
ಚಿತ್ರ: ಕೋಟಿ
ನಿರ್ದೇಶನ: ಪರಮ್
ನಿರ್ಮಾಣ: ಜಿಯೋ ಸಿನಿಮಾಸ್
ತಾರಾಗಣ: ಧನಂಜಯ, ಮೋಕ್ಷಾ ಕುಶಾಲ್
ಡಾ.ರಾಜ್ಕುಮಾರ್ ನಟನೆಯ ಭಲೇ ಕಳ್ಳ, ವಿಷ್ಣುವರ್ಧನ್ ನಟನೆಯ ಕಾರ್ಮಿಕ ಕಳ್ಳನಲ್ಲ ಸೇರಿದಂತೆ ಕಳ್ಳನ ಬಗ್ಗೆ ಹೇಳುವ ಎಷ್ಟೋ ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಆದರೆ ಕಳ್ಳತನವನ್ನೇ ದ್ವೇಷಿಸುವ ಕೋಟಿ ಎನ್ನುವ ಯುವಕ ಕಳ್ಳನಾಗಬೇಕಾದ ಪಾತ್ರವನ್ನು ಧನಂಜಯ್ ಮಾಡಿದ್ದಾರೆ.
ಕೋಟಿ ಮಧ್ಯಮ ವರ್ಗದ ಮನೆಯ ಯುವಕ. ನಿಯತ್ತಾಗಿ ಕಾರು, ಟೆಂಪೋ ಬಾಡಿಗೆಗೆ ಚಲಾಯಿಸುವುದಷ್ಟೇ ಆತನ ಕೆಲಸ. ಆದರೆ ಕಾರು ಮತ್ತು ಟೆಂಪೋ ಕೊಳ್ಳಲು ಫೈನಾನ್ಸ್ ನೀಡಿದ ದೀನು ಸಾಹುಕಾರನ ಕಣ್ಣಲ್ಲಿ ಈತನ ಬೆಲೆಯೇ ಬೇರೆ. ಈತನನ್ನು ಶೂಟರ್ ಆಗಿಸಬೇಕೆನ್ನುವ ಗುರಿ ಆತನದು. ಆದರೆ ದೀನು ಸಾಹುಕಾರನ ಬಲೆಯಿಂದ ಕೋಟಿ ತಪ್ಪಿಸಿಕೊಳ್ತಾನ? ಅದು ಹೇಗೆ ಎನ್ನುವುದು ಈ ಚಿತ್ರದ ಕತೆ.
ಕೋಟಿಯಾಗಿ ಧನಂಜಯ್ ಮಧ್ಯಮ ವರ್ಗದ ಕುಟುಂಬದ ಮನೆಮಗನಂತೆ ಕಾಣಿಸಿದ್ದಾರೆ. ಚಿತ್ರದ ಮುಕ್ಕಾಲುಭಾಗದಲ್ಲಿ ನಾಯಕ ಕೆನ್ನೆಗೆ ಏಟು ತಿನ್ನುವುದಷ್ಟೇ ಕೆಲಸ. ಕೊನೆಗೆ ನಾಯಕಿಯಲ್ಲಿ ಖುದ್ದಾಗಿ ಕೇಳಿ ಏಟು ತಿನ್ನುತ್ತಾನೆ! ಆದರೆ ಕ್ಲೈಮ್ಯಾಕ್ಸ್ನಲ್ಲಿ ಇದನ್ನೆಲ್ಲ ಬಡ್ಡಿ ಸಮೇತ ಹಿಂದಿರುಗಿಸುವುದು ದಿನು ಸಾಹುಕಾರನಿಗೆ. ಧನಂಜಯ್ ಡಾಲಿ ಧನಂಜಯ್ ಆಗಿ ಬದಲಾಗುವ ಹೊತ್ತಲ್ಲಿ ಚಿತ್ರ ಕೊನೆಯಾಗುತ್ತದೆ. ಮಾಸ್ ಪ್ರಿಯರಿಗೆ ಭಾಗ ಎರಡರಲ್ಲಿ ಮಾಸ್ ಆಗಿ ನೀಡಬಹುದೆನ್ನುವ ಸೂಚನೆಯನ್ನು ನಿರ್ದೇಶಕ ಪರಮ್ ಕೊಟ್ಟಿದ್ದಾರೆ.
