
ಚಿತ್ರ: ಛೂ ಮಂತರ್
ನಿರ್ದೇಶನ: ನವನೀತ್
ನಿರ್ಮಾಣ: ತರುಣ್ ಶಿವಪ್ಪ
ತಾರಾಗಣ: ಶರಣ್, ಅದಿತಿ ಪ್ರಭುದೇವ, ಚಿಕ್ಕಣ್ಣ ಮೊದಲಾದವರು
ಛೂ ಮಂತರ್ ಹೆಸರೇ ಹೇಳುವಂತೆ ಮಂತ್ರ ತಂತ್ರಗಳ ಕತೆ. ಶರಣ್ ಗೆ ಈ ಪಾತ್ರ ಹೊಸದೇನಲ್ಲ. ಆದರೆ ಸಾಧ್ಯವಾದ ಮಟ್ಟಿಗೆ ಹೊಸ ಬಗೆಯಲ್ಲಿ ತೋರಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.
ಉತ್ತರಾಖಂಡದ ನಿಗೂಢ ಮನೆ ಮಾರ್ಗನ್ ಹೌಸ್. ಅಲ್ಲಿ ನಿಧಿ ಹುಡುಕಲು ಹೊರಡುವ ತಂಡದ ಕತೆ ಇದು. ಸಾಮಾನ್ಯವಾಗಿ ನಿಧಿ ಹುಡುಕುವವರು ದೆವ್ವದ ಕಾಟ ಎದುರಾದ ಬಳಿಕ ಮಂತ್ರವಾದಿಗಳನ್ನು ಸಮೀಪಿಸುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಮಾರ್ಗನ್ ಹೌಸ್ಗೆ ನಿಧಿ ಹುಡುಕಲು ಕರ್ನಾಟಕದಿಂದ ಹೊರಡುವವರೇ ಆಧುನಿಕ ಪ್ರೇತೋಚ್ಛಾಟಕರ ತಂಡ ಎನ್ನುವುದು ವಿಶೇಷ. ಡೈನಾಮೊ ಅಲಿಯಾಸ್ ಗೌತಮ್ ಈ ತಂಡದ ನಾಯಕ. ಡೈನಾಮೊ ಪಾತ್ರದಲ್ಲಿ ಶರಣ್ ನಟಿಸಿದ್ದಾರೆ. ಡೈನಾಮೊ ಸಹಾಯಕ ಆರ್ ಜೆ ಎನ್ನುವ ಪಾತ್ರದಲ್ಲಿ ಚಿಕ್ಕಣ್ಣ, ಮತ್ತೋರ್ವ ಸಹಾಯಕಿ ಆಕಾಂಕ್ಷ ಪಾತ್ರವನ್ನು ಅದಿತಿ ಪ್ರಭುದೇವ ನಿರ್ವಹಿಸಿದ್ದಾರೆ.
ಒಂದು ಕಡೆ ಶರಣ್ ತಂಡ ಮಾರ್ಗನ್ ಹೌಸ್ ಕಡೆಗೆ ಪಯಣಿಸುತ್ತಿರುತ್ತದೆ. ಮತ್ತೊಂದೆಡೆ ಮಾರ್ಗನ್ಹೌಸ್ ಹಿನ್ನೆಲೆಯನ್ನೂ ಪರದೆ ಮೇಲೆ ತೋರಿಸಲಾಗಿದೆ. ಅದು ಮನೆಯ ಫ್ಲ್ಯಾಶ್ ಬ್ಯಾಕ್ ಕತೆಯೇ ಅಥವಾ ಪ್ರೆಸೆಂಟ್ ನಲ್ಲಿ ನಡೆಯುತ್ತಿದೆಯೇ ಎನ್ನುವ ಗೊಂದಲ ಇರುವಾಗಲೇ ಚಿತ್ರದ ಮಧ್ಯಂತರ ಬರುತ್ತದೆ. ಚಿತ್ರದ ಮೇಜರ್ ಟ್ವಿಸ್ಟ್ ಇಲ್ಲಿಂದಲೇ ಆರಂಭವಾಗುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಒಂದು ದೃಶ್ಯ ಚಮತ್ಕಾರದ ಮೂಲಕ ಚಿತ್ರ ಕೊನೆಯಾಗುತ್ತದೆ.
ನಾಯಕರಾಗಿ ಶರಣ್ ಚಿತ್ರಕ್ಕಾಗಿ ಪಟ್ಟ ಪರಿಶ್ರಮ ವ್ಯರ್ಥವಾಗಿಲ್ಲ. ಪಾತ್ರದ ಎರಡು ಶೇಡ್ ಮತ್ತು ಡಾನ್ಸ್ ಗಳಲ್ಲಿ ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವುದು ಎದ್ದು ಕಾಣುತ್ತದೆ. ಚಿತ್ರದಲ್ಲಿ ಕುತೂಹಲ ಸೃಷ್ಟಿಸುವ ಪ್ರಮುಖ ಘಟ್ಟವಾಗಿ ಕಾಣಿಸುವುದು ದೆವ್ವದ ಮನೆಯ ಎರಡು ಫ್ಲ್ಯಾಶ್ ಬ್ಯಾಕ್ ಕತೆಗಳು. ಮೊದಲ ಕತೆ ಕ್ರಿಶ್ಚಿಯನ್ ಕುಟುಂಬದ ಅಲೆಕ್ಸ್ ಮತ್ತು ಆತನ ಪತ್ನಿ ಹಾಗೂ ಮಗು ಕ್ಲಾರ ಹಿನ್ನಲೆಯಲ್ಲಿ ನಡೆಯುತ್ತದೆ. ಅಲೆಕ್ಸ್ ಆಗಿ ಪ್ರಭು ಮುಂಡ್ಕೂರು ನಟಿಸಿದ್ದಾರೆ. ಆದರೆ ಚಿತ್ರಕ್ಕೆ ದೆವ್ವದ ಫೀಲ್ ದೊರಕುವುದು ಅಲೆಕ್ಸ್ ಪತ್ನಿಯಾಗಿ ಮೇಘನಾ ಗಾಂವ್ಕರ್ ಪಾತ್ರದ ಮೂಲಕ. ಸಾಮಾನ್ಯವಾಗಿ ದೆವ್ವದ ಪಾತ್ರ ಸಿಕ್ಕೊಡನೆ ಕಲಾವಿದರು ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗುತ್ತಾರೆ. ಅದರಲ್ಲೂ ಮೇಘನಾರಂಥ ಅಪರೂಪದ ಪ್ರತಿಭೆ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಆಕಾಂಕ್ಷ ಹೆಸರಲ್ಲಿ ಶರಣ್ ಜತೆ ಕಾಣಿಸಿದ ಅದಿತಿ ಪ್ರಭುದೇವ ಪಾತ್ರಕ್ಕೆ ಮೂರು ಆಯಾಮಗಳಿರುವುದು ಕುತೂಹಲ ಸೃಷ್ಟಿಸುತ್ತದೆ. ಆದರೆ ಕ್ಲೈಮ್ಯಾಕ್ಸ್ನಲ್ಲಿ ದೆವ್ವ ಮೈಮೇಲೆ ಬರುವ ದೃಶ್ಯಗಳಲ್ಲಿನ ಅದಿತಿ ನಟನೆ ಪರಿಣಾಮಕಾರಿ ಅನಿಸುವುದಿಲ್ಲ. ಮುದ್ದುಮುದ್ದಾಗಿ ನಗುವ ಅದಿತಿ ಕೊನೆಗೂ ದೆವ್ವವಾಗಿ ಭಯಬೀಳಿಸುವಲ್ಲಿ ಸೋತಿದ್ದಾರೆ. ಇದೇ ಸಂದರ್ಭದಲ್ಲಿ ಚಿಕ್ಕಣ್ಣ ತನ್ನ ಮೇಲೆ ದೆವ್ವ ಬಂದಂತೆ ನಟಿಸುವ ಸನ್ನಿವೇಶವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ತನ್ನ ಅಭಿನಯ ಶಕ್ತಿಯ ಮತ್ತೊಂದು ಮುಖವನ್ನು ಅನಾವರಣಗೊಳಿಸಿದ್ದಾರೆ. ಕ್ಲಾರ ಪಾತ್ರ ಮಾಡಿದ ಬಾಲನಟಿಯನ್ನೂ ಮೆಚ್ಚಲೇಬೇಕು. ಶರಣ್ ತಂಡದ ಮತ್ತೋರ್ವ ಸದಸ್ಯನಾಗಿ ಕಿರಣ್ ಚಂದ್ರಶೇಖರ್ ನಟಿಸಿದ್ದಾರೆ.
