ಕರಿಸುಬ್ಬು ಹೋಮ್ ಸ್ಟೇ ‘ತಾವರೆ ತೋಟ’

ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿನ ನೈಜತೆಗೆ ಕನ್ನಡಿ ಹಿಡಿದ ನಟರಲ್ಲಿ ಕರಿಸುಬ್ಬು ಪ್ರಮುಖರು. ಪರದೆಯ ನಟರಾಗಿ ಕನ್ನಡಿಗರಿಗೆ ಪರಿಚಿತರಾದರೂ ಸಹ ಕರಿಸುಬ್ಬು ಸ್ಟುಡಿಯೋ ಕನ್ನಡದ ತಾಂತ್ರಿಕ ಲೋಕದಲ್ಲಿ ಪ್ರಮುಖ ಸ್ಥಾನ ಪಡೆದಿರುವಂಥದ್ದು. ಇದೀಗ ಅವರು ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಆ ಬಗ್ಗೆ ಹಿರಿಯ ಪತ್ರಕರ್ತ ಗಣೇಶ ಕಾಸರಗೋಡು ಅವರು ಬರೆದಿರುವುದು ಹೀಗೆ.

ಹಲವು ಏಳುಬೀಳುಗಳನ್ನು ಕಂಡ ಬದುಕು ಚಿತ್ರ ನಿರ್ಮಾಪಕ ಕರಿಸುಬ್ಬು ಅವರದ್ದು. ಆದರೆ ಎಂದೂ ಧೈರ್ಯ ಕಳೆದುಕೊಂಡವರಲ್ಲ. ಸಾಹಸಕ್ಕೆ ಮತ್ತೊಂದು ಹೆಸರು ಕರಿಸುಬ್ಬು. ಈಗಿನಿಂದಲ್ಲ, ಸುಮಾರು 35 ವರ್ಷಗಳ ಹಳೆಯ ಗೆಳೆಯ ಈ ಸುಬ್ಬು.

‘ನೀಲಾಂಬರಿ’ ಮೂಲಕ ಸೂರ್ಯ ಅವರಿಗೆ, ‘ಮಣಿ’ ಮೂಲಕ ಯೋಗರಾಜ ಭಟ್ಟರಿಗೆ ಅವಕಾಶ ಮಾಡಿಕೊಟ್ಟ ಕರಿಸುಬ್ಬು ಸಾಮಾನ್ಯರಲ್ಲ, ಅಸಮಾನ್ಯರು! ಒಂದೆರಡು ಸಿನಿಮಾಗಳಲ್ಲಿ ಯಶಸ್ಸನ್ನು ಕಂಡ ಸುಬ್ಬು, ಮತ್ತೆ ಒಂದೆರಡು ಸಿನಿಮಾಗಳಲ್ಲಿ ಎಲ್ಲವನ್ನೂ ಕಳೆದುಕೊಂಡು ಬಿಟ್ಟರು. ಆಸೆಯಿಂದ ಕಟ್ಟಿಸಿದ ಬಂಗಲೆಯನ್ನು ಮಾರಬೇಕಾದ ಪ್ರಸಂಗವೂ ಬಂದೊದಗಿತು. ಆದರೆ ಛಲಗಾರ ಕರಿಸುಬ್ಬು ಸುಮ್ಮನೇ ಕೈಕಟ್ಟಿ ಕೂರಲಿಲ್ಲ. ಬೆಂಗಳೂರಿನಲ್ಲೊಂದು ಸುಸಜ್ಜಿತವಾದ ಸ್ಟುಡಿಯೋ ಕಟ್ಟಿದರು. ಇನ್ನೇನು ಸಮಸ್ಯೆಗಳೆಲ್ಲವೂ ಮುಗಿದೇ ಹೋಯಿತು ಎಂದು ನಿಟ್ಟುಸಿರು ಬಿಡುತ್ತಿರುವಂತೆಯೆ ಕರಿಸುಬ್ಬು ಅವರಿಗೆ ಶತ್ರುವಾಗಿ ಕಾಡಿದ್ದು ಕೋವಿಡ್ ಮಹಾಮಾರಿ. ಹಾಗಾಗಿಯೇ ಚಿತ್ರರಂಗದ ಎಲ್ಲರಂತೆ ಇವರೂ ಕೂಡಾ ಬಸವಳಿದು ಬೆಂಡಾಗಿ ಹೋಗಿದ್ದಾರೆ. ಕತ್ತಲಲ್ಲಿ ಕಪ್ಪು ಕರಡಿಗೆ ಜಾಮೂನು ತಿನ್ನಿಸಲು ಹೊರಟ ಕರಿಸುಬ್ಬು ಅವರಿಗೆ ಆಶಾ ಕಿರಣವಾಗಿ ಕಾಣಿಸಿದ್ದು ಬೆಳೆದು ನಿಂತ ಮಗ ಬಿಷೇಜ್ ಕುಮಾರ್! ಅಪ್ಪನಂತೆ ಸಾಹಸೀ ಪ್ರವೃತ್ತಿ ಹೊಂದಿರುವ ಬಿಷೇಜ್ ಇದೀಗ ತನ್ನ ಬದುಕಿನ ದಾರಿಯನ್ನು ಕಂಡುಕೊಂಡಿದ್ದಾನೆ. ಅಪ್ಪನ ಸಹಾಯದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕೇವಲ 15 ಕಿಮೀ ದೂರದ ಅಗರ ಎಂಬ ಪ್ರಕೃತಿ ರಮ್ಯ ತಾಣದಲ್ಲಿ ಅಷ್ಟೇ ರಮ್ಯವಾದ ರೆಸಾರ್ಟ್’ವೊಂದನ್ನು ಪುನರ್ ನಿರ್ಮಾಣ ಮಾಡಿದ್ದಾನೆ. ಕರಿಸುಬ್ಬು ಟೇಸ್ಟ್ ಬಗ್ಗೆ ಎರಡು ಮಾತಿಲ್ಲ. ಕರಿ ಕಲ್ಲಿನಲ್ಲೂ ಕಲೆಯನ್ನು ಅರಳಿಸಬಲ್ಲ ತಾಕತ್ತಿರುವ ಕರಿಸುಬ್ಬು ಮಗನ ಈ ರೆಸಾರ್ಟನ್ನು ಸುಂದರ ಟ್ರೆಡಿಷನಲ್ ವನಕುಟೀರವಾಗಿ ರೂಪು ಕೊಟ್ಟಿದ್ದಾರೆ! ಬಿಷೇಜ್ ಕುಮಾರ್ ತನ್ನ ಈ ಹೊಸ ಸಾಹಸಕ್ಕೆ ಇಟ್ಟಿರುವ ಹೆಸರು : ‘ತಾವರೆ ತೋಟ’.

