
ಕೆಜಿಎಫ್ ಸರಣಿ ಚಿತ್ರಗಳಲ್ಲಿ ಭೂಗತಲೋಕದ ಪಾತಕಿಯಂತೆ ಕಾಣಿಸಿದ್ದಾರೆ ಯಶ್. ಅದೇ ಕಾರಣಕ್ಕೆ ಯಶ್ ಚಿತ್ರದ ಸಂದೇಶ ಚೆನ್ನಾಗಿಲ್ಲ ಎಂದು ನಾಯಕನಿಗೆ ನೈತಿಕತೆಯ ಪಾಠ ಮಾಡಿದವರಿಗೆ ಕೊರತೆ ಇಲ್ಲ. ಆದರೆ ತಮ್ಮ ಜೀವನದಲ್ಲಿ ತಮಗಿರುವಂಥ ನೈತಿಕತೆ ಯಾವ ಸ್ಟಾರ್ಸ್ಗೂ ಇಲ್ಲ ಎನ್ನುವುದನ್ನು ರಾಕಿಂಗ್ ಸ್ಟಾರ್ ಸಾಬೀತು ಮಾಡಿದ್ದಾರೆ.
ಎಲಾಚಿ ಪಾನ್ ಮಸಾಲ ಬ್ರಾಂಡ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಕಳೆದ ವಾರವಷ್ಟೇ ನಟ ಅಕ್ಷಯ್ ಕುಮಾರ್ ಕ್ಷಮೆಯಾಚಿಸಿದ್ದರು. ಅಕ್ಷಯ್ ತಮ್ಮ ಕಾಂಟ್ರಾಕ್ಟ್ ಮುಂದುವರಿಸಲು ಬಯಸದ ಕಾರಣ, ಸಂಸ್ಥೆಯವರು ಸದ್ಯದ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಬೆನ್ನು ಬಿದ್ದಿದ್ದರು. ಆದರೆ ಯಶ್ ಪಾನ್ ಮಸಾಲಾ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂದು ಎಕ್ಸೀಡ್ ಎಂಟರ್‌ಟೈನ್‌ಮೆಂಟ್ ಏಜೆನ್ಸಿಯ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ ತಿಳಿಸಿದ್ದಾರೆ. ರಾಷ್ಟ್ರವ್ಯಾಪಿ ಅಭಿಮಾನಿಗಳನ್ನು ಹೊಂದಿರುವ ಕೆಜಿಎಫ್ ನಟ ಇತ್ತೀಚೆಗೆ ಪಾನ್ ಮಸಾಲಾ ಮತ್ತು ಇಲೈಚಿ ಬ್ರಾಂಡ್‌ಗಾಗಿ ಬಹುಕೋಟಿ ಅನುಮೋದನೆ ಒಪ್ಪಂದವನ್ನು ನಿರಾಕರಿಸಿದ್ದಾರೆ.
‘‘ಇತ್ತೀಚಿಗೆ ನಾವು ಪಾನ್ ಮಸಾಲಾ ಬ್ರ್ಯಾಂಡ್‌ನಿಂದ ಎರಡಂಕಿಯ ಬಹು-ಕೋಟಿ ಆಫರ್ ಅನ್ನು ನಿರಾಕರಿಸಿದ್ದೇವೆ ಮತ್ತು ನಾವು ಯಾರೊಂದಿಗೆ ಸಹಭಾಗಿತ್ವದಲ್ಲಿದ್ದೇವೆ ಎಂಬುದರ ಕುರಿತು ಹೆಚ್ಚು ಗಮನ ಹರಿಸಲಿದ್ದೇವೆ. ಯಶ್ ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಸರಿಯಾದ ರೀತಿಯ ಸಂದೇಶವನ್ನು ನೀಡಲು ನಾವು ಈ ಅವಕಾಶವನ್ನು ಬಳಸಲು ಬಯಸುತ್ತೇವೆ ಮತ್ತು ಆತ್ಮಸಾಕ್ಷಿಯನ್ನು ಹೊಂದಿರುವ, ಸಮಾನ ಮನಸ್ಕ ಮತ್ತು ದೀರ್ಘ ಕಾಲ ಚಾಲ್ತಿಯಲ್ಲಿರುವ ಬ್ರ್ಯಾಂಡ್‌ಗಳೊಂದಿಗೆ ನಮ್ಮ ಸಮಯ ಮತ್ತು ಬೆವರನ್ನು ಹೂಡಿಕೆ ಮಾಡಲು ಬಯಸುತ್ತೇವೆ’’ ಎಂದು ಅರ್ಜುನ್ ಬ್ಯಾನರ್ಜಿ ತಿಳಿಸಿದ್ದಾರೆ.
ಯಾರು ಏನೇ ವಿಮರ್ಶೆ ನಡೆಸಿದರೂ ಡಾ.ರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಹಾಕಿಕೊಟ್ಟ ನೈತಿಕತೆಯ ಮಾದರಿಯನ್ನು ತಮ್ಮಿಂದಾದ ಮಟ್ಟಿಗಾದರೂ ಮುಂದುವರಿಸುವ ಧ್ಯೇಯ ಯಶ್ ಅವರಲ್ಲಿದೆ ಎನ್ನುವುದನ್ನು ಒಪ್ಪಲೇಬೇಕಾಗಿದೆ. ಇದರೊಂದಿಗೆ ಕೆಜಿಎಫ್ ಚಾಪ್ಟರ್-2 ಸಾವಿರ ಕೋಟಿ ಗಳಿಕೆಯ ಸನಿಹದಲ್ಲಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿಯಾಗಿದೆ.