ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್ ಕಾಲವಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಮುಂಜಾನೆ 6.15ನಿಮಿಷಕ್ಕೆ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ದೊರೆ ಭಗವಾನ್ ಎನ್ನುವ ಜೋಡಿ ನಿರ್ದೇಶನ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿತ್ತು. ಇವರಿಬ್ಬರೂ ಜೊತೆಯಾಗಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವುಗಳಲ್ಲಿ ಡಾ.ರಾಜ್ ಕುಮಾರ್ ನಟನೆಯ ಕಸ್ತೂರಿ ನಿವಾಸ, ಎರಡು ಕನಸು, ನಾನೊಬ್ಬ ಕಳ್ಳ ಪ್ರಮುಖ ಚಿತ್ರಗಳು. ‘ಆಪರೇಷನ್ ಡೈಮಂಡ್ ರ್ಯಾಕೆಟ್’, ‘ಜೇಡರ ಬಲೆ’ ಮೊದಲಾದ ಸಿನಿಮಾಗಳ ಮೂಲಕ ಬಾಂಡ್ ಶೈಲಿಯ ಚಿತ್ರಗಳನ್ನು ಕನ್ನಡಿಗರಿಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 22 ವರ್ಷದ ಹಿಂದೆ ಇವರಿಬ್ಬರಲ್ಲಿ ದೊರೆ ನಿಧನವಾದರು. ಅದಕ್ಕೂ ಮೊದಲೇ ಭಗವಾನ್ ದೊರೆಯನ್ನು ಬಿಟ್ಟು ತಾವೇ ನಿರ್ದೇಶನ ಮಾಡಿದ ಚಿತ್ರಗಳನ್ನು ನೀಡಿದ್ದರು. ಮೂರು ದಶಕದ ಹಿಂದೆ ತೆರೆಕಂಡ ‘ಮಾಂಗಲ್ಯ ಬಂಧನ’ ಇದಕ್ಕೊಂದು ಉದಾಹರಣೆ. ದೊರೆ ನಿಧನದ ಬಳಿಕ ಭಗವಾನ್ ನಿರ್ದೇಶಿಸಿದ ಚಿತ್ರ 2019ರಲ್ಲಿ ತೆರೆಕಂಡ ಆಡುವ ಗೊಂಬೆ. ಸಂಚಾರಿ ವಿಜಯ್ ಚಿತ್ರದ ನಾಯಕರಾಗಿದ್ದರು. ಇದು ಭಗವಾನ್ ಅವರ ನಿರ್ದೇಶನದ ಕೊನೆಯ ಚಿತ್ರವಾಯಿತು.
ಭಗವಾನ್ ಅವರ ಪತ್ನಿ ಸರೋಜ 2009ರಲ್ಲೇ ನಿಧನರಾಗಿದ್ದರು. ದಂಪತಿಗೆ ನಾಲ್ಕು ಮಂದಿ ಮಕ್ಕಳು. ಹಿರಿಯವರು ಪ್ರಾರ್ಥನಾ ಮೋಹನ್. ಗಂಡು ಮಕ್ಕಳಲ್ಲಿ ಮೊದಲ ಮಗ ಜ್ಯೋತೀಂದರ್. ಎರಡನೇ ಮಗ ರಾಘವೇಂದ್ರ. ಮೂರನೆಯವರು ನಿಶ್ಚಯ್. ಮಕ್ಕಳು ಯಾರೂ ಚಿತ್ರರಂಗದೊಂದಿಗೆ ಗುರುತಿಸಿಕೊಂಡಿರಲಿಲ್ಲ.
ಮಧ್ಯಾಹ್ನ 12 ಗಂಟೆಯ ತನಕ ಯಲಹಂಕದ ಸಹಕಾರ ನಗರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯಲಿದೆ. 12.30ರ ಬಳಿಕ ಸಾರ್ವಜನಿಕರ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗುವುದು. ಸಂಜೆ 5.30 ಸುಮಾರಿಗೆ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆ ಮಂದಿ ಸಿನಿಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.