ಯಕ್ಷಗಾನರಂಗದಲ್ಲಿ ದಿಗ್ಗಜರಾಗಿ ಗುರುತಿಸಿಕೊಂಡವರು ಕುಂಬ್ಳೆ ಸುಂದರರಾವ್. ರಾಜಕೀಯ ಕ್ಷೇತ್ರದಲ್ಲಿಯೂ ಹೆಸರಾದ ಅವರು ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 88 ವರ್ಷವಾಗಿತ್ತು.
ತೆಂಕುತಿಟ್ಟು ಯಕ್ಷಗಾನದಲ್ಲಿ ಜೀವಂತ ದಂತಕತೆಯಾಗಿ ಹೆಸರಾಗಿದ್ದವರು ಕುಂಬ್ಳೆ ಸುಂದರರಾವ್. ಅದರಲ್ಲಿಯೂ ತಾಳಮದ್ದಳೆಯಲ್ಲಿ ಶ್ರೀಕೃಷ್ಣ, ಮಹಾವಿಷ್ಣು ಮೊದಲಾದ ಪಾತ್ರಗಳ ಮೂಲಕ ಇವರ ವಾಕ್ಚಾತುರ್ಯಕ್ಕೆ ಮರುಳಾಗದವರಿಲ್ಲ. ಮೂಲತಃ ಕೇರಳದ ಕಾಸರಗೋಡಿನ ಕುಂಬ್ಳೆಯವರಾದ ಇವರು ಮಂಗಳೂರಿನಲ್ಲಿ ವಾಸವಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುಂದರರಾವ್ ಇಂದು ಮುಂಜಾನೆ ಸಾವಿಗೀಡಾದರು. ಅವರ ಪಾರ್ಥಿವ ಶರೀರವನ್ನು ಪಂಪವೆಲ್ ನ ಸ್ವಗೃಹದಲ್ಲಿ ಇರಿಸಲಾಗಿದ್ದು ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ.
ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಹೆಸರು ಮಾಡಿದ್ದರು. ಯಕ್ಷರಂಗದಲ್ಲಿನ ತಮ್ಮ ಸೇವೆಗಾಗಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿ ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ ಪ್ರಶಸ್ತಿ ಪುರಸ್ಕೃತರಾಗಿದ್ದರು. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ವರ್ಷಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶೇಣಿ ಗೋಪಾಲಕೃಷ್ಣ ಭಟ್ ಪ್ರಶಸ್ತಿ ಸನ್ಮಾನಿಸಿತ್ತು.
ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸುಂದರರಾವ್ ರಾಜ್ಯ ವಿಧಾನಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಸುರತ್ಕಲ್ ವಿಧಾನಸಭಾ ಕ್ಷೇತ್ರದಿಂದ 1994ರಿಂದ 1999ರ ಅವಧಿಗೆ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಮೃತರು ಪತ್ನಿ ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.