ಕಾಂತಾರದ ಬಳಿಕ ರಿಷಬ್ ಶೆಟ್ಟಿಗೆ ಭರ್ಜರಿ ಆಫರ್ ಗಳ ಸುರಿಮಳೆಯಾಗುತ್ತಿದೆ. ಆದರೆ ರಿಷಬ್ ಮಾತ್ರ ಸದ್ಯಕ್ಕೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನುವುದು ಸತ್ಯದ ಸಂಗತಿ.
ಮೋಹನ್ ಲಾಲ್ ನಿಂದ ಆಫರ್!
ಮಾಲಿವುಡ್ ನಟ ಮೋಹನ್ ಲಾಲ್ ದೇಶದಲ್ಲೇ ಶ್ರೇಷ್ಠ ನಟ ಎಂದು ಗುರುತಿಸಿಕೊಂಡವರು. 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕರಾದವರು. ಕೇರಳದ ಮೊದಲ 50 ಕೋಟಿ ಕ್ಲಬ್, 100ಕೋಟಿ ಕ್ಲಬ್ ಸಿನಿಮಾಗಳನ್ನು ನೀಡಿದವರು. ಇಂಥ ನಟನ ಸಿನಿಮಾಗಳೆಂದರೆ ಸಿನಿಮಾ ಪ್ರಿಯರೆಲ್ಲರೂ ಕುತೂಹಲದಿಂದ ಕಾಯಿತ್ತಿರುತ್ತಾರೆ. ಇವರ ಹೊಸ ಸಿನಿಮಾ ‘ಮಲೈಕೋಟೈ ವಾಲಿಬನ್’. ನೂರಾರು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಇದು. ಇದರಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸಲು ಕನ್ನಡದ ಜನಪ್ರಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿಯವರನ್ನು ಸಂಪರ್ಕಿಸಲಾಗಿತ್ತು. ಆದರೆ ಈ ಬಗ್ಗೆ ಅವರನ್ನು ಸಂಪರ್ಕಿಸಿದಾಗ ತಾವು ಆ ಪಾತ್ರವನ್ನು ನಿರಾಕರಿಸಿದ್ದಾಗಿ ಸಿನಿಕನ್ನಡ.ಕಾಮ್ ಗೆ ತಿಳಿಸಿದ್ದಾರೆ.
ಕನ್ನಡಕ್ಕಷ್ಟೇ ನನ್ನ ಆದ್ಯತೆ.!
“ಹಾಗೆ ನೋಡಿದರೆ ನಾನು ಮೋಹನ್ ಲಾಲ್ ಫ್ಯಾನ್. ಮಾತ್ರವಲ್ಲ ‘ಮಲೈಕೋಟೆ ವಾಲಿಬನ್’ ಎನ್ನುವ ಈ ಸಿನಿಮಾದ ನಿರ್ದೇಶಕ ಲಿಜೊ ಜೋಸ್ ಪೆಲ್ಲಿಸೇರಿ ಅವರ ಮೇಲೆಯೂ ನನಗೆ ಅಭಿಮಾನ ಇದೆ. ಅವರೊಬ್ಬ ಶ್ರೇಷ್ಠ ನಿರ್ದೇಶಕ. ಮಾತ್ರವಲ್ಲ ಇದೊಂದು ಬಿಗ್ ಬಜೆಟ್ ಸಿನಿಮಾ ಕೂಡ ಹೌದು. ಆದರೆ ಇಷ್ಟೆಲ್ಲ ಪಾಸಿಟಿವ್ ಅಂಶ ಇದ್ದರೂ ನನಗೆ ಈ ಚಿತ್ರದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ನಾನು ನಿರ್ದೇಶಕನೂ ಆಗಿರುವ ಕಾರಣ ಕನ್ನಡದಲ್ಲಿಯೇ ಏನಾದರೂ ಮಾಡಬೇಕು ಎನ್ನುವ ಹಂಬಲ ಇದ್ದೇ ಇದೆ. ಇದೇ ಪ್ರಯತ್ನ ನಿರಂತರವಾಗಿರುವಾಗ ನಟನೆಯ ಕಾರಣಕ್ಕಾಗಿ ಮಾತ್ರ ಪರಭಾಷೆಗೆ ಹೋಗುವುದು ಬೇಡ ಎಂದುಕೊಂಡಿದ್ದೇನೆ.” ಇದು ರಿಷಬ್ ಮಾತು.
ಬಹುಶಃ ಚಿತ್ರರಂಗದಲ್ಲಿ ಏನು ಮಾಡಬೇಕು ಎನ್ನುವ ಬಗ್ಗೆ ಇಷ್ಟೊಂದು ಸ್ಪಷ್ಟ ಗುರಿ ಇರಿಸಿರುವವರು ಅಪರೂಪ ಎನ್ನಬಹುದು. ಕಣ್ಣಮುಂದೆ ಸಾಕಷ್ಟು ಆಫರ್ ಗಳು ಬಂದರೂ ಕನ್ನಡದಲ್ಲಿ ಇದ್ದುಕೊಂಡೇ ಸಾಧಿಸುತ್ತೇನೆ ಎನ್ನುವುದು ಡಾ.ರಾಜ್ ಕುಮಾರ್ ಅವರ ಧೋರಣೆಯಾಗಿತ್ತು. ಇಂದು ಕನ್ನಡದಲ್ಲಿ ಇದ್ದುಕೊಂಡೇ ದೇಶದ ನ ಸೆಳೆಯುವ ಸಾಧ್ಯತೆ ಇದೆ. ಇದನ್ನು ಸದುಪಯೋಗ ಮಾಡಿರುವ ರಿಷಬ್ ಶೆಟ್ಟಿ ಇಂದಿನ ಯುವ ಪ್ರತಿಭೆಗಳಿಗೆ ಆದರ್ಶವಾಗುವುದರಲ್ಲಿ ವಿಶೇಷವಿಲ್ಲ.