ಹಿರಿಯ ನಟ ಲೋಹಿತಾಶ್ವ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ವಿಧಿವಶರಾಗಿದ್ದಾರೆ. ಸಿನಿಮಾರಂಗದಲ್ಲಿ ಮೂರು ದಶಕಗಳ ಕಾಲ ಸಕ್ರಿಯರಾಗಿದ್ದ ಲೋಹಿತಾಶ್ವ, ಪೊಲೀಸ್ ಮತ್ತು ರಾಜಕಾರಣಿಯ ಪಾತ್ರಗಳಿಂದ ಜನಪ್ರಿಯರು. ಎಂಬತ್ತರ ದಶಕದಿಂದ ಸಿನಿಮಾ ನಟನೆ ಶುರು ಮಾಡಿದ ಇವರು ಇದುವರೆಗೆ ಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಗಂಭೀರವಾದ ನಟನೆ ಮತ್ತು ಕಂಚಿನಂಥ ಕಂಠದ ಮೂಲಕ ಗುರುತಿಸಿಕೊಂಡ ನಟ ಲೋಹಿತಾಶ್ವ. ಪುತ್ರ ಶರತ್ ಲೋಹಿತಾಶ್ವ ಕೂಡ ಅದೇ ಕಂಠದಿಂದ ಜನಪ್ರಿಯರಾಗಿದ್ದಾರೆ. ಲೋಹಿತಾಶ್ವರಿಗೆ ಮೂವರು ಮಕ್ಕಳು. ಎರಡನೆಯ ಪುತ್ರ ರಾಹುಲ್ ಮಲ್ಟಿಮೀಡಿಯ ವಿಭಾಗದಲ್ಲಿ ಪರಿಣಿತರು. ಮಗಳು ವಿನಯ ಇಂಗ್ಲಿಷ್ ಲೆಕ್ಚರರ್ ಆಗಿದ್ದಾರೆ. ಪತ್ನಿ ವತ್ಸಲ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಲೋಹಿತಾಶ್ವ 33 ವರ್ಷಗಳ ಕಾಲ ಇಂಗ್ಲಿಷ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದವರು. ಲೋಹಿತಾಶ್ವ ಅವರ ಈ ಸೇವೆಯನ್ನು ಗಮನಿಸಿಯೇ ಈ ಬಾರಿ ಶಿಕ್ಷಕರ ದಿನಾಚರಣೆಯಂದು ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಸನ್ಮಾನ ಮಾಡಿ ಗೌರವಿಸಿತ್ತು. ಆದರೆ ಶಾಲಾ ದಿನಗಳಲ್ಲೇ ರಂಗಭೂಮಿಯ ಮೇಲೆ ಮೂಡಿದ್ದ ಆಸಕ್ತಿ ಇವರನ್ನು ಒಬ್ಬ ಯಶಸ್ವಿ ನಟರನ್ನಾಗಿಸಿತ್ತು. ಇವರು ಕವಿ ಗೋಪಾಲಕೃಷ್ಣ ಅಡಿಗರ ಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಯಾಗಿದ್ದಾಗ ಇವರ ಉತ್ತಮ ಗುಣನಡತೆಯನ್ನು ಕಂಡು ಅಲ್ಲಿಗೆ ಸ್ವಾಮಿಯಾಗಿಸುವ ಪ್ರಯತ್ನವೂ ನಡೆದಿದ್ದನ್ನು ಲೋಹಿತಾಶ್ವ ನೆನಪಿಸಿಕೊಳ್ಳುತ್ತಿದ್ದರು.
ನಾಟಕಗಳಲ್ಲಿ ಆಸಕ್ತರಾಗಿದ್ದ ಇವರು, ‘ಸಮುದಾಯ’ ರಂಗ ತಂಡದ ಮೂಲಕ ವೃತ್ತಿರಂಗಭೂಮಿ ಪ್ರವೇಶ ಮಾಡಿದರು. ಹುತ್ತವ ಬಡಿದರೆ, ಕತ್ತಲೆಯ ದಾರಿ ದೂರ, ಕುಬಿ ಮತ್ತು ಇಯಾಲ ಮೊದಲಾದವು ಇವರ ಜನಪ್ರಿಯ ನಾಟಕಗಳು. ತುಮಕೂರಲ್ಲಿ ಸಮುದಾಯ ರಂಗತಂಡದ ಸ್ಥಾಪಕ ಅಧ್ಯಕ್ಷರಾಗಿಯೂ ಲೋಹಿತಾಶ್ವ ಗುರುತಿಸಿಕೊಂಡರು. ಒಮ್ಮೆ ಪಾತ್ರ ಮಾಡಬೇಕಿದ್ದ 5 ಮಂದಿ ಕಲಾವಿದರು ಅಪಘಾತಕ್ಕೊಳಗಾದಾಗ, ತಾವೇ ಆ ಐದು ಪಾತ್ರಗಳಿಗೆ ಜೀವ ನೀಡಿ ಒಬ್ಬರೇ 6ಪಾತ್ರಗಳನ್ನು ನಿಭಾಯಿಸಿದ್ದರು.
ಲೋಹಿತಾಶ್ವ ಅವರು ನಾಟಕದ ನಟನೆ ನೋಡಿಯೇ ತಮ್ಮ ಸಿನಿಮಾದಲ್ಲೊಂದು ಪಾತ್ರ ಕೊಟ್ಟವರು ಶಂಕರನಾಗ್.
ಗೀತ ಸಿನಿಮಾದಲ್ಲಿ ಲೋಹಿತಾಶ್ವ ಅವರಿಗೆ ಚಿತ್ರರಂಗದಲ್ಲಿ ಗುರುತಿಸುವಂಥ ಪಾತ್ರ ಸಿಕ್ಕಿತ್ತು. ರೆಬೆಲ್ಸ್ಟಾರ್ ಅಂಬರೀಷ್ ನಟನೆಯ ಗಜೇಂದ್ರದ ಮುಖ್ಯಮಂತ್ರಿ ಪಾತ್ರಕ್ಕೆ ಚಿತ್ರಮಂದಿರಲ್ಲಿ ಪ್ರೇಕ್ಷಕರ ಚಪ್ಪಾಳೆ ಲಭಿಸಿತ್ತು. ಗಜೇಂದ್ರದ ಬಳಿಕ ಸುಮಾರು 40 ಚಿತ್ರಗಳಲ್ಲಿ ಮುಖ್ಯಮಂತ್ರಿ ಪಾತ್ರವನ್ನೇ ಮಾಡಬೇಕಾಯಿತು.
ಜಯಂತಿ ನಟನೆಯ ‘ಧರ್ಮ ದಾರಿ ತಪ್ಪಿತು’ ಚಿತ್ರದಲ್ಲಿ ಲೋಹಿತಾಶ್ವ ಡೆಪ್ಯುಟಿ ಕಮಿಷನರ್ ಪಾತ್ರ ಮಾಡಿದ್ದರು. ಅದರ ಜನಪ್ರಿಯತೆಯಿಂದಾಗಿ ಲೋಹಿತಾಶ್ವರಿಗೆ ಹೆಚ್ಚು ಪೊಲೀಸ್ ಅಧಿಕಾರಿಯ ಪಾತ್ರಗಳೇ ದೊರಕುತ್ತಿದ್ದವು.
ಸಿನಿಮಾರಂಗದಲ್ಲಿ ತಮಗೆ ವೈವಿಧ್ಯಮಯ ಪಾತ್ರಗಳು ಸಿಗದೆ, ರಾಜಕಾರಣಿ ಮತ್ತು ಪೊಲೀಸ್ ಪಾತ್ರಕ್ಕೆ ಸೀಮಿತಗೊಂಡಿದ್ದಕ್ಕೆ ಲೋಹಿತಾಶ್ವ ಬೇಸರಗೊಂಡಿದ್ದರು.
‘ಅಕ್ಕಡಿ ಸಾಲು’ ಎನ್ನುವುದು ಲೋಹಿತಾಶ್ವ ಅವರ ಆತ್ಮಕಥಾ ಪುಸ್ತಕ. ಲೋಹಿತಾಶ್ವ ಅವರಿಗೆ ಪೌರಾಣಿಕ ಪಾತ್ರ ಮಾಡುವ ಆಕಾಂಕ್ಷೆ ಇತ್ತು. ಆದರೆ ಕೊನೆಯವರೆಗೂ ಅಂಥ ಅವಕಾಶ ಸಿಗಲೇ ಇಲ್ಲ. ಆದರೆ ತಮ್ಮ ಪುತ್ರ ಶರತ್ ಲೋಹಿತಾಶ್ವ ವಿಲನ್ ಚಿತ್ರದಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿದ್ದಕ್ಕೆ ಖುಷಿ ಪಟ್ಟಿದ್ದರು.
ರಂಗಭೂಮಿ, ಸಿನಿಮಾ ಮಾತ್ರವಲ್ಲ, ಕಿರುತೆರೆಯಲ್ಲಿಯೂ ಲೋಹಿತಾಶ್ವ ಗುರುತಿಸಿಕೊಂಡಿದ್ದರು. ಎಸ್ ಎಲ್ ಭೈರಪ್ಪನವರ ಗೃಹಭಂಗ ಕಾದಂಬರಿಯನ್ನು ಗಿರೀಶ್ ಕಾಸರವಳ್ಳಿಯವರು ಧಾರಾವಾಹಿ ಮಾಡಿದಾಗ, ಕಂಠಿ ಜೋಯಿಸ ಪಾತ್ರವನ್ನು ಲೋಹಿತಾಶ್ವ ಅವರು ನಿಭಾಯಿಸಿದ್ದರು. ಪಾತ್ರಕ್ಕೆ ಗಿರೀಶ್ ಕಾರ್ನಾಡ್, ಭೈರಪ್ಪನವರಿಂದಲೂ ಮೆಚ್ಚುಗೆ ಸಿಕ್ಕಿತ್ತು.
ಇವರದು ಬಹಳ ದೊಡ್ಡ ಕುಟುಂಬ. ತಂದೆ ತಾಯಿಯ 14 ಮಂದಿ ಮಕ್ಕಳಲ್ಲಿ ಲೋಹಿತಾಶ್ವ 7ನೇ ಪುತ್ರ.
5ಜನ ಅಕ್ಕ ಮತ್ತು 5 ಜನ ತಂಗಿಯರು, ಒಬ್ಬ ಅಣ್ಣ ಮತ್ತು ಇಬ್ಬರು ತಮ್ಮಂದಿರು ಇವರ ಒಡ ಹುಟ್ಟಿದವರು. ಒಟ್ಟು ಕುಟುಂಬದವರು ಸೇರಿದಾಗ 240 ಮಂದಿ ಆಗುತ್ತೇವೆ ಎಂದು ಲೋಹಿತಾಶ್ವ ಹೇಳುತ್ತಿದ್ದರು. ಇಂದು ಇಡೀ ಕರ್ನಾಟಕವೇ ಇವರ ಕುಟುಂಬವಾಗಿ ಕಣ್ಣೀರು ಹಾಕಿದೆ.