ಮಾಯಾಮೃಗ ಧಾರಾವಾಹಿ 23 ವರ್ಷಗಳ ಹಿಂದೆ ಕನ್ನಡ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿಸಿತ್ತು. 1998ರಲ್ಲಿ ಬೆಂಗಳೂರು ದೂರದರ್ಶನದ ಮೂಲಕ ರಾಜ್ಯದ ಮನೆಮಾತಾಗಿದ್ದ ಈ ಧಾರಾವಾಹಿಯ ಎರಡನೇ ಭಾಗ, ‘ಮತ್ತೆ ಮಾಯಾಮೃಗ’ ಹೆಸರಿನಲ್ಲಿ ಈ ವರ್ಷ ಅಕ್ಟೋಬರ್ 31ರಿಂದ ಸಿರಿಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಪ್ರತಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9ಗಂಟೆಯಿಂದ 9.30ರ ತನಕ ಸಿರಿಕನ್ನಡ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ.
(22 ವರ್ಷಗಳ ಬಳಿಕ ಆರಂಭವಾಗಿರುವ ಈ ಧಾರಾವಾಹಿಯಲ್ಲಿ ಮೊದಲ ಭಾಗದಲ್ಲಿ ನಟಿಸಿದ ಪ್ರಮುಖ ಕಲಾವಿದರು ಅದೇ ಪಾತ್ರವನ್ನು ಮುಂದುವರಿಸಿದ್ದಾರೆ. ಪರದೆಯ ಮೇಲೆ ಇದು 25 ವರ್ಷಗಳ ಬಳಿಕದ ಕತೆಯಾಗಿ ಮೂಡಿ ಬರುತ್ತಿದೆ.)
ವಕೀಲೆಯಾಗಿದ್ದ ಮಾಳವಿಕಾ ವರ್ಷಗಳ ಬಳಿಕ ವಿದೇಶದಿಂದ ಮಗಳು ಪೂರ್ವಿ(ಮೇಧ ವಿದ್ಯಾಭೂಷಣ್) ಜೊತೆಗೆ ಮರಳುತ್ತಾಳೆ. 14 ವರ್ಷಗಳ ಬಳಿಕ ಭೇಟಿಯಾಗುವ ವಕೀಲರಾದ ಶ್ರೀನಿವಾಸ್ ಮತ್ತು ನ್ಯಾಯಾಧೀಶ ಸ್ನೇಹಿತರು ಮಾಳವಿಕಾರನ್ನು ಅತಿಥಿಗೃಹಕ್ಕೆ ಸ್ವಾಗತಿಸುತ್ತಾರೆ.
ಮಾಳವಿಕಾ UNESCOನಲ್ಲಿ ವುಮನ್ ಎಂಪವರ್ಮೆಂಟ್ ಕಮಿಟಿಗೆ ಕೊಆರ್ಡಿನೇಟರ್ ಆಗಿರುತ್ತಾರೆ.
ಮಗಳು ಪೂರ್ವಿ ಅಲ್ಲೇ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಇಂಜಿನಿಯರ್ ಆಗಿ ವೃತ್ತಿಯಲ್ಲಿರುತ್ತಾಳೆ.