ಹಸಿರಿನಿಂದ ನಳನಳಿಸುತ್ತಿರುವ ಈ ‘ಫಾರ್ಮ್ ಸ್ಟೆ & ರೆಸ್ಟೋರೆಂಟ್’ನ ಕೆಂಪು ಮಂಗಳೂರು ಹೆಂಚಿನ ಮನೆಯದ್ದೇ ಒಂದು ವಿಶೇಷ ಆಕರ್ಷಣೆ. ಜತೆಗೆ ತಿಳಿ ನೀಲ ನೀರಿನ ಈಜುಕೊಳ ಬೇರೆ. ವೈವಿಧ್ಯಮಯ ತಿಂಡಿ – ತಿನಿಸುಗಳದ್ದೊಂದು ಆಪ್ತ ಮೆನುವೇ ರೆಡಿಯಾಗಿ ಕೂತಿದೆ! ವೀಕೆಂಡಿನ ಫ್ಯಾಮಿಲಿ ಗೆಟ್ ಟುಗೆದರ್’ಗೆ ಹೇಳಿ ಮಾಡಿಸಿದ ಶಾಂತಿ ಕುಟೀರವಿದು! ಇಂಥಾದ್ದೊಂದು ಸ್ವರ್ಗ ಸದೃಶ ರೆಸಾರ್ಟ್ ಇದೇ ಫೆಬ್ರವರಿ 6ರ ಭಾನುವಾರದಂದು ಉದ್ಘಾಟನೆಗೊಳ್ಳಲಿದೆ. ಕರಿಸುಬ್ಬು ಅವರ ಪುತ್ರ ಬಿಷೇಜ್ ಕುಮಾರನ (ಬಿಜ್ಜು) ಈ ಸಾಹಸಕ್ಕೊಂದು ವಿಶೇಷ ಶುಭ ಹಾರೈಕೆ ನಿಮ್ಮ ಕಡೆಯಿಂದಲೂ ಇರಲಿ : 9480975669

ಸಾವನ ದುರ್ಗದಲ್ಲಿ ‘ಬಿಲ್ವ ರೆಸಾರ್ಟ್’

ಹಾಗೆಯೇ ಸಾವನದುರ್ಗದ ಹತ್ತಿರ ಬಿಲ್ವ ಎನ್ನುವ ರೆಸಾರ್ಟ್ ನಿರ್ಮಾಣವಾಗಿದೆ. ಇದು ಐದು ಎಕ್ರೆ ವಿಶಾಲ ಪ್ರದೇಶದಲ್ಲಿ ಹಬ್ಬಿದೆ. ಬಿಲ್ವ ದಿ ನೇಚರ್ ಎನ್ನುವ ಈ ರೆಸಾರ್ಟ್‌ ಸಾವನ ದುರ್ಗ ಟ್ರೆಕ್ಕಿಂಗ್ ಸ್ಪಾಟ್ ಮತ್ತು ಮಂಚನಬೆಲೆ ಡ್ಯಾಮ್ ಗೆ ಸನಿಹದಲ್ಲೇ ಇದೆ. ಕರಿಸುಬ್ಬು ಸಿನಿಮಾರಂಗದವರಾದ ಕಾರಣ ಎರಡೂ ರೆಸಾರ್ಟ್ ಗಳನ್ನು ಚಿತ್ರೀಕರಣಕ್ಕೂ ನೀಡುವ ಯೋಜನೆ ಹಾಕಿಕೊಂಡಿದ್ದಾರೆ.

Recommended For You

Leave a Reply

error: Content is protected !!
%d bloggers like this: