ಚಿತ್ರ: ರವಿಕೆ ಪ್ರಸಂಗ
ತಾರಾಗಣ: ಗೀತಾಭಾರತಿ ಭಟ್, ಪ್ರಶಾಂತ್ ಕುಮಾರ್
ನಿರ್ದೇಶನ: ಸಂತೋಷ್ ಕೊಡೆಂಕೇರಿ
ನಿರ್ಮಾಣ: ದೃಷ್ಟಿ ಬ್ಯಾನರ್
ಸೀರೆ ಹೇಗೆ ಭಾರತೀಯ ಮಹಿಳೆಯರ ಸಂಭ್ರಮವೋ, ಅದರೊಂದಿಗೆ ಸಂಗಮಿಸಿರುವ ರವಿಕೆ ಅವರೊಳಗಿನ ಸಂಚಲನ. ಈ ಭಾವಗಳ ಸಂಕಲನಕ್ಕೆ ಜೀವ ನೀಡಿರುವ ಚಿತ್ರವೇ ರವಿಕೆ ಪ್ರಸಂಗ.
ಇದು ದಕ್ಷಿಣ ಕನ್ನಡ ಮತ್ತು ಕೊಡಗಿನ ಮಧ್ಯಭಾಗದ ಸಂಪಾಜೆ ಎನ್ನುವಲ್ಲಿ ನಡೆಯುವ ಕತೆ. ಸಾನ್ವಿ ಸಂಪಾಜೆ ಎನ್ನುವ 28 ವರ್ಷದ ಯುವತಿಯ ಬಾಳಿನಲ್ಲಿ ನಡೆಯುವ ಘಟನೆಯೇ ಇದರ ವಸ್ತು. ಆ ಊರಲ್ಲಿ ಟೈಲರ್ ಚಂದ್ರಣ್ಣ ಜನಪ್ರಿಯ ಲೇಡೀಸ್ ಟೈಲರ್. ಸಾನ್ವಿ ಕೂಡ ಆತನಲ್ಲೇ ತನ್ನ ರವಿಕೆ ಹೊಲಿಸಬೇಕು ಎಂದುಕೊಳ್ಳುತ್ತಾಳೆ. ಆದರೆ ಟೈಲರ್ ಹೊಲಿದು ಕೊಟ್ಟ ರವಿಕೆ ಈಕೆಯ ಜೀವನದಲ್ಲೇ ಪ್ರಮುಖ ತಿರುವಿಗೆ ಕಾರಣವಾಗುತ್ತದೆ. ಇದರಿಂದ ನೊಂದ ಸಾನ್ವಿ ಟೈಲರ್ ವಿರುದ್ಧ ಕೋರ್ಟ್ ಮೆಟ್ಟಿಲೇರುತ್ತಾಳೆ. ಟೈಲರ್ ಚಂದ್ರಣ್ಣನ ಕಾರಣ ಸಾನ್ವಿಗೆ ಉಂಟಾದ ಸಮಸ್ಯೆ ಏನು? ಇದಕ್ಕೆ ಕೋರ್ಟ್ ನಲ್ಲಿ ಸಿಕ್ಕ ಪರಿಹಾರ ಏನು ಎನ್ನುವುದನ್ನು ಕ್ಲೈಮಾಕ್ಸ್ ನಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ.
