
ಹಿರಿಯ ಸ್ಥಿರ ಚಿತ್ರಛಾಯಾಗ್ರಾಹಕ ಡಿ ಸಿ ನಾಗೇಶ್ (66) ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಲ್ಲಿದ್ದ ಅವರು ಇಂದು ಮುಂಜಾನೆ 5.30ರ ಸುಮಾರಿಗೆ ಬಸವನಗುಡಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಸಾಮಾನ್ಯ ಬೆಳಕಿನಲ್ಲಿಯೂ ಅದ್ಭುತವಾಗಿ ಫೊಟೊ ಸೆರೆ ಹಿಡಿಯಲ್ಲಂಥ ಪ್ರತಿಭಾವಂತ ಡಿ.ಸಿ ನಾಗೇಶ್. ಕಪ್ಪು ಬಿಳುಪು ಕಾಲದಿಂದಲೇ ನೆರಳು ಬೆಳಕಿನಲ್ಲಿ ತಮ್ಮ ಕಾರ್ಯಕ್ಷಮತೆ ತೋರಿಸಿದ್ದ ಅವರು ಅವರು ಕನ್ನಡ ಪತ್ರಿಕಾಕ್ಷೇತ್ರದಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಮಯೂರ, ಸುಧಾ ಸೇರಿದಂತೆ ನಾಡಿನ ಜನಪ್ರಿಯ ಮಾಧ್ಯಮಗಳಿಗೆ ಫ್ರೀಲೇನ್ಸ್ ಛಾಯಾಗ್ರಾಹಕರಾಗಿ ದುಡಿದಿದ್ದ ಅವರು ಸಿನಿಮಾ ಮಾತ್ರವಲ್ಲದೆ ಇತರ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಿಗೂ ಖಾಯಂ ಛಾಯಾಗ್ರಾಹಕರಾಗಿದ್ದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಸ್ತುತ ಪಡಿಸುವ ‘ಬೆಳ್ಳಿಹೆಜ್ಜೆ’ ವಿಶೇಷ ಕಾರ್ಯಕ್ರಮವನ್ನು ಡಿ.ಸಿ ನಾಗೇಶ್ ಅವರ ಹೊರತಾಗಿ ಯೋಚಿಸುವುದು ಕಷ್ಟವೇ. ದಶಕಗಳ ಹಿಂದೆ ‘ಮಯೂರ’ದ ಮಧ್ಯದ ಪುಟಗಳನ್ನು ಅಲಂಕರಿಸುತ್ತಿದ್ದ ಅದ್ಭುತವಾದ ಚಿತ್ರಗಳ ಸನಿಹ ‘ವರ್ಣ ಪಾರದರ್ಶಿಕೆ: ಡಿ.ಸಿ ನಾಗೇಶ್’ ಎನ್ನುವ ಹೆಸರು ಕಂಡವರು ಮರೆಯುವುದು ಕಷ್ಟ.
ನಾಗೇಶ್ ಅವರು ಛಾಯಾಗ್ರಾಹಕರಾಗಿ ಮಾತ್ರವಲ್ಲ, ಓರ್ವ ಉತ್ತಮ ಮನುಷ್ಯ ಸ್ನೇಹಿಯಾಗಿ ಕೂಡ ಗುರುತಿಸಿಕೊಂಡಿದ್ದರು. ಜನಪ್ರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಪ್ರಸಿದ್ಧ ಅಂಕಣ ಚದುರಿದ ಚಿತ್ರಗಳು ಮಾಲಿಕೆಗೆ ಡಿ.ಸಿನಾಗೇಶ್ ಅವರೇ ಛಾಯಾಗ್ರಾಹಕರಾಗಿದ್ದರು. ಕಷ್ಟದಲ್ಲಿದ್ದ ಕಲಾವಿದರ ಮನೆಗಳಿಗೆ ತಮ್ಮದೇ ನಾಲ್ಕುಚಕ್ರದ ವಾಹನದಲ್ಲಿ ಪ್ರಯಾಣಿಸುತ್ತಿದ್ದುದರ ಬಗ್ಗೆ ತನ್ನೊಂದಿಗೆ ಚಾಲಕರಾಗಿ, ಛಾಯಾಗ್ರಾಹಕರಾಗಿ ಜೊತೆ ನೀಡಿದ್ದ ಡಿ ಸಿ ನಾಗೇಶ್ ವ್ಯಕ್ತಿತ್ವದ ಬಗ್ಗೆ ತೀರ ಇತ್ತೀಚೆಗೂ ಗಣೇಶ್ ಕಾಸರಗೋಡು ನೆನಪಿಸಿಕೊಂಡಿದ್ದರು. ಒಂದಷ್ಟು ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಮಾತ್ರವಲ್ಲ, ಅವರೆಲ್ಲರ ಮೊದಲ ಫೊಟೊ ತೆಗೆದ ನೆನಪುಗಳ ಖಜಾನೆಯಾಗಿದ್ದರು ಡಿ.ಸಿ ನಾಗೇಶ್. ನಟಿ, ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ನಾಡಿನ ಗಣ್ಯರು ನಾಗೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಲ್ಲಿದ್ದ ಡಿ ಸಿ ನಾಗೇಶ್ ಅದರಿಂದ ಸುಧಾರಿಸಿಕೊಂಡರೆಂದು ಸುದ್ದಿಯಾಗಿತ್ತು. ಕಳೆದ ವರ್ಷ ನಟ ಸುದೀಪ್ ಚಿತ್ರಬದುಕಿನ 25ವರ್ಷಗಳ ಸಂಭ್ರಮಾಚರಣೆ ಮಾಡಿಕೊಂಡಾಗ ಅಪರೂಪಕ್ಕೊಮ್ಮೆ ಎಲ್ಲ ಪತ್ರಕರ್ತರೊಂದಿಗೆ ನಾಗೇಶ್ ಕಾಣಿಸಿಕೊಂಡಿದ್ದರು. ಇದೀಗ ಎಂದಿಗೂ ಕಾಣದ ಲೋಕ ಸೇರಿದ್ದಾರೆ. ಮೃತರು ಪತ್ನಿ ಮತ್ತು ಏಕೈಕ ಪುತ್ರಿಯನ್ನು ಅಗಲಿದ್ದಾರೆ. ಇಂದು ಸಂಜೆ 4ರ ತನಕ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ವಿಲ್ಸನ್ ಗಾರ್ಡನ್ ನ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.
