
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತುಳು ಸಂಸ್ಥೆ ‘ತುಳುವೆರೆಂಕುಲು’. ಅಂದರೆ ತುಳುವರು ನಾವು ಎಂದು ಅರ್ಥ. ಈ ಸಂಸ್ಥೆಯು ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಿದ ‘ತುಳು ಪರ್ಬ’ ಕಾರ್ಯಕ್ರಮದಲ್ಲಿ ಕನ್ನಡ ವಾರ್ತಾವಾಹಿನಿಯ ಇಬ್ಬರು ನಿರೂಪಕಿಯರು ಸನ್ಮಾನಿತರಾದರು.
ನವಿತಾ ಜೈನ್ ನಂಬರ್ ಒನ್
ನಂಬರ್ ಗಳ ಮೂಲಕ ಸ್ಥಾನ ಗುರುತಿಸಲ್ಪಡುವ ಇಂದಿನ ಜಮಾನದಲ್ಲಿ ಕನ್ನಡ ವಾರ್ತಾವಾಹಿನಿಯ ಪಾಲಿಗೆ ನಂಬರ್ ಒನ್ ನಿರೂಪಕಿಯಾಗಿ ಗುರುತಿಸಲ್ಪಡುವ ಪ್ರತಿಭೆ ನವಿತಾಜೈನ್. ಹೀಗೊಂದು ಪ್ರಶಂಸೆಯೊಂದಿಗೆ ಬೆಂಗಳೂರು ತುಳು ಪರ್ಬದಲ್ಲಿ ಸನ್ಮಾನಿತಗೊಂಡವರು ನವಿತಾ ಜೈನ್.

ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ವೃತ್ತಿ ಬದುಕಿನ 14ನೇ ವರ್ಷದಲ್ಲಿರುವ ಸುಂದರಿ ನವಿತಾ. ಅಂದು ಆಂಧ್ರಪ್ರದೇಶದಲ್ಲಿದ್ದ ಈಟಿವಿ ನ್ಯೂಸ್ ಮೂಲಕ ವಾರ್ತಾವಾಚಕಿಯಾಗಿಯೇ ಎಂಟ್ರಿ ನೀಡಿದ ಈ ಕರಾವಳಿಯ ತುಳುವರ ಹುಡುಗಿ ಆನಂತರ ಜನಶ್ರೀ ಮತ್ತು ಸುವರ್ಣ ನ್ಯೂಸ್ ಮೂಲಕವೂ ಹೆಸರಾಗಿದ್ದರು. ಇದೀಗ ಒಂದು ರೀತಿಯಲ್ಲಿ ಮಾತೃಸಂಸ್ಥೆಗೆ ಮರಳಿದಂತೆ, ಕಳೆದ ಐದು ವರ್ಷಗಳಿಂದ ‘ನ್ಯೂಸ್ 18 ಕನ್ನಡ’ದಲ್ಲಿದ್ದಾರೆ. ಇಂದು ನಿರೂಪಕಿಯರು ವಿವಾದಗಳಿಂದ, ಟ್ರೋಲ್ ಗೊಳಗಾಗಿ ಸದ್ದು ಮಾಡುವುದೇ ಹೆಚ್ಚು. ಆದರೆ ಅವರ ನಡುವೆ ಇಷ್ಟು ವರ್ಷಗಳ ವೃತ್ತಿ ಬದುಕಿನಲ್ಲಿ ಯಾವುದೇ ವಿವಾದಗಳಿಲ್ಲದ ಪತ್ರಕರ್ತೆಯಾಗಿ ಗಮನ ಸೆಳಡದ ಕೀರ್ತಿ ನವಿತಾ ಜೈನ್ ಅವರದ್ದು.
ದಕ್ಷಿಣಕನ್ನಡ ಬಂಟ್ವಾಳದ ಪಂಜಿಕಲ್ಲು ಎನ್ನುವಲ್ಲಿ ಜನನ. ತಂದೆ ಸಿಂಹಸೇನ ಇಂದ್ರ. ತಾಯಿ ವಿನೋದಿನಿ. ಇಬ್ಬರೂ ವೃತ್ತಿಯಲ್ಲಿ ಶಿಕ್ಷಕರು. ನವಿತಾ ಮಂಗಳೂರು ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಪದವಿ ಪಡೆದವರು. ಜೊತೆಗೆ ಇಂಡಸ್ಟ್ರಿಯಲ್ ರಿಲೇಶನ್ಸ್ ಮತ್ತು ಪರ್ಸನಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದ್ದಾರೆ. ಕಾಲೇಜ್ ನ ಅಂತಿಮ ವರ್ಷದಲ್ಲಿದ್ದಾಗಲೇ ಮಂಗಳೂರು ಆಕಾಶವಾಣಿಯಲ್ಲಿ ಹವ್ಯಾಸಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದರು ನವಿತಾ. ಬಳಿಕ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಈಟಿವಿ ವಾಹಿನಿಗೆ ಆಯ್ಕೆಯಾಗಿದ್ದರು. ಸಿನಿಮಾ, ಸಾಂಸ್ಕೃತಿಕ ವಿಭಾಗದಲ್ಲಿಯೂ ಆಸಕ್ತಿ ಹೊಂದಿರುವ ನವಿತಾ ‘ಐಸ್ ಕ್ರೀಂ’ ಎನ್ನುವ ತುಳು ಸಿನಿಮಾ ನಿರ್ಮಾಣ ಮಾಡಿದ್ದರು. ಕಾರ್ಕಳ ಮಹಾ ಮಸ್ತಾಕಾಭಿಷೇಕದ ವೇಳೆ ಯುವಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನವಿತಾಗೆ ದೊರಕಿರುವ ಪ್ರಶಸ್ತಿ, ಸನ್ಮಾನಗಳಿಗೆ ಲೆಕ್ಕವಿಲ್ಲ. ತುಳುಪರ್ಬ ವೇದಿಕೆಯಲ್ಲಿ ನವಿತಾಗೆ ನಡೆದ ಸನ್ಮಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಪ್ರತಿನಿಧಿಯಾಗಿ ಸುರೇಂದ್ರ ಜೈನ್ ಉಪಸ್ಥಿತರಿದ್ದು ಶುಭಕೋರಿದರು.
ಯಶೋಧ ಪೂಜಾರಿ ಯಶಸ್ಸು
ತುಳು ಪರ್ಬದ ವೇದಿಕೆಯಲ್ಲಿ ಸನ್ಮಾನಿತೆಯಾದ ಮತ್ತೋರ್ವ ನಿರೂಪಕಿ ಯಶೋಧಾ ಪೂಜಾರಿ. ಪ್ರಸ್ತುತ ಜೀ ಕನ್ನಡ ನ್ಯೂಸ್ ನ ಸಿನಿಮಾ ವಿಭಾಗದಲ್ಲಿ ವೃತ್ತಿನಿರತೆ.

ಯಶೋಧಾ ಪೂಜಾರಿಯವರದ್ದು 8 ವರ್ಷಗಳ ವೃತ್ತಿ ಬದುಕು. 2014ರಲ್ಲಿ ಮಾಧ್ಯಮ ಕ್ಷೇತ್ರ ಪ್ರವೇಶಿಸಿದ ಇವರು, ಬಿಟಿವಿ, ಸುದ್ದಿ ಟಿವಿ, ಪಬ್ಲಿಕ್ ಟಿವಿ, ನ್ಯೂಸ್ ಎಕ್ಸ್ ಕನ್ನಡದಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡವರು.
ಶಾಲಾ ಕಾಲೇಜುಗಳಿಂದಲೇ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪುರಸ್ಕೃತ ಪ್ರತಿಭಾವಂತೆ.
ಕೊಡಗಿನ ಕುಶಾಲನಗರ ಸಮೀಪದ ದೊಡ್ಡತೂರ್ ಗ್ರಾಮದ ಪಿ. ರಾಜು ಮತ್ತು ಶಾಂತಿ ದಂಪತಿಯ ದ್ವಿತೀಯ ಪುತ್ರಿ. ಅಕ್ಕ ಮತ್ತು ತಮ್ಮ ಇದ್ದಾರೆ. ಸಚಿನ್ ಗೌತಮ್ ಜೊತೆಗೆ ವಿವಾಹವಾಗಿದ್ದು ಮಗು ಧನ್ವಿನ್ ಪೂಜಾರಿಗೆ ತಾಯಾಗಿದ್ದಾರೆ.
ಬೆಂಗಳೂರು ತುಳು ಪರ್ಬದ ವೇದಿಕೆಯಲ್ಲಿ ಸನ್ಮಾನಿತೆಯರಾದ ಕನ್ನಡದ ಇಬ್ಬರು ಪ್ರತಿಭಾವಂತೆಯರಿಗೂ ಅಭಿನಂದನೆಗಳು.