ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಕನ್ನಡತಿ’ಯ ಪ್ರಮುಖ ಕಲಾವಿದರಿಗೆ ಕೊರೊನಾ ಸೋಂಕು ಉಂಟಾಗಿದ್ದು ಚಿತ್ರೀಕರಣದಿಂದ ವಿಮುಖರಾಗಿದ್ದಾರೆ
ಕಥಾನಾಯಕಿ ಕನ್ನಡತಿ ಭುವನೇಶ್ವರಿ ಯಾನೇ ಹಸಿರುಪೇಟೆ ಸೌಪರ್ಣಿಕಾ ಪಾತ್ರಧಾರಿ ರಂಜನಿ ರಾಘವನ್. ಈಗಾಗಲೇ ಒಂದೆರಡು ಸಿನಿಮಾಗಳ ಮೂಲಕವೂ ಗುರುತಿಸಿಕೊಂಡಂಥ ನಟಿ. ಆದರೆ ಕೊರೊನಾಗೆ ಘಟಾನುಘಟಿಗಳೇ ಲೆಕ್ಕವಿಲ್ಲವಲ್ಲ? ಗಂಟಲು ನೋವು, ಚಳಿಜ್ವರ ಕಾಟದಿಂದ ಶೂಟಿಂಗ್ ತೊರೆದು ಮನೆ ಸೇರಿಕೊಂಡ ರಂಜನಿಯ ಆರೋಗ್ಯ ಪರೀಕ್ಷಿಸಿದ ವೈದ್ಯರು ಕೊವಿಡ್ ಪಾಸಿಟಿವ್ ಎಂದು ಘೋಷಿಸಿದ್ದಾರೆ. ಕೂಡಲೇ ಕೊವಿಡ್ ನಿಯಮಗಳನ್ನು ಪಾಲಿಸಿ ಕ್ವಾರಂಟೈನ್ ನಲ್ಲಿರುವ ರಂಜನಿ ಅಲ್ಲಿಂದಲೇ ಇತರರಿಗೆ ಒಂದು ಸಲಹೆ ನೀಡಿದ್ದಾರೆ.
“ಎರಡು ಡೋಸ್ ವ್ಯಾಕ್ಸಿನೇಷನ್ ಆಗಿದ್ದರೂ ನನಗೆ ಕೊರೊನಾ ಕಾಡಿದೆ. ವ್ಯಾಕ್ಸಿನ್ ಆಗಿಲ್ಲದಿದ್ದರೆ ಇನ್ನಷ್ಟು ಪರಿಣಾಮ ಉಂಟಾಗುತ್ತಿತ್ತೇನೊ. ಹಾಗಾಗಿ ಎಲ್ಲರೂ ವ್ಯಾಕ್ಸಿನ್ ಮತ್ತು ಅಗತ್ಯ ಇರುವವರು
ಬೂಸ್ಟರ್ ಡೋಸ್ ಕೂಡ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ರಂಜನಿ ಸ್ವತಃ ಕತೆಗಾರ್ತಿಯಾದ ಕಾರಣ ವಿಶ್ರಾಂತಿಯಲ್ಲಿದ್ದುಕೊಂಡೇ ಒಂದಷ್ಟು ಹೊಸ ಕತೆಗಳನ್ನು ಸೃಷ್ಟಿಸಿದರೂ ಅಚ್ಚರಿ ಇಲ್ಲ!
ಸುಚಿ, ಬಿಂದುವಿಗೂ ಕೊರೊನಾ..!
ಕೊರೊನಾ ಸಾಂಕ್ರಾಮಿಕ ಕಾಯಿಲೆಯಾದ ಯಾರಿಗುಂಟು, ಯಾರಿಗಿಲ್ಲ ಎಂದು ಕೇಳುವ ಅಗತ್ಯವೇ ಇಲ್ಲ. ಕೆಲವರಿಗೆ ಶೀತ, ಗಂಟಲು ನೋವಿಗೆ ಸೀಮಿತ. ಇನ್ನಷ್ಟು ಮಂದಿಗೆ ಜೋರು ಜ್ವರ. ಹಾಗೆ ಭುವನೇಶ್ವರಿ ತಂಗಿ ಬಿಂದು ಪಾತ್ರಧಾರಿ ಮೊಹಿರಾ ಆಚಾರ್ಯ ಕೂಡ ಕೊರೊನಾ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಿನಿಕನ್ನಡ.ಕಾಮ್ ಜೊತೆಗೆ ಮಾತನಾಡಿದ ಅವರು ‘ಇದೀಗ ಗುಣಮುಖಳಾಗುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
ಬಿಂದುವಿಗೆ ಬಂದ ಮೇಲೆ ಆಕೆಯ ಆತ್ಮೀಯ ಸ್ನೇಹಿತೆ ಸುಚಿಗೂ ಬರಲೇಬೇಕಲ್ಲವೇ? ಸಂದೇಹ ಬೇಡ. ಸುಚಿ ಪಾತ್ರಧಾರಿ ಅಮೃತಾಗೂ ಕೊರೊನಾ ಕಾಟ ಶುರುವಾಗಿದೆ. ಹೀಗೆ ನಾಯಕಿ ಮತ್ತು ಆಕೆಯ ಸುತ್ತಲಿನ ಪ್ರಮುಖ ಪಾತ್ರಧಾರಿಗಳ ಅಲಭ್ಯತೆ ದೃಶ್ಯಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡುವಂತೆ ಮಾಡಿದೆ. ಆದರೆ ಕಥಾಗತಿಯನ್ನು ಈಗಾಗಲೇ ನಿರ್ಧರಿಸಿರುವ ರೀತಿಯಲ್ಲೇ ಮುಂದುವರಿಸಲಾಗುವುದು. ಈಗಾಗಲೇ ಈ ಕಲಾವಿದರು ಗುಣಮುಖರಾಗಿದ್ದಾರೆ. ಅಗತ್ಯದ ವಿಶ್ರಾಮದ ಬಳಿಕ ಇನ್ನೊಂದೆರಡು ದಿನಗಳಲ್ಲೇ ಸೆಟ್ ಗೆ ಮರಳಲಿದ್ದಾರೆ. ಪ್ರೇಕ್ಷಕರ ಬಹು ನಿರೀಕ್ಷೆಯ ದೃಶ್ಯಗಳು ಆಗ ಬರಲಿವೆ ಎಂದು ನಿರ್ದೇಶಕ ಯಶವಂತ್ ತಿಳಿಸಿದ್ದಾರೆ.