ಚಿತ್ರ: ಕಾಂತಾರ
ನಿರ್ದೇಶನ: ರಿಷಬ್ ಶೆಟ್ಟಿ
ನಿರ್ಮಾಣ: ಹೊಂಬಾಳೆ ಫಿಲ್ಮ್ಸ್
ತಾರಾಗಣ: ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್
ಚಿತ್ರದ ಆರಂಭದಲ್ಲಿ ಪುರಾತನ ಕಾಲದ ಹಿನ್ನೆಲೆಯನ್ನು ಕತೆಯ ಹೇಳುವ ಮಾದರಿಯಲ್ಲಿ ತೋರಿಸುತ್ತಾ ಹೋಗಿದ್ದು, ಕತೆಗಿದ್ದ ಹೊಸತನ ಮತ್ತು ತಿರುವು ಚಿತ್ರದ ಪ್ರಥಮ ಆಕರ್ಷಣೆ.
ನಾಯಕ ಪಾತ್ರವಾದ ಶಿವನನ್ನು ಪರಿಚಯಿಸುವ ಮೊದಲು ಶಿವನ ತಂದೆಯಾಗಿ ಕಾಣಿಸಿದ್ದಾರೆ ರಿಷಬ್! ಯಾವ ಬಿಲ್ಡಪ್ ಗಳಿಲ್ಲದೆ ಭೂತಕೋಲ ಕಟ್ಟುವ ಪಂಬದನಾಗಿ ರಿಷಬ್ ನೀಡುವ ಎಂಟ್ರಿಯನ್ನು ಮೆಚ್ಚಲೇಬೇಕು. ಬಳಿಕ ಕಾಡುಬೆಟ್ಟು ಶಿವನಾಗಿ ರಿಷಬ್ ಕೋಣಗಳೊಂದಿಗೆ ಪರದೆಯ ಮೇಲೆ ನೀಡುವ ಪ್ರವೇಶ ಮಾತ್ರ ಅದ್ಭುತ. ಕೋಣಗಳ ಬಾಲ ಹಿಡಿದ ಕಟ್ಟುಮಸ್ತು ಮೈಕಟ್ಟಿನ ಬಲವಂತನಾಗಿ ಭಯಾಶ್ಚರ್ಯ ಸೃಷ್ಟಿಸುತ್ತಾರೆ. ಪಾತ್ರ ಹಳ್ಳಿಯದಾದರೂ, ರಿಷಬ್ ನಿಜ ಜೀವನದಲ್ಲಿ ಇರುವ ಹಾಗೆ ಎಲ್ಲವನ್ನೂ ಸ್ಫೋರ್ಟಿವ್ ಆಗಿ ತೆಗೆದುಕೊಳ್ಳುವ, ವೇಗದ ನಡೆನುಡಿಯ ಯುವಕನ ಪಾತ್ರವನ್ನೇ ನಿಭಾಯಿಸಿದ್ದಾರೆ. ತಂದೆ ದೈವ ನರ್ತಕನಾಗಿರುತ್ತಾನೆ. ಆದರೆ ಜಮೀನ್ದಾರನಿಂದ ದೈವದ ಪಾತ್ರಿಯಾದ ತನಗೆ ಆದ ಅವಮಾನ ಅನುಭವಿಸಲಾಗದೆ ಮಾಯವಾದ ಮಹಾನುಭಾವ. ಆದರೆ ಪುತ್ರ ಶಿವನಿಗೆ ದೈವ ನರ್ತನದ ಬಗ್ಗೆಯೇ ಒಲವಿಲ್ಲ. ‘ನಿನ್ನ ಗಂಡ ಮಾಯವಾದ ಹಾಗೆ ನಾನು ಮಾಯವಾಗಲು ಸಿದ್ಧನಿಲ್ಲ’ ಎಂದು ತಾಯಿಯಲ್ಲಿ ಸಂಭಾಷಣೆ ಒಂದೇ ಸಾಕು ಎರಡು ಪಾತ್ರಗಳ ನಡುವಿನ ವೈರುಧ್ಯ ಅರಿವಾಗಲು.
ಶಿವನ ತಾಯಿಯಾಗಿ ನಟಿಸಿರುವುದು ಮಾನಸಿ ಸುಧೀರ್. ತಾವೇ ಹಾಡುವ ಮಕ್ಕಳ ಹಾಡುಗಳಿಗೆ ಭಾವಾಭಿನಯ ನೀಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವರು ಮಾನಸಿ ಸುಧೀರ್. ಚಿತ್ರದಲ್ಲಿ ನಾಯಕನ ತಾಯಿ ಕಮಲ ಪಾತ್ರದ ಮೂಲಕ ಮಾನಸಿ, ತಮ್ಮೊಳಗಿನ ನಟಿಯ ಶಕ್ತಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಶಿವನ ಪ್ರೇಯಸಿಯಾಗಿ ಸಪ್ತಮಿ ಗೌಡ ಪಾತ್ರಕ್ಕೆ ಜೀವ ತುಂಬಿದಂತೆ ಕಾಣಿಸಿದ್ದಾರೆ. ನಾಯಕನ ಸ್ನೇಹಿತರಲ್ಲೊಬ್ಬನಾಗಿ, ರಾಂಪನ ಪಾತ್ರದಲ್ಲಿ ಪ್ರಕಾಶ್ ತೂಮಿನಾಡು ನಗಿಸುತ್ತಾರೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ 1970ರ ಕಾಲಘಟ್ಟದ ಜಮೀನ್ದಾರ ವಂಶಸ್ಥನಾಗಿ ನಟಿಸಿ ರೆಟ್ರೋ ಶೈಲಿಯ ಪಾತ್ರದಿಂದ ಗಮನ ಸೆಳೆದಿದ್ದಾರೆ. ಜಮೀನ್ದಾರನಾಗಿ ಅಚ್ಯುತ್ ಕುಮಾರ್ ನಟಿಸಿದ್ದಾರೆ.
