ಕನ್ನಡ ಪತ್ರಿಕಾ ಲೋಕದ ಹಿರಿಯ ಪತ್ರಕರ್ತ, ಖ್ಯಾತ ನಿರೂಪಕ, ಕಲಾವಿದ ಮನೋಹರ ಪ್ರಸಾದ್ ನಿಧನರಾಗಿದ್ದಾರೆ.
ಮನೋಹರ ಪ್ರಸಾದ್ ಮೂಲತಃ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದವರು. ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ ‘ನವ ಭಾರತ’ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಿದ್ದರು.
ಕರಾವಳಿಯ ನಂಬರ್ 1 ಪತ್ರಿಕೆ ಎನಿಸಿದ ‘ಉದಯವಾಣಿ’ಯಲ್ಲಿ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದರು. ಬಳಿಕ ಮುಖ್ಯ ವರದಿಗಾರರಾಗಿ, ಬ್ಯೂರೋ ಚೀಫ್ ಆಗಿದ್ದ ಅವರು ಸಹಾಯಕ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹೀಗೆ ಉದಯವಾಣಿಯಲ್ಲಿಯೇ ಸತತ 36 ವರ್ಷಗಳ ಸೇವೆ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳ ಹಿಂದೆ ನಿವೃತ್ತಿಗೊಂಡಿದ್ದ ಮನೋಹರ್ ಪ್ರಸಾದ್ ಅವರಿಗೆ ಆನಾರೋಗ್ಯವೂ ಕಾಡಿತ್ತು.
ಆಕರ್ಷಕ ಲೇಖನಗಳನ್ನು ಬರೆಯುತ್ತಾ, ಮಂಗಳೂರು ಕರಾವಳಿಯ ಮಾಧ್ಯಮಲೋಕದ ಮಾರ್ಗದದರ್ಶಕರಾಗಿ ಗುರುತಿಸಿಕೊಂಡಿದ್ದ ಮನೋಹರ್ ಪ್ರಸಾದ್, ಸ್ಪುರದ್ರೂಪಿ ನಟನಾಗಿ, ಮಾತುಗಾರಿಕೆಯ ನಿರೂಪಕರಾಗಿ ಕೂಡ ಹೆಸರಾಗಿದ್ದರು. ಮನೋಹರ ಪ್ರಸಾದ್ ಅವರ ಸಾವು ಆಪ್ತವಲಯಕ್ಕೆ ಆಘಾತ ಉಂಟು ಮಾಡಿದೆ. ಮಾಧ್ಯಮ ಕ್ಷೇತ್ರದ ಸಾಕಷ್ಟು ಯುವ ಪ್ರತಿಭೆಗಳಿಗೆ ಪ್ರೋತ್ಸಾಹಕರಾಗಿದ್ದ ಮನೋಹರ ಪ್ರಸಾದ್ ಅವರ ನಿಧನ ಅಕ್ಷರಶಃ ತುಂಬಲಾರದ ನಷ್ಟವನ್ನೇ ಉಂಟು ಮಾಡಿರುವುದು ಸತ್ಯ.