ದಿನು ಸಾಹುಕಾರನಾಗಿ ರಮೇಶ್ ಇಂದಿರಾ ಮತ್ತೊಮ್ಮೆ ಸಪ್ತಸಾಗರಾದಾಚೆಯ ಮ್ಯಾನರಿಸಮ್ ತೋರಿಸಿದ್ದಾರೆ. ಧನಂಜಯ್ ತಾಯಿಯಾಗಿ ತಾರ, ಮಧ್ಯಮ ವರ್ಗದ ಮಹಿಳೆಯ ಪ್ರತಿನಿಧಿಯಾಗಿದ್ದಾರೆ. ತಾರಾಗೆ ಕಾಯಿಲೆ ಇದೆಯೆಂದು ಗೊತ್ತಾಗುವ ಸನ್ನಿವೇಶ, ಧನಂಜಯ್ನನ್ನು ಗೋಣಿಚೀಲದಲ್ಲಿ ಕಟ್ಟಿಹಾಕಿದ ದೃಶ್ಯಗಳ ಮೂಲಕ ನಿರ್ದೇಶಕರು ಸೆಂಟಿಮೆಂಟ್ಗೆ ಪ್ರಯತ್ನಿಸಿದ್ದಾರೆ. ರಂಗಾಯಣ ರಘು, ಬಲ ರಾಜ್ವಾಡಿಯಂಥ ಅಪ್ರತಿಮ ಕಲಾವಿದರಿದ್ದರೂ ಯಾವ ದೃಶ್ಯಗಳೂ ಮನಸ್ಸಿಗೆ ನಾಟುವುದಿಲ್ಲ ಎನ್ನುವುದು ಸತ್ಯ. ಲಂಚಕೋರ ಪೊಲೀಸ್ ಅಧಿಕಾರಿಯಾಗಿ ಸರ್ದಾರ್ ಸತ್ಯ ನಟನೆ ಇಷ್ಟವಾಗುತ್ತದೆ. ಧನಂಜಯ್ ಜೋಡಿಯಾಗಿ ನಟಿ ಮೋಕ್ಷ ಕುಶಾಲ್ಗೆ ಅಭಿನಯಕ್ಕೆ ತುಸು ಅವಕಾಶವಿರುವ ಪಾತ್ರವೇ ದೊರಕಿದೆ. ವಂಚಕನಾಗಿ ಶೋಭರಾಜ್ ಪಾವೂರ್ ಮನಸೆಳೆಯುತ್ತಾರೆ. ದುನಿಯಾ ವಿಜಯ್ ಅತಿಥಿಯಾಗಿ ಆಗಮಿಸಿದ್ದಾರೆ. ಪಾತ್ರದಲ್ಲಿ ಹೊಸತನ ಇದೆಯಾದರೂ ಈ ಪಾತ್ರವೂ ಕೂಡ ಪರಿಣಾಮಕಾರಿ ಅನಿಸದಿರುವುದು ವಿಪರ್ಯಾಸ. ಮೂರು ಗಂಟೆಗೆ ಸನಿಹವಿರುವ ಈ ಸಿನಿಮಾದ ದೃಶ್ಯಗಳು ನಿಧಾನವಾಗಿ ಸಾಗುವುದೇ ಪ್ರೇಕ್ಷಕರ ಆಸ್ವಾದನೆಗೆ ಆಯಾಸ ತರಿಸುವುದು ಸುಳ್ಳಲ್ಲ.

ಚಿತ್ರದ ಶೀರ್ಷಿಕೆ ಬೀಳುವಾಗಲೇ ಸಂಭಾಷಣೆಗಳು ಶುರುವಾಗುತ್ತವೆ. ಬಳಿಕ ಬರುವ ಹಾಡಿನ ನಡುವೆಯೂ ಸಂಭಾಷಣೆ. ಆದರೆ ಹೆಚ್ಚು ವಿಷಯಗಳನ್ನು ಕಡಿಮೆ ಸಂಭಾಷಣೆಯಲ್ಲಿ, ಪುಟ್ಟ ದೃಶ್ಯಗಳ ಮೂಲಕ ಕನ್ವಿನ್ಸ್ ಮಾಡಬಹುದಾದ ಇವತ್ತಿನ ಟ್ರೆಂಡ್ನಲ್ಲಿ ಈ ಚಿತ್ರವಿಲ್ಲ. ಇದೇ ಕಾರಣದಿಂದ ಪ್ರೇಕ್ಷಕರಿಗೆ ಧಾರಾವಾಹಿ ಫೀಲ್ ಕಂಡರೆ ಅಚ್ಚರಿ ಇಲ್ಲ. ಪ್ರಮುಖ ದೃಶ್ಯವೊಂದರಲ್ಲಿ ತೋರಿಸಲಾದ ನೆಕ್ಲೇಸ್, ಚಿನ್ನದಂತೆ ಅಲ್ಲದೆ ಡಮ್ಮಿಯಾಗಿ ಫೀಲ್ ನೀಡುವುದು ದೃಶ್ಯದ ಗಂಭೀರತೆಗೆ ಧಕ್ಕೆ ನೀಡುತ್ತದೆ. ಕಳ್ಳತನವೇ ಈ ಚಿತ್ರದ ಪ್ರಮುಖ ಅಂಶ. ಆದರೆ ಯಾವುದನ್ನೂ ಬೇರೆ ಚಿತ್ರದಿಂದ ಕದ್ದ ಹಾಗಿಲ್ಲ ಎನ್ನುವುದು ಸಮಾಧಾನದ ಸಂಗತಿ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕಲರ್ಫುಲ್ , ಸಭ್ಯ ಸಿನಿಮಾ ನೀಡಿದ್ದಾರೆ ಪರಮೇಶ್ವರ ಗುಂಡ್ಕಲ್.