ತುರ್ತು ಪರಿಸ್ಥಿತಿಯ ಕಾಲದಲ್ಲಿ ನಾಡಿನ ಹಿರಿಯ ಸಾಹಿತಿಗಳಿಂದ ಆರಂಭವಾದ ಸಮುದಾಯ ಸಾಂಸ್ಕೃತಿಕ ಸಂಘಟನೆಯು ರಾಜ್ಯದ ಸಾಮಾಜಿಕ, ರಾಜಕೀಯ ಜಾಗೃತಿಗೆ ತನ್ನದೇ ಆದ ಕೊಡುಗೆ ನೀಡಿದೆ. ತುರ್ತು ಪರಿಸ್ಥಿತಿಯ ವೇಳೆಯಲ್ಲಿ ರಂಗಚಟುವಟಿಕೆಗಳ ಮೂಲಕವೇ ಜನರನ್ನು ಪ್ರಭುತ್ವದ ವಿರುದ್ಧ ಬಡಿದೇಳುವಂತೆ ಮಾಡಿದ್ದ ಸಮುದಾಯವು ಈ ಕಾಲದಲ್ಲೂ ಪ್ರಸ್ತುತತೆಯನ್ನು ಪಡೆದುಕೊಂಡಿದೆ. ಅಂದು ಘೋಷಿತ ತುರ್ತು ಪರಿಸ್ಥಿತಿ ಇದ್ದರೆ ಇಂದು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಜನರ ಮೇಲೆ ಅಘೋಷಿತ ತುರ್ತು ಪರಿಸ್ಥಿತಿ ಇದೆ.
ನಾಟಕವೆಂಬುದು ಶ್ರೀಮಂತ ಜನರ ಮನರಂಜನೆಯ ಮತ್ತು ಹಣ ಮಾಡುವ ಸರಕು ಎಂದು ಭಾವಿಸಿದ್ದ ಕಾಲದಲ್ಲಿ ನಾಟಕವೆಂದರೆ ಜನರ ನೋವುಗಳನ್ನು ಹೇಳುವ ಮಾಧ್ಯಮ ಎಂದು ತೋರಿಸಿಕೊಟ್ಟಿದ್ದು ಸಮುದಾಯ. “ಕಲೆಗಾಗಿ ಕಲೆ ಅಲ್ಲ. ಜನರಿಗಾಗಿ ಕಲೆ” ಎಂಬ ದ್ಯೇಯ ವಾಕ್ಯದೊಂದಿಗೆ ನಾಟಕಗಳನ್ನು ಅಕ್ಷರಶಃ ಬೀದಿಗಿಳಿಸಿ ಜನಸಾಮಾನ್ಯರಿಗೆ ಚಿಂತನೆಗಳನ್ನು ಮುಟ್ಟಿಸುವಲ್ಲಿ ಬೆಂಗಳೂರು ಸಮುದಾಯ ಯಶಸ್ವಿಯಾಗಿದೆ.
ಬೆಂಗಳೂರು ಸಮುದಾಯ ಪ್ರಸ್ತುತಪಡಿಸುತ್ತಿರುವ ತುಘಲಕ್ ನಾಟಕ ಇದೀಗ 96-97 ನೇ ಪ್ರದರ್ಶನ ಕಾಣುತ್ತಿದೆ. ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ವಿರಚಿತ ತುಘಲಕ್ ನಾಟಕ ಈಗಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಗಳನ್ನು ಇತಿಹಾಸದ ಒಳನೋಟದಲ್ಲಿ ನಮ್ಮ ಆಂತರ್ಯವನ್ನು ತಟ್ಟುತ್ತದೆ. ಬೆಂಗಳೂರಿನ ರಂಗಶಂಕರದಲ್ಲಿ 2023 ಆಗಸ್ಟ್ 06 ರವಿವಾರ ಸಂಜೆ 3.30 ಮತ್ತು 7.30 ಕ್ಕೆ ತುಘಲಕ್ ನಾಟಕ ಪ್ರದರ್ಶನಗೊಳ್ಳಲಿದ್ದು ಖ್ಯಾತ ನಿರ್ದೇಶಕ ಸಾಮ್ ಕುಟ್ಟಿ ಪಟ್ಟಂಕರಿ ನಾಟಕವನ್ನು ನಿರ್ದೇಶಿಸಿದ್ದು, ಶ್ರೀಪಾದ್ ಭಟ್ ಅವರು ಸಹ ನಿರ್ದೇಶನ ಮಾಡಿದ್ದಾರೆ.