ರವಿಕೆ ಎನ್ನುವ ವಸ್ತುವನ್ನು ಕತೆಯಾಗಿ ಆಯ್ದುಕೊಂಡಿರುವುದೇ ಚಿತ್ರದ ಮೊದಲ ಆಕರ್ಷಣೆ. ಆದರೆ ಚಿತ್ರದಲ್ಲಿ ಬರುವ ಟೈಲರ್ ಚಂದ್ರಣ್ಣನ ಯಕ್ಷಗಾನದ ವೇಷ, ನಾಯಕಿಯ ತಂದೆಯ ಮೀನು ಹಿಡಿಯುವ ಹವ್ಯಾಸ, ಮನಮುಟ್ಟುವಲ್ಲಿ ಸೋಲುತ್ತದೆ. ತುಳು ಮಿಶ್ರಿತ ಕರಾವಳಿಯ ಕನ್ನಡದ ಪ್ರಯೋಗ ಮಾತ್ರ, ಪರಿಸರದ ವಾತಾವರಣಕ್ಕೆ ಹೊಂದಿಕೊಂಡಂತಿದೆ. ಕತೆಯೊಳಗೆ ನಾಯಕಿ ಸಾನ್ವಿಗೆ ಸಮಸ್ಯೆಯಾಗಿರುವುದು ರವಿಕೆಯೊಂದೇ ಆಗಿರುವುದಿಲ್ಲ. ಪಾತ್ರಗಳ ಮೂಲಕವೇ ಇದನ್ನೊಂದು ‘ಸಿಲ್ಲಿ ಮ್ಯಾಟರ್’ ಎಂದು ಹೇಳುತ್ತಲೇ ಕ್ಲೈಮ್ಯಾಕ್ಸ್ನಲ್ಲಿ ನಿಜವಾದ ಸಮಸ್ಯೆಗೆ ಕನ್ನಡಿ ಹಿಡಿಯಲಾಗಿದೆ. ಆದರೆ ಅದುವರೆಗೆ ರವಿಕೆಯ 6 ಇಂಚು ಅಳತೆ ವ್ಯತ್ಯಾಸವನ್ನೇ ಇಟ್ಟುಕೊಂಡು ನಿರ್ದೇಶಕರು 60 ಅಡಿ ಆಳಕ್ಕೆ ಇಳಿದಿದ್ದಾರೆ. ಇದು ಮನಸಿನ ಆಳಕ್ಕೆ ಇಳಿಯಬೇಕಾದರೆ, ಚಿತ್ರವನ್ನು ಮನೆಯ ಮಹಿಳಾಮಣಿಯರ ಜತೆಯಲ್ಲೇ ಹೋಗಿ ನೋಡಬೇಕು.
ಇದು ಒಂದು ಮಾಸ್ ಅಂಶ ಹೊಂದಿರುವ ಚಿತ್ರವೇನಲ್ಲ. ಆದರೆ ಮನಸಿನ ಭಾವನೆಗೆ ಮೋಸವಾಗದ ರೀತಿಯಲ್ಲಿ ಚಿತ್ರವನ್ನು ಪ್ರಸ್ತುತ ಪಡಿಸಿದ್ದಾರೆ ನಿರ್ದೇಶಕ ಸಂತೋಷ್ ಕೊಡೆಂಕೇರಿ. ಇದಕ್ಕೆ ಪ್ರಧಾನ ಪಾತ್ರಗಳ ಆಯ್ಕೆಯೂ ಪೂರಕವಾಗಿದೆ. ಸಾನ್ವಿ ಸಂಪಾಜೆ ಪಾತ್ರಕ್ಕೆ ಕಿರುತೆರೆಯ ಖ್ಯಾತ ನಟಿ ಗೀತಾ ಭಾರತಿ ಭಟ್ ಜೀವ ತುಂಬಿದ್ದಾರೆ. ಗೀತಾ ಭಾರತಿಯವರ ದೇಹದ ಆಕಾರವನ್ನು ಕಥಾ ಸಂದರ್ಭಕ್ಕೆ ಹೊಂದುವಂತೆ ಪ್ರಸ್ತುತ ಪಡಿಸಿರುವುದು ವಿಶೇಷ. ಕತೆ ನಡೆಯುವ ಜಾಗಕ್ಕೆ ತಕ್ಕಂತೆ, ಚಿತ್ರ ಪೂರ್ತಿ ಮಂಗಳೂರು