ಪ್ರತಿಯೊಂದು ಪಾತ್ರಗಳನ್ನು ಆಕರ್ಷಕವಾಗಿ ಮೂಡಿಸಿರುವ ನಿರ್ದೇಶಕರು, ಅದೇ ಕಾರಣದಿಂದ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಆದರೆ ತಮಾಷೆಯ ರೂಪದಲ್ಲಿ ತೋರಿಸಿರುವ ದೃಶ್ಯವೊಂದು ಬಹುಕಾಲ ಕಾಡುತ್ತದೆ. ಉಬ್ಬು ಹಲ್ಲಿನ ಮಹಿಳಾ ಪಾತ್ರವೊಂದನ್ನು ಕೋಣಕ್ಕೆ ಹೋಲಿಸುವಂತೆ ತೋರಿಸಿರುವುದು ಬಾಡಿಶೇಮಿಂಗ್ ಎಂದೇ ಪರಿಗಣಿಸಬಹುದಾಗಿದೆ.
ಆರಂಭ ಉಗ್ರಂ ಸಿನಿಮಾದ ಆರಂಭ ಕಂಡ ಹಾಗೆ ಮೂಡಿ ಬರುವ ಫ್ಲ್ಯಾಶ್ ಬ್ಯಾಕ್ ಒಂದು ಸಣ್ಣ ರೋಮಾಂಚನ. ಹೋಲಿಕೆಯೇ ಇರದ ಕತೆ ಎನ್ನುವಂತೆ ಕಂಡರೂ ದೃಶ್ಯದ ಜೋಡಿಸುವಿಕೆಯಲ್ಲಿ ಮಲಯಾಳಂ ಚಿತ್ರಗಳ ದಟ್ಟ ಛಾಯೆ ಕಾಣಬಹುದಾಗಿದೆ. ಜೊತೆಗೆ ಸ್ವತಃ ಮೋಹನ್ ಲಾಲ್ ಅಭಿಮಾನಿಯಾಗಿರುವ ರಿಷಬ್ ಅಭಿನಯ ಶೈಲಿಯಲ್ಲೂ ಒಂದೆರಡು ಕಡೆ ಮೋಹನ್ ಲಾಲ್ ಬಂದು ಹೋಗುತ್ತಾರೆ. ಚಿತ್ರದ ಕೊನೆಯಲ್ಲಿ ಪಂಜಿನ ಹೊಡೆದಾಟ ಶುರುವಾದಾಗ ಅತಿಯಾದಂತೆ ಕಾಣಿಸದಿರದು. ಆದರೆ ಅದನ್ನು ಮರೆಸುವಂತೆ ಕ್ಲೈಮ್ಯಾಕ್ಸ್ ಸನ್ನಿವೇಶ ಇದೆ. ಅನ್ನಿಯನ್ ಚಿತ್ರದಲ್ಲಿ ಅಂಬಿಯೊಳಗೆ ಅನ್ನಿಯನ್ ಸೇರಿಕೊಂಡಂತೆ, ಪಿತಾಮಹನ್ ಚಿತ್ರದ ವಿಕ್ರಮ್ ರೌದ್ರಾವತಾರದಂತೆ ಗೋಚರಿಸಿದರೆ ಅಚ್ಚರಿ ಏನಿಲ್ಲ. ಈ ದೃಶ್ಯದಲ್ಲಿ ರಿಷಬ್ ಮೈಯಲ್ಲಿ ಭೂತ ಪ್ರವೇಶವಾಗಿತ್ತೋ ಇಲ್ಲವೋ, ಪ್ರತಿಪ್ರೇಕ್ಷಕರ ಮೈಮರೆಸುವ ಸಂದರ್ಭ ಇದಾಗುವುದರಲ್ಲಿ ಸಂದೇಹವಿಲ್ಲ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್.
ಎಲ್ಲಕ್ಕಿಂತ ಮುಖ್ಯವಾಗಿ ಸಿನಿಮಾದಲ್ಲಿ ಮಂಗಳೂರು ಕರಾವಳಿಯ ಭೂತಕೋಲ ಎನ್ನುವ ಜಾನಪದ ಕಲೆಗೆ, ಆರಾಧನೆಗೆ ದೊಡ್ಡ ಮಟ್ಟದ ಫೋಕಸ್ ದೊರಕಿದೆ. ಈ ಕಾರಣಕ್ಕಾಗಿ ಇದು ಕನ್ನಡಿಗರ ಹೆಮ್ಮೆಯ ಸಿನಿಮಾ ಎಂದು ಧೈರ್ಯದಿಂದ ಹೇಳಬಹುದು.