ಸಂಚಾರಿ ವಿಜಯ್ ಹೆಸರಲ್ಲಿ ಕ್ರಿಟಿಕ್ಸ್ ಅವಾರ್ಡ್

ನಾಲ್ಕನೇ ವರ್ಷದ ಚಂದನವನ ಫಿಲ್ಮ್ ಕ್ರಿ ಟಿಕ್ಸ್ ಅಕಾಡೆಮಿ ಅವಾರ್ಡ್ ಮಾರ್ಚ್ 5 ರಂದು ಅದ್ಧೂರಿಯಾಗಿ ನೆರವೇರಲಿದೆ. ಇದರ ಪೂರ್ವಭಾವಿಯಾಗಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರಿನ ಪಟ್ಟಿ ಹಾಗೂ
2023ನೇ ವರ್ಷದ ಟ್ರೋಫಿಯ ಅನಾವರಣಗೊಳಿಸಲಾಗಿದೆ. ಸಮಾರಂಭದಲ್ಲಿ ಅಗಲಿದ ನಟ ‘ಸಂಚಾರಿ ವಿಜಯ್’ ಹೆಸರಲ್ಲಿ ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದು ಅವಿಸ್ಮರಣೀಯ ಎನಿಸಿತು.

ಕ್ರಿಟಿಕ್ಸ್ ಅಕಾಡೆಮಿಯಿಂದ 5 ಹೊಸ ಪ್ರಶಸ್ತಿಗಳ ಘೋಷಣೆ

ಸತತ ಮೂರು ವರ್ಷಗಳಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜನೆ ಮಾಡುತ್ತಾ ಬಂದಿರುವ ‘ಚಂದವನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ’, ಪ್ರತಿ ವರ್ಷವೂ ಒಂದಲ್ಲ ಒಂದು ವಿಶೇಷ ಪ್ರಶಸ್ತಿಯನ್ನು ಘೋಷಿಸುತ್ತಾ ಬಂದಿದೆ. ಈ ಬಾರಿ ಐದು ವಿಶೇಷ ಪ್ರಶಸ್ತಿ ಗಳನ್ನು ಪಟ್ಟಿಯಲ್ಲಿ ಹೊಸದಾಗಿ ಸೇರಿಸಲಾಗಿದೆ. ಈ ಐದು ಪ್ರಶಸ್ತಿಗಳಿಗೂ ಕನ್ನಡ ಸಿನಿಮಾರಂಗಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಲಾಗಿದೆ.

ಮೊದಲ ಬಾರಿ ನಾಯಕರಾಗಿ ಚಿತ್ರರಂಗ ಪ್ರವೇಶಿಸಿ ವಿಮರ್ಶಕರ ಮನಗೆಲ್ಲುವ ನಟನಿಗೆ ಅತ್ಯುತ್ತಮ (ಡೆಬ್ಯು) ಪ್ರಶಸ್ತಿ ಲಭಿಸಲಿದೆ. ಈ ಪ್ರಶಸ್ತಿಯನ್ನು ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ನೀಡಲಾಗುತ್ತಿದೆ. ಚೊಚ್ಚಲ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿಯನ್ನು ಕನ್ನಡದ ಮೊದಲ ಚಿತ್ರದ ನಾಯಕಿ ತ್ರಿಪುರಾಂಬ ಹೆಸರಿನಲ್ಲಿ ನೀಡಲಾಗುತ್ತಿದೆ.

ಮೊದಲ ಬಾರಿ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ವಿಯಾಗಿ ಗುರುತಿಸಿಕೊಂಡ ನಿರ್ದೇಶಕರಿಗೆ
ಹೆಸರಾಂತ ನಟ, ನಿರ್ದೇಶಕ ಶಂಕರನಾಗ್ ಅವರ ಹೆಸರಿನಲ್ಲಿ ನೀಡಲಿರುವುದಾಗಿ ಘೋಷಿಸಲಾಗಿದೆ.

ಸಿನಿಮಾ ನಿರ್ಮಾಣ ಕ್ಷೇತ್ರಕ್ಕೆ ಮೊದಲ ಬಾರಿ ಬಂದು, ಮೊದಲ ಚಿತ್ರದಲ್ಲೇ ವಿಮರ್ಶಕರು ಮೆಚ್ಚುವಂಥ ಚಿತ್ರ ನೀಡುವ ನಿರ್ಮಾಪಕರಿಗೆ ಅತ್ಯುತ್ತಮ ನಿರ್ಮಾಪಕ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಯನ್ನು ಕನ್ನಡದಲ್ಲಿ ಹೊಸ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಿ ಚಿತ್ರ ನಿರ್ಮಿಸಿದ ಪುನೀತ್ ರಾಜ್ ಕುಮಾರ್ ಹೆಸರಲ್ಲಿ ನೀಡಲಾಗುವುದು.

ಮೊದಲ ಸಿನಿಮಾದಲ್ಲೇ ಅತ್ಯುತ್ತಮ ಸಂಭಾಷಣೆ, ಸಾಹಿತ್ಯ ಬರೆದ ಬರಹಗಾರರಿಗೆ ಶ್ರೇಷ್ಠ ಬರಹಗಾರ ಪ್ರಶಸ್ತಿಯನ್ನು ನೀಡಲಾಗುವುದು. ಈ ಪ್ರಶಸ್ತಿಯನ್ನು ಚಿ.ಉದಯಶಂಕರ್ ಅವರ ಹೆಸರಿನಲ್ಲಿ ನೀಡುವುದಾಗಿ ಘೋಷಿಸಲಾಗಿದೆ.

ಮೂರು ದಶಕಗಳ ಬಳಿಕ ಕನ್ನಡಕ್ಕೆ ಶ್ರೇಷ್ಠನಟ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಸಂಚಾರಿ ವಿಜಯ್, ಕನ್ನಡದ ಮೊದಲ ವಾಕ್ಚಿತ್ರದ ನಾಯಕಿ ತ್ರಿಪುರಾಂಬ, ನಿರ್ದೇಶಕರಾಗಿದ್ದುಕೊಂಡು ಅಲ್ಪದರಲ್ಲೇ ನಮ್ಮನ್ನು ತೊರೆದುಹೋದ ಶಂಕರನಾಗ್, ನಟ, ನಿರ್ಮಾಪಕ ಪುನೀತ್ ರಾಜ್ ಕುಮಾರ್ ಮತ್ತು ಸಾಹಿತ್ಯರತ್ನ ಉದಯಶಂಕರ್ ಹೆಸರಲ್ಲಿ ಪ್ರಶಸ್ತಿಗಳನ್ನು ಘೋಷಿಸಿರುವುದು ಮಹಾ ಪ್ರತಿಭೆಗಳ ಸ್ಮರಣೆಗೆ ಹೊಸದೊಂದು ದಾರಿ ಮಾಡಿದಂತಾಗಿದೆ. ಈ ಕಾರಣಕ್ಕಾಗಿ ‘ಚಂದನವನ ಕ್ರಿಟಿಕ್ಸ್ ಅಕಾಡೆಮಿ’ ಅಭಿನಂದನಾರ್ಹವಾಗಿದೆ‌.

ಜನಪ್ರಿಯ ನಿರ್ದೇಶಕ ಯೋಗರಾಜ ಭಟ್, ನಟಿಯರಾದ ಇತಿ ಆಚಾರ್ಯ, ಪಾವನಾ ಗೌಡ ಮತ್ತು ಸಂಗೀತ ಭಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Recommended For You

Leave a Reply

error: Content is protected !!
%d bloggers like this: