ಹಳಬರು ಬರುತ್ತಿಲ್ಲ; ಹೊಸಬರನ್ನು ಕೇಳುವವರಿಲ್ಲ …!

ಪಿವಿಆರ್-ಇನಾಕ್ಸ್ ಇಂದಿನಿಂದ ಒಂದು ವಾರ (ಮೇ 19ರಿಂದ 25) ಕಾಲ ಹೊಸ ಆಫರ್ ಶುರು ಮಾಡಿದೆ. ಕನ್ನಡದ ಬ್ಲಾಕ್ಬಸ್ಟರ್ ಚಿತ್ರಗಳನ್ನು ಕೇವಲ 99 ರೂ.ಗಳಿಗೆ ತೋರಿಸುವುದಕ್ಕೆ ಮುಂದಾಗಿದೆ. ಈಗಾಗಲೇ ಒಮ್ಮೆ ಬಿಡುಗಡೆಯಾಗಿ ಹಿಟ್ ಆಗಿರುವ ‘ಕೆಜಿಎಫ್’, ‘ಗಂಧದ ಗುಡಿ’, ‘ರಾಜ್ಕುಮಾರ’, ‘ಯಜಮಾನ’, ‘ಗರುಡ ಗಮನ ಋಷಭ ವಾಹನ’, ‘ಮಫ್ತಿ’ ಮತ್ತು ‘ಮಾಸ್ಟರ್ಪೀಸ್’ ಚಿತ್ರಗಳು ಬಿಡುಗಡೆಯಾಗಿದ್ದು, ಆಸಕ್ತಿ ಇರುವವರು ಈ ಚಿತ್ರಗಳನ್ನು ಪಿವಿಆರ್-ಇನಾಕ್ಸ್ನ ಕೆಲವು ಆಯ್ದ ಮಲ್ಟಿಪ್ಲೆಕ್ಸ್ಗಳಲ್ಲಿ ಕಡಿಮೆ ಬೆಲೆಯಲ್ಲಿ ನೋಡಬಹುದು.

ಎಗ್ಗಿಲ್ಲದೆ ಟಿಕೆಟ್ ಬೆಲೆಗಳನ್ನು ಏರಿಸುವ ಮಲ್ಟಿಪ್ಲೆಕ್ಸ್ಗಳು ಹೀಗೆ ಈ ಆಫರ್ ಕೊಟ್ಟಿರುವುದೇಕೆ? ಟಿಕೆಟ್ ಬೆಲೆ ಕಡಿಮೆ ಮಾಡಿರುವುದೇಕೆ? ಎಂಬ ಪ್ರಶ್ನೆ ಸಹಜ. ಬೇರೆ ದಾರಿಯೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದೊಂದು ತಿಂಗಳಿನಲ್ಲಿ ಚಿತ್ರಮಂದಿರಗಳತ್ತ ಪ್ರೇಕ್ಷಕರು ಸುಳಿಯುವುದು ಬಹಳ ಕಡಿಮೆಯಾಗಿದೆ. ಜನ ಚಿತ್ರಮಂದಿರದತ್ತ ಬಾರದಿರುವುದಕ್ಕೆ ಚುನಾವಣೆ, ಮಳೆ, ಐಪಿಎಲ್, ಓಟಿಟಿ … ಹೀಗೆ ಹಲವು ಕಾರಣಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ, ಈ ಒಂದು ತಿಂಗಳಲ್ಲಿ ನಿರೀಕ್ಷಿತ ಅಥವಾ ಸ್ವಲ್ಪ ಸದ್ದು ಮಾಡಿದ ಚಿತ್ರಗಳು ಬಿಡುಗಡೆಯಾಗಿದ್ದು ಸಹ ಕಡಿಮೆಯೇ. ‘ಶಿವಾಜಿ ಸುರತ್ಕಲ್ 2’, ‘ರಾಘವೇಂದ್ರ ಸ್ಟೋರ್ಸ್’, ‘ಡೇರ್ಡೆವಿಲ್ ಮುಸ್ತಾಫ’ ಬಿಟ್ಟರೆ, ಜನ ನೋಡಬೇಕೆಂದು ಬಯಸಿ ಚಿತ್ರಮಂದಿರಗಳಿಗೆ ಹೋಗುವಂತಹ ಚಿತ್ರಗಳು ಇರಲಿಲ್ಲ.

ಇದು ಬರೀ ಕನ್ನಡವಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಇದೇ ಸಮಸ್ಯೆ. ‘ಪೊನ್ನಿಯನ್ ಸೆಲ್ವನ್ 2’ ಚಿತ್ರವೊಂದು ಸ್ವಲ್ಪ ಸದ್ದು ಮಾಡಿ, ಒಂದಿಷ್ಟು ದುಡ್ಡು ಮಾಡಿದೆ. ‘ಕೇರಳ ಸ್ಟೋರಿ’ ಚಿತ್ರವು 100 ಕೋಟಿ ರೂ. ಕ್ಲಬ್ ದಾಟಿದೆ. ಮಿಕ್ಕಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ … ಹೀಗೆ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲೂ ಚಿತ್ರಗಳು ಸತತವಾಗಿ ಚಿತ್ರಗಳು ಬಿಡುಗಡೆ ಆಗುತ್ತಿವೆಯಾದರೂ, ಬಹುತೇಕ ಚಿತ್ರಗಳಿಗೆ ಪ್ರೇಕ್ಷಕರಿಂದ ನೀರಸವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕನ್ನಡದ ಮಟ್ಟಿಗೆ ಹೇಳುವುದಾದರೆ, ಕಳೆದ ನಾಲ್ಕೂವರೆ ತಿಂಗಳುಗಳಲ್ಲಿ 90 ಪ್ಲಸ್ ಚಿತ್ರಗಳು ಬಿಡುಗಡೆಯಾಗಿವೆ. ಜೂನ್ನಲ್ಲಿ ಸೆಂಚ್ಯುರಿ ಆಗಲಿವೆ. ಇದರಲ್ಲಿ ಶೇ. 90ರಷ್ಟು ಚಿತ್ರಗಳು ಹೊಸಬರ ಚಿತ್ರಗಳೇ. ಮಿಕ್ಕಂತೆ ಒಂದಿಷ್ಟು ಸ್ಟಾರ್ಗಳ ಚಿತ್ರಗಳು ಬಿಡುಗಡೆಯಾದರೂ, ಆ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ದರ್ಶನ್ ಅಭಿನಯದ ‘ಕ್ರಾಂತಿ’, ಉಪೇಂದ್ರ ಅಭಿನಯದ ‘ಕಬ್ಜ’, ಧನಂಜಯ್ ಅಭಿನಯದ ‘ಹೊಯ್ಸಳ’ … ಮುಂತಾದ ಚಿತ್ರಗಳು ಒಂದು ಲೆವೆಲ್ಗೆ ದುಡ್ಡು ಮಾಡಿತೇ ಹೊರತು, ಬಾಕ್ಸ್ ಆಫೀಸ್ನಿಂದ ದೊಡ್ಡ ಮಟ್ಟದ ಲಾಭ ಬರಲಿಲ್ಲ. ಬಹುಶಃ ಡಬ್ಬಿಂಗ್, ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳಿಂದ ಹಣ ಬರದಿದ್ದರೆ, ನಿರ್ಮಾಪಕರು ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸಬೇಕಿತ್ತೇನೋ? ಆದರೆ, ಬೇರೆ ಮೂಲಗಳಿರುವುದರಿಂದ ನಿರ್ಮಾಪಕರು ಬಚಾವ್ ಆಗಿದ್ದಾರೆ. ಇನ್ನು, ಹೊಸಬರ ಚಿತ್ರಗಳು ಬಿಡುಗಡೆಯಾಗಿ ಅದರಿಂದ ನಿರ್ಮಾಪಕರಿಗೆ ಒಂದು ರೂಪಾಯಿ ಲಾಭ ಬಂದಿಲ್ಲ. ಲಾಭ ಬಿಡಿ, ಹಾಕಿದ ದುಡ್ಡೆಲ್ಲವೂ ವಾಷ್ಔಟ್ ಆಗಿದೆ. ನಾವು ಸಹ ನಿರ್ಮಾಪಕರಾದೆವು ಎಂದು ಹೇಳಿಕೊಳ್ಳಬಹುದು ಎನ್ನುವುದು ಬಿಟ್ಟರೆ, ಮಿಕ್ಕಂತೆ ಯಾರಿಗೆ ಏನೂ ಸಿಕ್ಕಿಲ್ಲ.

ಈ ಪರಿಸ್ಥಿತಿ ಎಷ್ಟು ಸಮಯ ಮುಂದುವರೆಯುತ್ತದೆಯೋ ಗೊತ್ತಿಲ್ಲ. ಏಕೆಂದರೆ, ಪ್ರೇಕ್ಷಕರು ಹೊಸಬರು ಚಿತ್ರಗಳಿಗೆ ಬರುತ್ತಿಲ್ಲ. ಹಳಬರ ಬಳಿ ಸ್ಟಾಕ್ ಇಲ್ಲ. ಯಶ್ ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾದರೂ, ಅವರ ಮುಂದಿನ ಚಿತ್ರ ಯಾವುದು ಎಂದು ಯಾರಿಗೂ ಗೊತ್ತಿಲ್ಲ. ಈ ವರ್ಷ ಘೋಷಣೆಯಾದರೂ, ಅದು ಬಿಡುಗಡೆಯಾಗುವುದಕ್ಕೆ ಎರಡು ವರ್ಷ ಬೇಕು. ಸುದೀಪ್ ಮೂರು ಚಿತ್ರಗಳನ್ನು ಒಪ್ಪಿದ್ದಾರಂತೆ. ಆದರೆ, ಯಾವುದೂ ಈ ವರ್ಷ ಬಿಡುಗಡೆಯಾಗುವುದಿಲ್ಲ. ರಿಷಭ್ ಶೆಟ್ಟಿ ಚಿತ್ರ ಏನಿದ್ದರೂ ಮುಂದಿನ ವರ್ಷವೇ. ಧನಂಜಯ್ ಅಭಿನಯದ ಉತ್ತರಕಾಂಡ ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ. ಶಿವರಾಜ್ಕುಮಾರ್, ದರ್ಶನ್, ಧ್ರುವ ಸರ್ಜಾ, ರಕ್ಷಿತ್ ಶೆಟ್ಟಿ, ಗಣೇಶ್, ಶ್ರೀಮುರಳಿ, ಉಪೇಂದ್ರ ಅಭಿನಯದ ತಲಾ ಒಂದೊಂದು ಚಿತ್ರಗಳು ಈ ವರ್ಷ ಬಿಡುಡೆಯಾಗಬಹುದು. ಬೇರೆ ಎಲ್ಲ ಜನಪ್ರಿಯ ಹೀರೋಗಳನ್ನು ಚಿತ್ರಗಳನ್ನೂ ಸೇರಿಸಿದರೂ ಸಂಖ್ಯೆ 15 ದಾಟುವುದಿಲ್ಲ. ಅಲ್ಲಿಗೆ ಈ ವರ್ಷವೂ ದೊಡ್ಡ ಮಟ್ಟದಲ್ಲಿ ಹೊಸಬರ ಚಿತ್ರಗಳು ಬಿಡುಗಡೆಯಾಗುತ್ತವೆ ಮತ್ತು ಅವುಗಳು ಬಂದ ದಾರಿಗೆ ಸುಂಕವಿಲ್ಲವೆಂದು ಮಾಯವಾಗುತ್ತವೆ.

ಇದರ ಬಿಸಿ ನೇರವಾಗಿ ತಟ್ಟುತ್ತಿರುವುದು ಚಿತ್ರಮಂದಿರಗಳಿಗೆ. ಹಳಬರು ಬರುತ್ತಿಲ್ಲ, ಹೊಸಬರನ್ನು ಕೇಳುವವರಿಲ್ಲಎಂದರೆ ಚಿತ್ರಮಂದಿರದವರು ಏನು ತಾನೇ ಮಾಡಬೇಕು? ಕೆಲವು ಚಿತ್ರಗಳು, 10 ದಿನ, 25 ದಿನ ಓಡಿದ್ದೇ ಸುದ್ದಿಯಾಗುತ್ತದೆ. ಆದರೆ, ಅದರ ಮಧ್ಯದಲ್ಲಿ ಅದೆಷ್ಟು ಶೋಗಳು ಕ್ಯಾನ್ಸಲ್ ಆಗಿರುತ್ತವೆ ಎಂಬುದಕ್ಕೆ ಲೆಕ್ಕವೇ ಇರುವುದಿಲ್ಲ. ಒಂದು ಕಾಲದಲ್ಲಿ ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ಗಳಲ್ಲಿ ಚಿತ್ರಪ್ರದರ್ಶನಕ್ಕೆ ಅವಕಾಶವೇ ಸಿಗುತ್ತಿಲ್ಲ ಎಂಬ ಮಾತಿತ್ತು. ಇಂದು ಅವಕಾಶಗಳೇನೋ ಸಿಗುತ್ತಿವೆ. ಆದರೆ, ಅದೆಷ್ಟು ಚಿತ್ರ ನೋಡುವುದಕ್ಕೆ ಜನರೇ ಬರುತ್ತಿಲ್ಲ. ಬುಕ್ ಮೈ ಶೋನಲ್ಲಿ ನೋಡಿದರೆ ಪ್ರದರ್ಶನವೇನೋ ಇರುತ್ತದೆ. ಆದರೆ, ಚಿತ್ರಮಂದಿರಕ್ಕೆ ಹೋಗಿ ನೋಡಿದರೆ, ಶೋ ಕ್ಯಾನ್ಸಲ್ ಆಗಿರುತ್ತದೆ. ಏಕೆಂದರೆ, ಒಂದು ಚಿತ್ರ ಪ್ರದರ್ಶಿಸುವುದಕ್ಕೆ ಕನಿಷ್ಠ ಐದು ಮಂದಿಯಾದರೂ ಬೇಕು. ಆದರೆ, ಎಷ್ಟೋ ಬಾರಿ ಒಂದು ಪ್ರದರ್ಶನಕ್ಕೆ ಅಷ್ಟೂ ಜನರಿರುವುದಿಲ್ಲ.

ಹೀಗಾಗಿ ಅನೇಕ ಮಲ್ಟಿಪೆಕ್ಸ್ಗಳು ಜನರ ಅಭಾವದಿಂದ ಬಾಗಿಲು ಮುಚ್ಚುತ್ತಿವೆ. ಪಿವಿಆರ್-ಇನಾಕ್ಸ್ ಸಂಸ್ಥೆಯೇ ಈ ವರ್ಷದ ಮೊದಲ ಮೂರು ತಿಂಗಳಲ್ಲಿ 333 ಕೋಟಿ ರೂ. ನಷ್ಟವಾಗಿದೆ ಎಂದು ಸೂಚಿಸಿದೆ. ಕಳೆದ ವರ್ಷದ ಮೊದಲ ಮೂರು ತಿಂಗಳಲ್ಲಿ 107 ಕೋಟಿ ರೂ. ನಷ್ಟ ಆಗಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಆ ನಷ್ಟ ಇನ್ನೂ 226 ಕೋಟಿ ರೂಗಳಷ್ಟು ಹೆಚ್ಚಾಗಿದೆ. ಈ ನಷ್ಟದ ಹೊಡೆದ ಹೇಗಿದೆಯೆಂದರೆ, ಮುಂದಿನ ಆರು ತಿಂಗಳುಗಳಲ್ಲಿ ಈ ಸಮೂಹದ 50 ಮಲ್ಟಿಪ್ಲೆಕ್ಸ್ಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಇದಕ್ಕೆ ಪ್ರೇಕ್ಷಕರ ಅಭಾವವೇ ಪ್ರಮುಖ ಕಾರಣ ಎಂದು ಹೇಳುವುದು ತಪ್ಪಾಗುತ್ತದೆಯಾದರೂ, ಅದು ಸಹ ಒಂದು ಕಾರಣ. ಇದು ಬರೀ ಪಿವಿಆರ್-ಐನಾಕ್ಸ್ನ ಕಥೆ ಮಾತ್ರವಲ್ಲ. ಬೇರೆ ಮಲ್ಟಿಪ್ಲೆಕ್ಸ್ ಚೈನ್ಗಳು ಇದೇ ತರಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಪಿವಿಆರ್-ಐನಾಕ್ಸ್ ರೀತಿಯಲ್ಲಿ ಸುದ್ದಿಯಾಗಿಲ್ಲ ಅಷ್ಟೇ.

ಹಾಗಾಗಿ, ಜನರನ್ನು ಸೆಳೆಯುವುದಕ್ಕೆ ಮಲ್ಟಿಪ್ಲೆಕ್ಸ್ನವರು ಏನೇನೋ ಮಾಡುತ್ತಿದ್ದಾರೆ. ಅದರಲ್ಲಿ 99 ರೂ. ಟಿಕೆಟ್ ಸಹ ಒಂದು. ಇದೆಲ್ಲದರ ಬದಲು ಟಿಕೆಟ್ ದರ ಮತ್ತು ತಿಂಡಿಯ ಬೆಲೆ ಕಡಿಮೆ ಮಾಡುವುದರ ಜೊತೆಗೆ, ಮಲ್ಟಿಪ್ಲೆಕ್ಸ್ಗಳು ಎಲ್ಲ ವರ್ಗದ ಪ್ರೇಕ್ಷಕರಿಗೂ ಎಟುಕುವಂತಾದರೆ, ಆಗ ನಷ್ಟ ಕಡಿಮೆ ಮಾಡಿಕೊಳ್ಳುವುದರ ಜೊತೆಗೆ, ಜನ ಇನಷ್ಟು ದೊಡ್ಡ ಸಂಖ್ಯೆಯಲ್ಲಿ ಚಿತ್ರ ನೋಡುವುದಕ್ಕೆ ಬರಬಹುದೇನೋ? ಅದರಿಂದ ಒಂದು ಸಮಸ್ಯೆಯೇನೋ ಬಗೆಹರಿಯಬಹದು. ಜನರನ್ನು ಚಿತ್ರಮಂದಿರಕ್ಕೇನೋ ಕರೆಸಿಕೊಳ್ಳಬಹುದು. ಆದರೆ, ಅವರನ್ನು ಕೂರಿಸುವಂತಹ ಚಿತ್ರಗಳು ಬರಬೇಕಲ್ಲ?

Recommended For You

Leave a Reply

error: Content is protected !!
%d bloggers like this: