ಚಿತ್ರ : ವೇದ
ತಾರಾಗಣ: ಶಿವರಾಜ್ ಕುಮಾರ್, ಗಾನವಿ ಲಕ್ಷ್ಮಣ್
ನಿರ್ದೇಶಕ: ಎ ಹರ್ಷ
ನಿರ್ಮಾಣ: ಗೀತಾ ಪ್ರೊಡಕ್ಷನ್ಸ್
ಅತ್ಯಾಚಾರದ ವಿರುದ್ಧ ಸೆಟೆದು ನಿಂತು ಸೇಡು ತೀರಿಸುವ ಸಿನಿಮಾಗಳು ಸಾಕಷ್ಟು ಬಂದಿವೆ. ಆದರೆ ತಂದೆ ಮತ್ತು ಮಗಳು ಒಂದಾಗಿ ನಡೆಸುವ ಅಪರೂಪದ ಹೋರಾಟವೇ ವೇದ.
ಕತೆ ನಡೆಯುವುದು 1980ರ ಕಾಲಘಟ್ಟದಲ್ಲಿ. ಜೈಲಿನಿಂದ ಬಿಡುಗಡೆಯಾಗುವ ಟೀನೇಜ್ ಹುಡುಗಿ ಕನಕ, ಆಕೆಯನ್ನು ಎದುರುಗೊಳ್ಳುವ ತಂದೆ ವೇದ ಇಬ್ಬರೂ ಸೇರಿ ಊರೂರು ಸುತ್ತಿ ಆಯ್ದ ವ್ಯಕ್ತಿಗಳನ್ನು ಹೊಡೆದು ಕೊಲ್ಲುತ್ತಿರುತ್ತಾರೆ. ನಿರ್ದೇಶಕರು ಕತೆಯ ಹಿನ್ನೆಲೆ ಹೇಳದ ಕಾರಣ ಮಧ್ಯಂತರದ ತನಕ ದಂಡುಪಾಳ್ಯದ ಸರಣಿ ಕೊಲೆಗಳಂತೆ ಕಂಡರೆ ಅಚ್ಚರಿ ಇಲ್ಲ. ಆದರೆ ಉಮಾಶ್ರೀ ನಿರ್ವಹಿಸಿದ ಶಂಕರಿ ಪಾತ್ರದ ಆಗಮನದೊಂದಿಗೆ ಚಿತ್ರಕ್ಕೆ ಒಂದು ಕೌಟುಂಬಿಕ ಸಿನಿಮಾದ ಲವಲವಿಕೆಯ ಆಗಮನವಾಗುತ್ತದೆ.
ನಾಯಕ ವೇದ ಮತ್ತು ಮಗಳ ಹಗೆಗೆ ಕಾರಣವಾದ ಘಟನೆ ಏನು? ಅದು ಯಾಕಾಗಿ ನಡೆಯುತ್ತದೆ? ಯಾರ ಮೇಲೆ ನಡೆಯುತ್ತದೆ ಮತ್ತು ಹೇಗೆ ನಡೆಯುತ್ತದೆ ಎನ್ನುವ ಪ್ರಶ್ನೆಗಳಿಗೆ ಒಂದಷ್ಟು ತಿರುವು ತುಂಬಿದ ಕತೆಯೊಳಗೆ ಉತ್ತರ ಅಡಗಿಸಿದ್ದಾರೆ ನಿರ್ದೇಶಕ ಹರ್ಷ. ಕತೆಯತ್ತ ಸಾಗುವ ಈ ಪಯಣದಲ್ಲಿ ಬರುವ ಪ್ರತಿಯೊಂದು ಹೆಣ್ಣು ಪಾತ್ರಗಳು ಕೂಡ ಚಿತ್ರದ ಹೈಲೈಟ್ ಎನ್ನಬಹುದು. ಉತ್ಸಾಹದ ಅಜ್ಜಿಯಾಗಿ ಉಮಾಶ್ರೀ, ವೇದನ ಮಗಳಾಗಿ ನಿರ್ಭಾವುಕ ಮುಖದೊಂದಿಗೆ ಸೇಡು ತೋರಿಸುವ ಅದಿತಿ ಸಾಗರ್, ಬಾಯಿತೆರೆದರೆ ಭಯಬೀಳಿಸುವ ಪತ್ನಿಯಾಗಿ ಗಾನವಿ ಲಕ್ಷ್ಮಣ್, ವೇಶ್ಯೆ ಪಾರಿಯಾಗಿ ಶ್ವೇತಾ ಚೆಂಗಪ್ಪ ಪಾತ್ರಗಳಲ್ಲಿ ತೋರಿಸಿರುವ ಗಟ್ಟಿತನ ಚಿತ್ರದ ಹೈಲೈಟ್. ಕೊನೆಯ ದೃಶ್ಯದಲ್ಲಿ ಬರುವ ರೌಡಿ ಮಹಿಳೆಯಾಗಿ ವಿದ್ಯಾ ನಟಿಸಿರುವ ರೀತಿ, ವೀಣಾ ಪೊನ್ನಪ್ಪ ನಿರ್ವಹಿಸಿರುವ ಪೊಲೀಸ್ ಪಾತ್ರ ಕೂಡ ಗಮನಾರ್ಹವಾಗಿದೆ.
