777 ಚಾರ್ಲಿ ಚಿತ್ರದ ಶ್ರೇಷ್ಠ ನಿರ್ದೇಶನಕ್ಕಾಗಿ ನವ ಯುವ ನಿರ್ದೇಶಕ ಕಿರಣ್ ರಾಜ್ ಅವರಿಗೆ ಪ್ರಶಸ್ತಿ ಲಭಿಸಿದೆ. ರಾಘವೇಂದ್ರ ಚಿತ್ರವಾಣಿ ವತಿಯಿಂದ ನೀಡಲಾಗುವ ಈ ಪ್ರಶಸ್ತಿ ಸಮಾರಂಭವು ಇದೇ ಜನವರಿ 25ರಂದು ನೆರವೇರಲಿದೆ.
ರಕ್ಷಿತ್ ಶೆಟ್ಟಿ ನಟನೆಯ 777ಚಾರ್ಲಿ ಸಿನಿಮಾ ಕಳೆದ ವರ್ಷದ ಹಿಟ್ ಸಿನಿಮಾಗಳಲ್ಲಿ ಒಂದು. ರಕ್ಷಿತ್ ನಂಥ ಆಕ್ಷನ್ ಹೀರೋವನ್ನು ನಾಯಿ ಪ್ರೇಮಿಯಾಗಿ ತೋರಿಸಬಹುದು ಎನ್ನುವ ಕಲ್ಪನೆ ಮೂಡಿಸಿಕೊಂಡವರು ಯುವ ನಿರ್ದೇಶಕ ಕಿರಣ್ ರಾಜ್. ಸಿನಿಮಾ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಮಾತ್ರವಲ್ಲ, ಜಗತ್ತಿನ ಎಲ್ಲ ನಾಯಿಪ್ರೇಮಿಗಳನ್ನು, ಸಾಕುಪ್ರಾಣಿ ಪ್ರಿಯರ ಪ್ರೀತಿಯನ್ನು ಗಳಿಸಿದಂಥ ಚಿತ್ರ. ಬಹಳ ನಿರ್ದೇಶಕರು ಮಾನವ ಸ್ನೇಹ, ಸಂಬಂಧಗಳನ್ನು ತೋರಿಸಲು ಏದುಸಿರು ಬಿಡುತ್ತಿರುವಾಗ ಮೂಕ ಪ್ರಾಣಿಯ ಭಾವನೆಗಳನ್ನು ಪರದೆಯ ಮೇಲೆ ಹಿಡಿದಿಟ್ಟು ತೋರಿಸಿದ ಪ್ರತಿಭಾವಂತ ಕಿರಣ್ ರಾಜ್. ಜನಮೆಚ್ಚುಗೆ ಇನ್ನೂ ಮುಂದುವರಿದಿರುವುದರ ಮಧ್ಯೆ ಇದೀಗ ಪ್ರಶಸ್ತಿಗಳ ಮಳೆಯೂ ಶುರುವಾಗಿದೆ. ಚೊಚ್ಚಲ ನಿರ್ದೇಶನಕ್ಕೆ ಪ್ರತಿಷ್ಠಿತ ಚೊಚ್ಚಲ ಪ್ರಶಸ್ತಿಯಾಗಿ ರಾಘವೇಂದ್ರ ಚಿತ್ರವಾಣಿಯ ಶ್ರೇಷ್ಠ ನಿರ್ದೇಶಕ ಅವಾರ್ಡ್ ಲಭಿಸುತ್ತಿದೆ.
ಹೊಸ ಕತೆಯ ತಯಾರಿಯಲ್ಲಿ ಕಿರಣ್ ರಾಜ್
ಕಿರಣ್ ರಾಜ್ ಗಡಿನಾಡು ಕಾಸರಗೋಡಿನ ಪ್ರತಿಭೆ. ಕಿರುಚಿತ್ರದ ಮೂಲಕ ಪ್ರಶಸ್ತಿ ಪಡೆದವರು. ಬೆಂಗಳೂರು ಸೇರಿದ ಬಳಿಕ ರಕ್ಷಿತ್ ಶೆಟ್ಟಿ ತಂಡದಲ್ಲಿ ಗುರುತಿಸಿಕೊಂಡವರು. ರಿಷಬ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ಗೆ ಸಹಾಯಕ ನಿರ್ದೇಶಕರಾಗಿದ್ದರು. ರಿಷಬ್ ಶೆಟ್ಟಿಯ ‘ಕಥಾ ಸಂಗಮ’ದಲ್ಲಿ ರಿಷಬ್ ಮತ್ತು ಹರಿಪ್ರಿಯಾರನ್ನು ನಿರ್ದೇಶಿಸಿ ಗಮನ ಸೆಳೆದಿದ್ದರು. 777ಚಾರ್ಲಿಯ ಯಶಸ್ಸು ಅವರಿಗೆ ಹೊಸ ಹುಮ್ಮಸ್ಸು ತಂದುಕೊಟ್ಟಿದೆ. ಚಾರ್ಲಿ ಥಾಯ್ ಭಾಷೆಗೆ ಡಬ್ ಆಗಿತ್ತು. ಹಾಗೆ ಅದರ ಪ್ರೀಮಿಯರ್ ನಲ್ಲಿ ಭಾಗಿಯಾಗಲು ಥಾಯ್ ಲ್ಯಾಂಡ್ ಗೂ ಹೋಗಿ ಬಂದಿದ್ದಾರೆ.
ಪ್ರಸ್ತುತ ಹೊಸ ಸಿನಿಮಾಕ್ಕಾಗಿ ಕತೆ ಬರೆಯುತ್ತಿದ್ದಾರೆ. ಈ ವರ್ಷದ ಮಧ್ಯದೊಳಗೆ ಪೂರ್ತಿಯಾಗುವ ನಂಬಿಕೆ ಕಿರಣ್ ರಾಜ್ ಗಿದೆ.
ಮೋಹನ್ ಲಾಲ್ ನಿರ್ಮಾಣ ಸಂಸ್ಥೆಯಿಂದ ಆಫರ್!
ಚಾರ್ಲಿ ಚಿತ್ರ ಒಟಿಟಿಯಲ್ಲಿ ಬಂದ ಮೇಲೆ ಐಎಂಡಿಬಿಯಲ್ಲಿ ರೇಟಿಂಗ್ ಜಾಸ್ತಿಯಾಗಿದೆ. ಕಿರಣ್ ರಾಜ್ ಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ! ವಿಶೇಷ ಏನೆಂದರೆ ಮಾಲಿವುಡ್ ಸ್ಟಾರ್ ನಟ, ಮೋಹನ್ ಲಾಲ್ ಅವರ ಪತ್ನಿಯ ನಿರ್ಮಾಣ ಸಂಸ್ಥೆಯಿಂದಲೂ ಅಪ್ರೋಚ್ ಆಗಿದ್ದಾರೆ. ಈ ಬಗ್ಗೆ ಸಿನಿ ಕನ್ನಡದ ಜೊತೆಗೆ ಮಾತನಾಡಿದ ಕಿರಣ್ ರಾಜ್, “ಯಾರಿಗೆ ಕತೆ ಎನ್ನುವ ಬಗ್ಗೆ ನಾನು ವಿಚಾರಿಸಿಲ್ಲ. ಅದರೆ ಅವರು ಕೂಡ ಮುಂದಿನ ದಿನಗಳಲ್ಲಿ ನಿಮ್ಮೊಂದಿಗೆ ಒಂದು ಪ್ರಾಜೆಕ್ಟ್ ಮಾಡುವ ಅಭಿಲಾಷೆ ಇದೆ” ಎಂದಷ್ಟೇ ಹೇಳಿದ್ದಾರೆ ಎನ್ನುತ್ತಾರೆ.
ಕಿರಣ್ ರಾಜ್ ಈಗ ಬರೆಯುತ್ತಿರುವ ಚಿತ್ರ ಕತೆ ಕೂಡ ತುಂಬ ರಿಯಲ್ ಲೈಫ್ ಗೆ ಕನೆಕ್ಟ್ ಆಗುವಂಥ ಸಬ್ಜೆಕ್ಟ್.
“ಥಿಯೇಟ್ರಿಕಲಿ ಎಕ್ಸ್ಪೀರಿಯನ್ಸ್ ತುಂಬ ಚೆನ್ನಾಗಿ ಇರಲಿ ಎಂದು ಬಯಸುತ್ತೇನೆ. ಔಟ್ ಅಂಟ್ ಕಮರ್ಷಿಯಲ್ ಮಾಡುವ ಐಡಿಯಾ ಇಲ್ಲ” ಎನ್ನುತ್ತಾರೆ ಕಿರಣ್ ರಾಜ್.
‘ರಾಘವೇಂದ್ರ ಚಿತ್ರವಾಣಿ’ ಹಿನ್ನೆಲೆ
ಕಿರಣ್ ರಾಜ್ ಗೆ ಪ್ರಶಸ್ತಿ ನೀಡುತ್ತಿರುವ ರಾಘವೇಂದ್ರ ಚಿತ್ರವಾಣಿ ಸುಮಾರು ಐದು ದಶಕಗಳ ಹಿನ್ನೆಲೆ ಹೊಂದಿದೆ.
ಕಳೆದ 47 ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾ ಬಂದಿರುವ ಇತಿಹಾಸ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯದ್ದಾಗಿದೆ.
ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿವಂಗತ ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ, ಈ ಸುಧೀರ್ಘ ಯಾನಕ್ಕೆ ಕಾರಣಕರ್ತರಾಗಿದ್ದ ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠವನ್ನು ಆರಂಭಿಸಿದ್ದರು. ಕೇವಲ ಎರಡು ಪ್ರಶಸ್ತಿಗಳಿಂದ ಪ್ರಾರಂಭವಾದ ಈ ಸಮಾರಂಭಕ್ಕೆ ಆಗಮಿಸಿದ ಗಣ್ಯರು ನಮ್ಮ ಸಂಸ್ಥೆಯ ಮೂಲಕ ಪ್ರಶಸ್ತಿ ಪ್ರದಾನ ಮಾಡಲು ಮುಂದಾಗಿದ್ದರು. ಹೀಗೆ ಆರಂಭವಾದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೀಗ 11 ಪ್ರಶಸ್ತಿಗಳಿಗೆ ವಿಸ್ತಾರವಾಗಿದೆ. ನಿರ್ಮಾಪಕರು ಮತ್ತು ಪತ್ರಕರ್ತರಿಗೆ ಸೀಮಿತವಾಗದೆ ಕನ್ನಡ ಚಿತ್ರರಂಗಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿರುವ ಕಲಾವಿದರು ಮತ್ತು ತಂತ್ರಜ್ಞರಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಸ್ತುತ ಕಿರಣ್ ರಾಜ್ ಅವರಿಗೆ ನೀಡಲಾಗುತ್ತಿರುವ ಚೊಚ್ಚಲ ನಿರ್ದೇಶಕನ ಪ್ರಶಸ್ತಿಯನ್ನು ಖ್ಯಾತ ನಟ, ನಿರ್ದೇಶಕ ಬಿ ಸುರೇಶ್ ಪ್ರಾಯೋಜಿಸುತ್ತಿದ್ದಾರೆ.
ಕಳೆದ ವರ್ಷ ಕೋವಿಡ್ ಕಾರಣದಿಂದ ಪ್ರಶಸ್ತಿ ಪ್ರದಾನ
ಸಮಾರಂಭ ಆಯೋಜಿಸಲಾಗಿರಲಿಲ್ಲ. ಹಾಗಾಗಿ, ಕಳೆದ ವರ್ಷದ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಯನ್ನೂ ಈ ಬಾರಿ ನೀಡಲಾಗುತ್ತಿದೆ. ಸಂಸ್ಥೆಯ ಸ್ಥಾಪಕರಾದ ಶ್ರೀ ಡಿ.ವಿ, ಸುಧೀಂದ್ರ ಅವರ ಜನ್ಮದಿನವಾದ ಜನವರಿ 25ರಂದು ಈ ಸಮಾರಂಭ ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘದ ಡಾ.ರಾಜ್ ಕುಮಾರ್ ಭವನದಲ್ಲಿ ಸಂಜೆ 5ಕ್ಕೆ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ 47ನೇ ವಾರ್ಷಿಕೋತ್ಸವ ಹಾಗೂ 21 ಮತ್ತು 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ.