ಸುಧಾಕರ ಬನ್ನಂಜೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಗುರುತಿಸಿಕೊಂಡಿರುವ ಹಿರಿಯ ಪ್ರತಿಭೆ. ಮೂಲತಃ ಉಡುಪಿಯ ಬನ್ನಂಜೆಯವರಾದ ಇವರು ತುಳು ರಂಗಭೂಮಿಯ ಮೂಲಕ ಕಲಾರಂಗ ಪ್ರವೇಶ ಮಾಡಿದವರು. ತುಳು ನಾಟಕ, ಸಿನಿಮಾಗಳ ಜೊತೆಗೆ ಕನ್ನಡ ಸಿನಿಮಾ, ಧಾರಾವಾಹಿಗಳನ್ನೂ ನಿರ್ದೇಶಿಸಿ, ನಟಿಸಿ ಹೆಸರಾದವರು. ಯಕ್ಷಗಾನ, ನಾಟಕ, ಸಿನಿಮಾ, ಸಾಹಿತ್ಯ ಹೀಗೆ ಎಲ್ಲ ವಿಭಾಗಗಳಲ್ಲಿ ಸುಮಾರು 4 ದಶಕಗಳಿಂದ ಸಕ್ರಿಯವಾಗಿರುವವರು. ಇಂಥ ಸುಧಾಕರ್ ಬನ್ನಂಜೆ ಈ ಬಾರಿ ತುಳು ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಅರ್ಹ ವ್ಯಕ್ತಿ ಎನ್ನುವ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಧ್ವನಿಸುತ್ತಿದೆ. ಈ ಬಗ್ಗೆ ಸ್ವತಃ ಸುಧಾಕರ್ ಬನ್ನಂಜೆ ಅವರನ್ನೇ ಸಿನಿಕನ್ನಡ ಮಾತನಾಡಿಸಿದೆ.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೆಸರು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಏನಂತೀರಿ?
ಹೌದು. ನಾನು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಾಗಿದ್ದೇನೆ. ಇದನ್ನು ಅರ್ಥಮಾಡಿಕೊಂಡು ಮತ್ತು ನನ್ನ ಉದ್ದೇಶ ಶುದ್ಧಿಯ ಬಗ್ಗೆ ಭರವಸೆ ಇರಿಸಿ ನನಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಕೃತಜ್ಞನಾಗಿದ್ದೇನೆ.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ಮುಖ್ಯವಾಗಿ ಮಾಡಬೇಕು ಎನ್ನುವ ಕನಸು ಇಟ್ಟುಕೊಂಡಿದ್ದೀರಿ?
ನನಗೆ ತುಳುವಿನ ಬಗ್ಗೆ ಸಾಕಷ್ಟು ಕನಸುಗಳಿವೆ. ತುಳು ಭಾಷೆ ಕರಾವಳಿಯ ಎಲ್ಲ ಜಾತಿಯವರೂ ಆಡುವಂಥ ಭಾಷೆ. ಹಿಂದುಗಳು, ಮುಸಲ್ಮಾನರು, ಕ್ರೈಸ್ತರು ಎಲ್ಲರೂ ವ್ಯಾವಹಾರಿಕವಾಗಿ ಬಳಸುವ ಭಾಷೆ ತುಳು. ಇದಕ್ಕಾಗಿ ಪ್ರತಿಯೊಬ್ಬರ ಮನೆಗೂ ತುಳು ಅಕಾಡೆಮಿ ಮುಟ್ಟುವಂತಾಗಬೇಕು. ಪ್ರತಿಯೊಂದು ಮನೆಮನಕ್ಕೂ ಅಕಾಡೆಮಿ ತಲುಪಬೇಕು. ಹತ್ತೈವತ್ತು ಜನ ಸಭೆ ಸೇರಿದಾಗ ಅಕಾಡೆಮಿ ಅಭಿವೃದ್ಧಿ ಆಗುವುದಿಲ್ಲ. ಅಕಾಡೆಮಿಯು ತನ್ನ ಅಸ್ತಿತ್ವವನ್ನು ಜನಸಾಮಾನ್ಯರಿಗೂ ಮನದಟ್ಟು ಮಾಡಿಕೊಡುವಂಥ ಕೆಲಸ ಮಾಡಬೇಕು ಎಂದು ನಾನು ಬಯಸುತ್ತೇನೆ. ತುಳು ಸಿನಿಮಾ, ನಾಟಕ, ದೈವಾರಾಧನೆ, ತುಳು ಜಾನಪದ ಕ್ರೀಡೆಗಳು ಇವೆಲ್ಲಗಳಿಗೂ ಸರ್ಕಾರದ ಕಡೆಯಿಂದ ಇನ್ನಷ್ಟು ಪ್ರೋತ್ಸಾಹ ಲಭಿಸುವಂತಾಗಬೇಕು. ಅದಕ್ಕಾಗಿ ಪ್ರಯತ್ನಿಸುವ ಛಲ ನನ್ನಲ್ಲಿದೆ.
ಈ ಬಾರಿ ನೀವೇ ಅಧ್ಯಕ್ಷ ಸ್ಥಾನದಲ್ಲಿ
ಕಾರ್ಯನಿರ್ವಹಿಸಬೇಕು ಎನ್ನುವ ಹಠತೊಟ್ಟಿದ್ದೇಕೆ?
ಇವತ್ತು ರಾಜಕೀಯದಲ್ಲಿ ಕೋಮು ಬೆರೆಸಲಾಗುತ್ತಿದೆ. ಬಿಜೆಪಿ ಪಕ್ಷದವರು ಅಧಿಕಾರದಲ್ಲಿದ್ದಾಗ ತುಳು ಸಾಹಿತ್ಯ ಅಕಾಡೆಮಿ ಕೂಡ ಬಿಜಪಿಗರ ಪರವಾಗಿ ಮಾತ್ರ ಕಾರ್ಯನಿರ್ವಹಿಸುವ ವಾತಾವರಣ ಸೃಷ್ಟಿಸಿದೆ. ಇದರಿಂದ ಹಲವಾರು ಪ್ರಾಮಾಣಿಕ ಸಾಧಕರನ್ನು ಕಡೆಗಣಿಸಿದನ್ನು ಕಂಡಿದ್ದೇನೆ. ನನ್ನನ್ನು ಕೂಡ ಕಾಂಗ್ರೆಸ್ ನಲ್ಲಿದ್ದೆ ಎನ್ನುವ ಕಾರಣಕ್ಕಾಗಿ ಪ್ರಶಸ್ತಿಗಳ ವಿಚಾರದಲ್ಲೂ ಪರಿಗಣನೆಯಿಂದ ಹೊರಗಿಟ್ಟಿದ್ದನ್ನು ಕಂಡಿದ್ದೇನೆ. ನನಗೆ ಆಗಿರುವ ಈ ಅನುಭವ ಬೇರೆಯವರಿಗೆ ಆಗಬಾರದು ಎಂದಾದರೆ ನಾನೇ ಸ್ವತಃ ಅಕಾಡೆಮಿ ಅಧ್ಯಕ್ಷನಾಗಬೇಕು ಎಂದು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇನೆ. ನಾನು ಈ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ನನ್ನ ಒಟ್ಟು ಸಾಧನೆಗಳು ಈ ಸ್ಥಾನಕ್ಕೆ ಅರ್ಹವಾಗಿವೆ ಎನ್ನುವುದನ್ನು ಸರ್ಕಾರ ಮನದಟ್ಟು ಮಾಡಿಕೊಂಡು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿಯನ್ನು ನೀಡಬೇಕು ಎಂದು ಮನವಿ ಮಾಡುತ್ತೇನೆ.
ನಿಮ್ಮ ಅಧ್ಯಕ್ಷತೆಯ ಬಳಿಕ ತುಳು ಸಾಂಸ್ಕೃತಿಕ ಲೋಕದಲ್ಲಿ ಮುಖ್ಯವಾಗಿ ಯಾವ ಬದಲಾವಣೆ ಉಂಟಾಗಬಹುದು?
ಎಲ್ಲವನ್ನು ಈಗಲೇ ಹೇಳುವುದಕ್ಕಿಂತ, ಅಧ್ಯಕ್ಷನಾಗಿ ಅಧಿಕಾರ ವಹಿಸಿದ ಮೇಲೆ ಮಾಡಿ ತೋರಿಸಲು ಬಯಸುತ್ತೇನೆ. ಉಳಿದಂತೆ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಬಳಿಕ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಉಪಭಾಷೆಯಾಗಿಸಲು ಶ್ರಮಿಸುತ್ತೇನೆ. ನಶಿಸಿ ಹೋಗುತ್ತಿರುವ ತುಳುವಿನ ಕಲೆಗಳಿಗೆ ಮರುಜೀವ ತುಂಬಿ, ತುಳು ಸಾಂಸ್ಕೃತಿಕ ವೈಭವ ಬೆಳೆಸುವ ಉದ್ದೇಶ ಹೊಂದಿದ್ದೇನೆ. ಕರ್ನಾಟಕದಲ್ಲಿ ತುಳು ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ ಘೋಷಣೆಯಾಗುವಾಗ ಪ್ರಾದೇಶಿಕ ಭಾಷೆಗಳಲ್ಲಿ ಒಂದು ಚಿತ್ರಕ್ಕೆ ಮಾತ್ರ ಪ್ರಶಸ್ತಿ ನೀಡಲಾಗುತ್ತದೆ. ಆದರೆ ನಾನು ಇನ್ನಷ್ಟು ಪ್ರಶಸ್ತಿಗಳನ್ನು ಹೆಚ್ಚಿಸುವಂತೆ ಆಗ್ರಹಿಸುತ್ತೇನೆ.
ನಮ್ಮ ವತಿಯಿಂದ ನಿಮಗೆ ಶುಭಾಶಯಗಳು
ಹೃದಯಪೂರ್ವಕ ವಂದನೆಗಳು