ವತ್ಸಲಾ ಪತಿ ಮೋಹನ್ ಇನ್ನಿಲ್ಲ!

ಜನಪ್ರಿಯ ನಟಿ, ನಿರೂಪಕಿ ವತ್ಸಲಾ ಮೋಹನ್ ಪತಿ ಮೋಹನ್ ನಿಧನರಾಗಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಹೃದಯಾಘಾತದಿಂದ ಅಸುನೀಗಿದ್ದಾರೆ.

ಮೋಹನ್ ಅವರು ದಶಕಗಳಿಂದ ದೂರದರ್ಶನ, ಸಿನಿಮಾ ವಿಭಾಗಗಳಲ್ಲಿ ವೃತ್ತಿಯಲ್ಲಿದ್ದರು. ಇಂದು ಸಂಜೆ ಮನೆಯಲ್ಲೇ ಇದ್ದ ಮೋಹನ್ ಬಾತ್ ರೂಮ್ ಗೆಂದು ಹೋದವರು ಹಠಾತ್ತಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ತಾಯಿ ಮಾತ್ರ ಇದ್ದರೆನ್ನಲಾಗಿದೆ. ಇದೀಗ ಮೋಹನ್ ಆಪ್ತರು ಮತ್ತು ಕಲಾಲೋಕದ ಪ್ರಮುಖರು ಮನೆಗೆ ಧಾವಿಸುತ್ತಿದ್ದಾರೆ.

ಮೋಹನ್ ಸಿನಿಮಾ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಪತ್ನಿ ವತ್ಸಲಾ ರಚಿಸಿದ ‘ಸಜ್ಜಾದನಾ ಗಣೇಶ’ ಕೃತಿಯಾಧಾರಿಸಿ ‘ಬೊಂಬೆಯಾಟ’ ಎನ್ನುವ ಸಿನಿಮಾ ಮಾಡಿದ್ದರು. 90 ನಿಮಿಷಗಳ ಈ ಸಿನಿಮಾ 2016ರಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಗಳಿಸಿತ್ತು.

ಇಂಜಿನಿಯರಿಂಗ್ ಓದಿ ಸಿನಿಮಾ ಸೇರಿದವರ ಸಾಲಿಗೆ ಕೆ.ಎನ್.ಮೋಹನ್ ಕುಮಾರ್ ಕೂಡ ಸೇರ್ಪಡೆಯಾಗುತ್ತಾರೆ.
ಬೆಂಗಳೂರಿನ ನ್ಯಾಶನಲ್ ಕಾಲೇಜಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸಿದ್ದರು. ನಿರ್ದೇಶಕನಾಗಿಯೂ ತಮ್ಮ ಪ್ರತಿಭೆ ತೋರಿಸಿದ್ದರು. ಸದಾ ರಂಗ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾಗಲೇ ವತ್ಸಲಾರ ಪರಿಚಯವಾಗಿ ಪ್ರೇಮ ಮೂಡಿತ್ತು. ಆನಂತರದ ದಿನಗಳಲ್ಲಿ ಧಾರಾವಾಹಿಗಳಲ್ಲಿ ಕೆಲಸ, ನಾನಾ ಪತ್ರಿಕೆಗಳ ಪ್ರಕಾಶಕರಾಗಿ,ಬೆಂಗಳೂರಿನ ಮೊದಲ ಕಂಪ್ಯೂಟರ್ ಶಿಕ್ಷಣದ ಕೇಂದ್ರ ಸ್ಥಾಪಕರಾಗಿ ಕೂಡ ಗುರುತಿಸಿಕೊಂಡಿದ್ದರು.
‘ಬೊಂಬೆಯಾಟ’ ಮಾಸ್ಕೋದಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡ ಏಕೈಕ ಭಾರತೀಯ ಚಿತ್ರವಾಗಿತ್ತು.

ಸಾಹಸ ಮನೋಭಾವ ಹೊಂದಿದ್ದ ಮೋಹನ್ ಬುಲೆಟ್ ನಲ್ಲಿ ಲಡಾಕ್ ಪ್ರವಾಸವನ್ನೂ ಮಾಡಿದ್ದರು. ನಾಗಾಭರಣರ ಮೈಸೂರು ಮಲ್ಲಿಗೆ ಚಿತ್ರದ ನಾಯಕನಿಗೆ ಇವರದೇ ದ್ವನಿ. ಈ ಮಳೆಗಾಲದಲ್ಲಿಯೂ ಸಾಹಸದಿಂದ ಪಶ್ಚಿಮ ಘಟ್ಟಗಳನ್ನು ಬುಲೆಟ್ ಬೈಕ್ ನಲ್ಲಿ ಸುತ್ತಾಡಿ ಬಂದಿದ್ದ ಮೋಹನ್, ಎರಡೇ ದಿನಕ್ಕೆ ತೀವ್ರ ಹೃದಯಾಘಾತಕ್ಕೊಳಗಾಗಿದ್ದಾರೆ.

ಮೃತರು ನಿರ್ದೇಶಕ ಮಾತ್ರವಲ್ಲದೆ ಕಲಾಪೋಷಕರಾಗಿಯೂ ಇದ್ದವರು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ವತ್ಸಲಾ ಟಿ ಎನ್ ಸೀತಾರಾಮ್ ಧಾರಾವಾಹಿಗಳ ಮೂಲಕ ಕಲಾವಿದೆಯಾಗಿಯೂ ಜನಪ್ರಿಯರು. ಪುತ್ರಿ ಅನನ್ಯಾ ಮೋಹನ್ ಕೂಡ ಕಲಾವಿದೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ ‘ಕನ್ನಡತಿ’ಯಲ್ಲಿನ ಪಾತ್ರದಿಂದ ಹೆಸರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ವಯಸ್ಸಾಗದೆ ಹೃದಯಾಘಾತಕ್ಕೆ ಒಳಗಾಗುತ್ತಿರುವವರ ಪಟ್ಟಿಗೆ ಮೋಹನ್ ಕೂಡ ಸೇರುವಂತಾಗಿದ್ದು ದುರಂತ.

Recommended For You

Leave a Reply

error: Content is protected !!