ನಾಯಕನಾಗಿ ಶಿವಣ್ಣನಿಗೆ 125ನೇ ಚಿತ್ರ. ಪತ್ನಿಯೇ ನಿರ್ಮಿಸಿದ ಸಿನಿಮಾ ಬೇರೆ. ಹಾಗಾಗಿ ಅಭಿಮಾನಿಗಳ ನಿರೀಕ್ಷೆಗಳೂ ಅಧಿಕ. ಶಿವಣ್ಣ ತಮ್ಮ ಎಂದಿನ ಕಿಲ್ಲರ್ ಕಣ್ಣುಗಳು ಮತ್ತು ಮ್ಯೂಸಿಕಲ್ ಮೈಯ ಮೂಲಕ ಚಿತ್ರದುದ್ದಕ್ಕೂ ಮ್ಯಾಜಿಕ್ ಕಾಯ್ದುಕೊಂಡಿದ್ದಾರೆ. ಜುಂಜಪ್ಪನ ಹಾಡು ಹೆಜ್ಜೆ ಹಾಕುವಂತೆ ಮಾಡಿದರೆ, ಪತ್ನಿಯ ಮುಂದೆ ಮುಗ್ದನಾಗಿ ವರ್ತಿಸುವ ಮೂಲಕ ಕೌಟುಂಬಿಕ ಪ್ರೇಕ್ಷಕರ ಮನಗೆಲ್ಲುತ್ತಾರೆ.
ಆಂಜನೇಯ ಭಕ್ತ ಹರ್ಷ ಮತ್ತು ಮುತ್ತತ್ತಿರಾಯನ ಆರಾಧಕರಾದ ರಾಜ್ಕುಮಾರ್ ಕುಟುಂಬ ಸೇರಿ ಆಂಜನೀಪುತ್ರನಿಗೆ ಇಷ್ಟವಾಗುವಂಥ ಸಬ್ಜೆಕ್ಟನ್ನೇ ಚಿತ್ರ ಮಾಡಿದ್ದಾರೆ. ಚಿತ್ರದ ಟೈಟಲ್ ಬೀಳುವುದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಶಿವಣ್ಣನಿಗೆ ಪುನೀತ್ ಆಕ್ಷನ್ ಹೇಳುವ ದೃಶ್ಯವನ್ನು ಬಳಸಿಕೊಂಡಿರುವುದು ಭಾವಪೂರ್ಣವಾಗಿದೆ. ಇದುವರೆಗಿನ ಸಿನಿಮಾಗಳಲ್ಲಿ ಹೊಡೆದಾಟವನ್ನು ಕೂಡ ಹಾಡಿನಂತೆ ಕೊರಿಯೋಗ್ರಾಫ್ ಮಾಡುತ್ತಿದ್ದ ಹರ್ಷ, ಈ ಬಾರಿ ಒಂದಷ್ಟು ಹಸಿಹಸಿ ಅಪರಾಧವನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ಇಂಥದೊಂದು ಮೇಕಿಂಗ್ನಲ್ಲಿ ಪ್ರಶಾಂತ್ ನೀಲ್ ಕೆಜಿಎಫ್ ಮೂಲಕ ಬಿಟ್ಟು ಹೋದ ಛಾಯೆ ಎದ್ದು ಕಾಣುತ್ತಿದೆ. ಪುಸ್ತಕದಿಂದ ನಾಯಕನ ಕತೆ ಹೇಳಿಸುವ ಮೂಲಕ ನಿರೂಪಣೆಯಲ್ಲೂ ಅದೇ ನೆನಪು ಮೂಡಿಸುತ್ತಾರೆ. ಫ್ಲ್ಯಾಶ್ ಬ್ಯಾಕ್ ಹೊರತುಪಡಿಸಿದರೆ, ಶಿವಣ್ಣ ಮತ್ತು ಅದಿತಿಯಂತೂ ಕೆಜಿಎಫ್ ದೂಳಿನಿಂದ ಎದ್ದು ಬಂದ ಜೀತದಾಳುಗಳ ಲುಕ್ನಲ್ಲಿದ್ದಾರೆ.
ರಾಕಿಭಾಯ್ಯನ್ನು ಅನುಕರಿಸಿ ಸುತ್ತಿಗೆಯಿಂದ ಕೊಲೆ ಮಾಡಿದವರ ಹಾಗೆ, ಇಲ್ಲಿ ಕನಕಳ ಪಾತ್ರದ ಅನುಕರಣೆ ಮಾಡಿ ಕಲ್ಲಿನಿಂದ ಜಜ್ಜಲು ಸ್ಫೂರ್ತಿಯಾಗದಿದ್ದರೆ ಅಷ್ಟೇ ಸಾಕು.