ಈ ಬಾರಿ ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾದ ಆಲ್ಬಂ ಹಾಡು ‘ಸೌಂದರ್ಯ ರಾಕ್ಷಸಿ’. ಸದ್ಯದ ಆಕರ್ಷಣೆಯಾಗಿರುವ ಈ ಪ್ರೇಮಗೀತೆಗೆ 777 ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಪ್ರಶಂಸೆ ದೊರಕಿದ್ದು, ತಂಡಕ್ಕೆ ಹೊಸ ಹುರುಪು ತಂದುಕೊಟ್ಟಿದೆ.
ಗುಣಮಟ್ಟ ತುಂಬಿರುವ ಗೀತೆ
“ಹಾಡು ನೋಡಿದೊಡನೆ ತುಂಬ ಇಷ್ಟವಾಯಿತು. ಕಲಾವಿದರ ನಟನೆ ಮೆಚ್ಚುವಂತಿದೆ. ಸಂಗೀತ ಮತ್ತು ಮೇಕಿಂಗ್ ನಲ್ಲಿನ ಕ್ವಾಲಿಟಿ ನೋಡಿದರೆ ಇದು ಹೊಸಬರ ತಂಡ ಎಂದು ಹೇಳೋದು ಕಷ್ಟ. ಈ ಪ್ರತಿಭೆಗಳನ್ನು ಆದಷ್ಟು ಬೇಗ ಚಿತ್ರರಂಗದಲ್ಲಿ ನೋಡುವಂತಾಗಲಿ” ಎಂದು ಕಿರಣ್ ರಾಜ್ ಹಾರೈಸಿದ್ದಾರೆ. ‘777 ಚಾರ್ಲಿ’ ಎನ್ನುವ ವರ್ಷದ ಸೂಪರ್ ಹಿಟ್ ಚಿತ್ರದ ಬಳಿಕ ಹೊಸ ಪ್ರಾಜೆಕ್ಟ್ ತಯಾರಿಯಲ್ಲಿರುವ ಕಿರಣ್ ರಾಜ್, ಸಂದೀಪ್ ದೇವಾಡಿಗ ಮತ್ತು ತಂಡಕ್ಕೆ ಶುಭ ಕೋರಿದ್ದಾರೆ.
ರೀಲ್ಸ್ ನಿಂದ ರಿಯಲ್ ಸಾಂಗ್ ತನಕ
ಸಾಮಾಜಿಕ ಜಾಲತಾಣದಲ್ಲಿ ಕ್ಲಾಸ್ ಆಗಿ ರೀಲ್ಸ್ ಮಾಡುವ ಮೂಲಕ ಗಮನ ಸೆಳೆದವರು ಸಂದೀಪ್ ದೇವಾಡಿಗ ಮತ್ತು ಸ್ನೇಹಿತರು. ರೀಲ್ಸ್ ಅಂದರೆ ಹುಚ್ಚಾಟ ಎನ್ನುವ ಮಟ್ಟ ತಲುಪಿರುವಾಗ ತೊಂಬತ್ತರ ದಶಕದ ಸುಮಧುರ ಗೀತೆಗಳಿಗೆ ಆಕರ್ಷಕ ಹೆಜ್ಜೆ ಹಾಕಿ ಗಮನ ಸೆಳೆದಿದ್ದ ಸ್ನೇಹಿತರ ಹೊಸ ಪ್ರಯೋಗವೇ ‘ಸೌಂದರ್ಯ ರಾಕ್ಷಸಿ’. ಹಾಡಿನ ಶೀರ್ಷಿಕೆ ಕೇಳಿ ವಿಚಿತ್ರ ಅನಿಸಬಹುದು. ಆದರೆ ಸೌಂದರ್ಯವೊಂದೇ ಪ್ರೇಮ ಎಂದುಕೊಂಡ ಯುವ ಸಮೂಹಕ್ಕೆ ಒಂದು ಸುಂದರ ಸಂದೇಶವನ್ನು ಈ ಹಾಡಿನ ಮೂಲಕ ನೀಡಲಾಗಿದೆ.
ಈ ಹಾಡಿಗೆ ತುಳುನಾಡಿನ ಸೋನು ನಿಗಮ್ ಖ್ಯಾತಿಯ ಶಮೀರ್ ಮುಡಿಪು ರಾಗ ಸಂಯೋಜಿಸಿ ಹಾಡಿದ್ದಾರೆ. ಯೋಗೇಶ್ ಎ ಎನ್ ಅಡೆಕಲಕಟ್ಟೆ ಹಾಡು ರಚಿಸಿದ್ದಾರೆ. ಶಮೀರ್ ಜೊತೆಗೆ ಗಾಯಕಿ ಮಲ್ಲಿಕಾ ಮಟ್ಟಿ ಧ್ವನಿ ಸೇರಿಸಿದ್ದಾರೆ. ರಚಿನ್ ಶೆಟ್ಟಿ ಹಾಗೂ ಚಾಣಕ್ಯ ಅವರ ಛಾಯಾಗ್ರಹಣವಿದೆ. ಚಾಣಕ್ಯ ಅವರೇ ಸಂಕಲನವನ್ನು ನಿರ್ವಹಿಸಿದ್ದಾರೆ. ಸಂದೀಪ್ ದೇವಾಡಿಗ, ಮನೋಹರ್ ಆರ್ ಬ್ರಹ್ಮಾವರ್, ಪೂಜಾ ಸನಿ, ಅನುಪ ಸತೀಶ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಮನೋಹರ್ ಮತ್ತು ಸಂದೀಪ್ ಸೇರಿಕೊಂಡು ಈ ಹಾಡಿನ ಕತೆ, ಚಿತ್ರಕತೆ ನೃತ್ಯ ನಿರ್ದೇಶನ ಮಾಡಿದ್ದಾರೆ.