ಕರಾವಳಿ ಭಾಗದ ಕನ್ನಡವನ್ನೇ ಬಳಸಲಾಗಿದೆ. ಗೀತಾ ಭಾರತಿ ಭಟ್ ಮೂಲತಃ ಕರಾವಳಿಯವರೇ ಆಗಿರುವುದರಿಂದ, ಮಾತಿನಲ್ಲಿನ ನೈಜತೆ ಆಪ್ತವಾಗುತ್ತದೆ. ತಾಯಿ ಪಾತ್ರ ಮಾಡಿರುವ ಪದ್ಮಜಾರಾವ್ಗೆ ನೀಡಲಾಗಿರುವ ಕಂಠ ಕೂಡ, ವ್ಯತ್ಯಾಸವೇ ಗೊತ್ತಾದಂತೆ ಹೊಂದಿಕೊಂಡಿರುವುದು ಅದ್ಭುತ. ಟೈಲರ್ ಚಂದ್ರಣ್ಣನಾಗಿ ಸಂಪತ್ ಕುಮಾರ್ ವಿಭಿನ್ನ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಆದರೆ ಕ್ಲೈಮ್ಯಾಕ್ಸ್ನಲ್ಲಿ ಇಡೀ ಚಿತ್ರವನ್ನು ಹೆಗಲಲ್ಲಿ ಹೊತ್ತುಕೊಳ್ಳುವಂತೆ ನಟಿಸಿರುವ ಕೀರ್ತಿ ವಕೀಲ ಪಾತ್ರಧಾರಿ ರಾಕೇಶ್ ಮಯ್ಯಗೆ ಸಲ್ಲುತ್ತದೆ. ಅಸಮರ್ಥ ವಕೀಲನೆಂಬಂತೆ ಪರಿಚಯಿಸಲ್ಪಡುವ ಪಾತ್ರದ ಪೂರ್ತಿ ಸಾಮರ್ಥ್ಯ ಚಿತ್ರದ ಅಂತ್ಯದೊಳಗೆ ಅನಾವರಣಗೊಳ್ಳುತ್ತದೆ.
ನ್ಯಾಯಾಧೀಶೆಯಾಗಿ ಸುಮನ್ ರಂಗನಾಥ್, ನಾಯಕಿಯ ತಂದೆಯಾಗಿ ಕೃಷ್ಣಮೂರ್ತಿ ಕವತ್ತಾರು, ಪೊಲೀಸ್ ಅಧಿಕಾರಿಯಾಗಿ ರಘು ಪಾಂಡೇಶ್ವರ, ಮೊದಲಾದವರು ತಾರಾಗಣದಲ್ಲಿದ್ದಾರೆ. ವಿನಯ್ ಶರ್ಮ ಸಂಗೀತದಲ್ಲಿ ‘ಮನಸಲಿ ಜೋರು ಕಲರವ..’ ಹಾಡು ಇಳಯರಾಜಾ ಮಾಧುರ್ಯತೆ ನೆನಪಿಸುತ್ತದೆ. ಮಾನಸಾ ಹೊಳ್ಳ ಕಂಠ ಮಾಧುರ್ಯಕ್ಕೂ ಇದರಲ್ಲಿ ಪಾಲಿದೆ. ಪಾವನಾ ಸಂತೋಷ್ ಇದನ್ನು ಬರಿಯ ಒಂದು ರವಿಕೆಯ ಕತೆಯಾಗಿ ಬರೆದಿಲ್ಲ. ರವಿಕೆ ಧರಿಸಿದ ಮಹಿಳೆಯರ ಕನವರಿಕೆಗಳೂ ಇಲ್ಲಿವೆ. ಸ್ಪರ್ಧಾತ್ಮಕ ಕಮರ್ಷಿಯಲ್ ಚಿತ್ರಗಳ ಮಧ್ಯೆ ಇಂಥದೊಂದು ವಿಷಯಾಧಾರಿತ ಚಿತ್ರವನ್ನು ನೀಡಿದ ನಿರ್ದೇಶಕ ಸಂತೋಷ್ ಕೊಡೆಂಕೇರಿ ಮತ್ತು ತಂಡ ಖಂಡಿತವಾಗಿ ಅಭಿನಂದನಾರ್ಹರು.