ವಕೀಲ ಶ್ರೀನಿವಾಸ್ ಮತ್ತು ತಂಡದ ಜೊತೆಗೆ ತಿಂಡಿ ತಿಂದು ಮಾತುಕತೆ ನಡೆಯುತ್ತದೆ. ಅಲ್ಲಿಗೆ ಅಂದು ಮಿನಿಸ್ಟರ್ ಆಗಿದ್ದ ಬಸವಕೃಷ್ಣ ದೇಸಾಯಿ (ಗುರುಮೂರ್ತಿ)ಯ ಆಗಮನವಾಗುತ್ತದೆ. ಅವರು ಮಾಳವಿಕಾ ಪತಿ ಕೃಷ್ಣಪ್ರಸಾದ್ (ಅವಿನಾಶ್) ಬಗ್ಗೆ ವಿಚಾರಿಸುತ್ತಾರೆ. ಮಗಳು ಪೂರ್ವಿಯ ಮದುವೆ ಆಗಿದೆಯಾ ಎಂದು ಅವರು ವಿಚಾರಿಸಿದಾಗ ಮದುವೆ ವಿಚಾರಕ್ಕೇನೆ ಭಾರತಕ್ಕೆ ಬಂದೆ ಎನ್ನುತ್ತಾರೆ ಮಾಳವಿಕಾ. ಆದರೆ ತನ್ನ ಮದುವೆ ಬಗ್ಗೆ ಹೀಗೆ ಸಾರ್ವಜನಿಕ ಚರ್ಚೆ ಇಷ್ಟವಿಲ್ಲ ಎಂದು ತಿಂಡಿ ಅರ್ಧದಲ್ಲೇ ಬಿಟ್ಟು ಒಳಗೆ ನಡೆಯುತ್ತಾಳೆ ಪೂರ್ವಿ.
ಬೃಂದಾ (ಮಂಜು ಭಾಷಿಣಿ) ಮಗಳು ಮಹತಿ(ನಿಕಿತಾ ದೋರ್ತೋಡಿ) ಜೊತೆಗೆ ಮಲ್ಲಿಗೆ ಪುರ ಎನ್ನುವ ಊರಿಗೆ ಬರುತ್ತಾಳೆ.
ಮಗಳು ಮಹತಿ MBBS ಮಗಿಸಿರುತ್ತಾಳೆ. ಮಲ್ಲಿಗೆ ಪುರದಲ್ಲಿ ಒಂದು ವರ್ಷ ಕೆಲಸ ಮಾಡುವಂತೆ ಸರ್ಕಾರ ಆದೇಶ ಮಾಡಿರುತ್ತದೆ. ತಮಗೆ ಇಬ್ಬರಿಗೂ ಒಂದು ಮನೆ ಬಾಡಿಗೆಗೆ ಬೇಕಿತ್ತು ಎಂದು ಮಂಜಪ್ಪ (ಶಂಕರ್ ಅಶ್ವತ್ಥ್) ಎನ್ನುವ ವ್ಯಕ್ತಿಯ ಮನೆಗೆ ಬಂದು ವಿಚಾರಿಸುತ್ತಾಳೆ.
ಬೃಂದಾ ಶಿಕ್ಷಕಿಯಾಗಿದ್ದವಳು, ಇದೀಗ ಮನೆ ಪಾಠ ಮಾಡುವುದಾಗಿ ಅರಿತಾಗ ಮಂಜಪ್ಪ ಖುಷಿಯಾಗುತ್ತಾರೆ. ಪತ್ನಿ ರಾಜಮ್ಮ(ಮಧುಮತಿ)ನನ್ನು ಕರೆದು ಬೃಂದ ಮತ್ತು ಮಗಳಿಗೆ ಚಹಾ ಕೊಡುವಂತೆ ಹೇಳುತ್ತಾರೆ. ಜೊತೆಗೆ ಬೃಂದಾಗೆ ಒಂದು ಆಫರ್ ನೀಡುತ್ತಾರೆ.
ಊರಿಗೊಂದು ಶಾಲೆ ನಡೆಸುವ ತಮ್ಮ ಯೋಜನೆಗೆ ಒತ್ತಾಸೆಯಾಗಿ ನಿಂತರೆ ಅಡ್ವಾನ್ಸ್, ಬಾಡಿಗೆ ಪಡೆಯದೆ ಮನೆ ನೀಡುವುದಾಗಿ ಹೇಳುತ್ತಾರೆ. ಮಹತಿಗೂ ತಾಯಿ ಶಿಕ್ಷಕಿಯಾಗಿ ಮುಂದುವರಿಯುವುದು ಇಷ್ಟವಾಗಿರುತ್ತದೆ. ಹಾಗಾಗಿ ಬೃಂದಾ ಈ ಆಫರ್ ಒಪ್ಪುತ್ತಾಳೆ.
