿತ ತಿರುವುಗಳು ಚಿತ್ರದ ಶ್ರೀಮಂತಿಕೆ. ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡ ಎಸ್ ಜೆ ಸೂರ್ಯ ಅವರ ಅಭಿನಯದ ಬಗ್ಗೆ ಯಾವುದೇ ಮಾತಿಲ್ಲ. ಅವರು ತಮ್ಮ ನಟನೆಯ ಸಾಮರ್ಥ್ಯವನ್ನು ಈಗಾಗಲೇ ಹಲವಾರು ಚಿತ್ರಗಳಲ್ಲಿ ತೋರಿಸಿ ತಮ್ಮ ಛಾಪು ಮೂಡಿಸಿದ್ದಾರೆ. ಅದೇ ರೀತಿ, ಈ ಸಿನಿಮಾದಲ್ಲಿ ಕೂಡ ಅವರ ಮನಸ್ಸಿನ ಉದ್ವೇಗ, ತೊಳಲಾಟ, ಆಡುವ ಮಾತುಗಳು ಎಲ್ಲದರಲ್ಲೂ ಗಮನ ಸೆಳೆದಿದ್ದಾರೆ. ಅವರ ಅಭಿನಯ ನೋಡುವುದೇ ಆನಂದ.
ಹಿಂದೂ ಮುಸ್ಲಿಂ ಅಂತಹ ಸೂಕ್ಷ್ಮ ವಿಷಯಗಳ ಸುತ್ತ ಹೆಣೆದ ಕಥೆಯನ್ನು ಎಲ್ಲೂ ಮಿತಿ ಮೀರದಂತೆ ತೋರಿಸಲಾಗಿದೆ ಎನ್ನಬಹುದು. ಅದಕ್ಕಿಂತಲೂ ಈ ಚಿತ್ರವನ್ನು ಸೈನ್ಸ್ ಫಿಕ್ಷನ್ ಎಂದು ಕೂಡ ನೋಡಬಹುದು. ನಾಯಕನ ಪ್ರವೇಶಕ್ಕೆ, ಖಳನಾಯಕನ ಪ್ರವೇಶಕ್ಕೆ, ಅಥವಾ ಕೆಲವೊಂದು ಹೊಡೆದಾಟದ ಸಂದರ್ಭದಲ್ಲಿ, ತಿರುವುಗಳು ಬರುವ ಸಂದರ್ಭಗಳಲ್ಲಿ ಯುವನ್ ಶಂಕರ್ ಅವರು ನೀಡಿದ ಹಿನ್ನಲೆ ಸಂಗೀತ ಚಿತ್ರದ ಗುಣಮಟ್ಟ ಹೆಚ್ಚಿಸಿದೆ. ವೆಂಕಟ ಪ್ರಭು ಅವರು ಈ ಚಿತ್ರವನ್ನು ಅಂತ್ಯಗೊಳಿಸುವಾಗ ಮತ್ತೊಮ್ಮೆ ಟೈಮ್ ಲೂಪಿನಲ್ಲಿ ಸಿಲುಕಿಕೊಳ್ಳುವಂತೆ ತೋರಿಸಿ ಇದರ ಮತ್ತೊಂದು ಭಾಗ ಬರುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ಅಭಿಮಾನಿಗಳ, ವಿಮರ್ಶಕರ ಗಮನ ಸೆಳೆದ ‘ಮಾನಾಡು’, ಮುಂದಿನ ಭಾಗ ಹೇಗಿರಬಹುದು ಎಂಬ ಕುತೂಹಲ, ನಿರೀಕ್ಷೆ ಮೂಡಿಸಿರುವುದು ನಿಜ.
ಮನಸ್ಸಿನ ಜೊತೆ ಆಟವಾಡಿ, ಚಿತ್ರವು ಮುಗಿದ ನಂತರವೂ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ ಮಾಡಿರುವುದು ಅದ್ಭುತವೇ ಸರಿ.