ಶ್ಯಾಮ (ವಿಕ್ರಂ ಸೂರಿ) ತನ್ನ ಪತ್ನಿ ನಿರ್ಮಲ (ದೀಪ ಶ್ರೀ ಹರೀಶ್) ಜೊತೆಗೆ ಶಾಸ್ತ್ರಿಗಳ (ದತ್ತಣ್ಣ) ಮನೆಗೆ ಬರುತ್ತಾರೆ. ಮದುವೆಯಾಗಿ ಮನೆ ಬಿಟ್ಟು ಹೋದ ಬಳಿಕ ಮೊದಲ ಬಾರಿಗೆ ಶ್ಯಾಮ ವಾಪಾಸಾಗಿರುತ್ತಾನೆ. ಶ್ಯಾಮನ ಪತ್ನಿ ನಿರ್ಮಲಾ ತಂದ ಉಡುಗೊರೆಯ ಚೀಲವನ್ನು ಕೈಗಳಿಂದ ಮುಟ್ಟದೇ ಅಲ್ಲೇ ಇಡುವಂತೆ ಹೇಳುತ್ತಾರೆ ತಾಯಿ ಕಮಲಮ್ಮ(ಲಕ್ಷ್ಮೀ ಚಂದ್ರಶೇಖರ್).
ತಂದೆಯ ಬಗ್ಗೆ ವಿಚಾರಿಸಿದಾಗ ದೇವಸ್ಥಾನಕ್ಕೆ ಹೋಗಿರುವುದಾಗಿ ಹೇಳುತ್ತಾರೆ. ತಂದೆಗೆ 80 ವರ್ಷವಾಯ್ತು. ಅವರಿಗೆ ಸಹಸ್ರ ಚಂದ್ರದರ್ಶನ ಶಾಂತಿ ಮಾಡಿಸುವ ಆಸೆ ಇದೆ ಎನ್ನುತ್ತಾನೆ ಶ್ಯಾಮ. ತಂದೆಯ ಮನದ ಶಾಂತಿ ಕೆಡಿಸಿದ ನೀನೇ ಈ ಕಾರ್ಯಕ್ರಮ ಮಾಡಬಯಸುವುದು ಎಷ್ಟೊಂದು ವಿಪರ್ಯಾಸ ಎನ್ನುತ್ತಾರೆ ಕಮಲಮ್ಮ. ಈ ಬಗ್ಗೆ ತಂದೆಗೆ ತಿಳಿಸಲು, ದೇವಸ್ಥಾನಕ್ಕೆ ಹೋಗಿ ಅಲ್ಲೇ ಮಾತನಾಡುವುದಾಗಿ ಹೊರಡುತ್ತಾನೆ ಶ್ಯಾಮ.
ಮನೆಯಲ್ಲೇ ಉಳಿದುಕೊಂಡ ನಿರ್ಮಲಾಳಲ್ಲಿ ಮಕ್ಕಳ ಬಗ್ಗೆ ವಿಚಾರಿಸುತ್ತಾರೆ ಕಮಲಮ್ಮ. ತಮಗೆ ಮಕ್ಕಳಿಲ್ಲವೆಂದು ನಿರ್ಮಲಾ ಹೇಳಿದಾಗ ಕಮಲಮ್ಮ ಅಚ್ಚರಿಗೊಳ್ಳುತ್ತಾರೆ. ನಿಮ್ಮ ಮನಸು ನೋಯಿಸಿ ಮದುವೆಯಾಗಿದ್ದಕ್ಕಾಗಿ ಈ ಶಿಕ್ಷೆ ದೇವರು ಕೊಟ್ಟರೆಂದು ಅಳುತ್ತಾ ಕಮಲಮ್ಮನ ಕಾಲಿಗೆ ಬೀಳುತ್ತಾಳೆ ನಿರ್ಮಲಾ.