ಚಿತ್ರದುದ್ದಕ್ಕೂ ಅಲ್ಲಲ್ಲಿ ಹೊಸದಾಗಿ ಎಂಟ್ರಿ ನೀಡುವ ಜನಪ್ರಿಯ ಕಲಾವಿದರ ಪಾತ್ರಗಳು ದೃಶ್ಯಕ್ಕೆ ಶಕ್ತಿ ನೀಡಿವೆ. ಅದರಲ್ಲೂ ವಿದೇಶದಲ್ಲಿರುವ ಕ್ರಿಶ್ಚಿಯನ್ ಉದ್ಯಮಿ ಶ್ರೀನಿವಾಸ್ ಪ್ರಭು, ನಿರೂಪಕನಾಗಿ ಸೋಮಣ್ಣ ಮಾಚಿಮಾಡ, ರಿಯಲ್ ಎಸ್ಟೇಟ್ ಉದ್ಯಮಿಯಾಗಿ ರಘು ಭಟ್, ಕಳ್ಳ ಅಲಿಯಾಗಿ ವಿಜಯ್ ಚೆಂಡೂರ್, ಮರಾಠಿ ಪ್ರೇತೋಚ್ಛಾಟಕನಾಗಿ ರವಿವರ್ಮ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿ ಮರೆಯಾಗುತ್ತಾರೆ. ಉತ್ತರದ ಜಮೀನ್ದಾರನಾಗಿ ಗುರು ಕಿರಣ್ ಕಾಣಿಸಿದ್ದಾರೆ. ಫ್ಲ್ಯಾಶ್ಬ್ಯಾಕ್ ಘಟನೆಯೊಂದನ್ನು ಕನ್ನಡದಲ್ಲೇ ನಿರೂಪಿಸುವ ಮೂಲಕ ದೃಶ್ಯಕ್ಕೆ ಕಳೆ ನೀಡಿದ್ದಾರೆ.
ಆಕರ್ಷಕ ಶೀರ್ಷಿಕೆ ವಿನ್ಯಾಸದಿಂದಲೇ ಶುರುವಾಗು ಚಿತ್ರ ಆರಂಭದಲ್ಲೇ ಆತಂಕ ಸೃಷ್ಟಿಸುವುದು ಸಂಭಾಷಣೆಗಳ ಮೂಲಕ. ನಾಯಕ ಶರಣ್ ಎಂಟ್ರಿಗೇನೇ ಡಬಲ್ ಮೀನಿಂಗ್ ಡೈಲಾಗ್ ಮೂಲಕ ಸ್ವಾಗತ ಕೋರಲಾಗಿದೆ. ಚಿಕ್ಕಣ್ಣನಿಂದಲೇ ಶರಣ್ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿಸಿದ್ದಾರೆ. ಸಂಭಾಷಣೆಕಾರ ಹಾಸ್ಯಕ್ಕಾಗಿ ದ್ವಂದ್ವಾರ್ಥ ಬಳಸುತ್ತಾನೆ ಎಂದಾದರೆ ಆತನ ಬಂಡವಾಳ ಖಾಲಿಯಾಗಿದೆ ಎಂದೇ ಅರ್ಥ. ಇದೇ ಕಾರಣಕ್ಕಾಗಿ ಮಧ್ಯಂತರದ ಬಳಿಕ ಬರುವ ಓಂ ಪ್ರಕಾಶ್ ರಾವ್ ಮತ್ತು ಪ್ರಥಮ್ ಪಾತ್ರಗಳು ಕೂಡ ಅನಗತ್ಯವಾಗಿ ಗೋಚರಿಸುತ್ತವೆ. ಮುಂದೆ ಆ ದೃಶ್ಯಗಳಿಗೊಂದು ಹಿನ್ನೆಲೆ ನೀಡಲಾಗಿದೆ. ಆದರೆ ಇದು ವಿರಾಮದಲ್ಲಿ ಕಾದ ಪ್ರೇಕ್ಷರನ್ನು ಮತ್ತಷ್ಟು ಕಾಯಿಸುವಂತೆ ಮಾಡಿವೆ. ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಧರ್ಮ ಸೇರಿದಂತೆ ಉತ್ತರ ಭಾರತದವರಂತೆ ತೋರಿಸಿರುವ ಪಾತ್ರಗಳಿಗೆ ನೀಡಿದ ಹಿಂದಿ ಸಂಭಾಷಣೆಗಳು ವಾಚ್ಯವಾಗಿವೆ.
ಚಿತ್ರದ ಹಿನ್ನೆಲೆ ಸಂಗೀತ, ಲೊಕೇಶನ್ , ಛಾಯಾಗ್ರಹಣ ಮನ ಸೆಳೆಯುತ್ತದೆ. ಮೇಘನಾ ಮೂಗುತಿ ಧರಿಸುವಾಗ ಕನ್ನಡಿಯಲ್ಲಿ ಕಾಣಿಸುವ ದೃಶ್ಯ ಸೇರಿದಂತೆ ಕ್ಲೈಮ್ಯಾಕ್ಸ್ನಲ್ಲಿ ಹನುಮಂತನ ದಿವ್ಯ ದರ್ಶನವನ್ನು ಪರಿಣಾಮಕಾರಿಯಾಗಿ ತೋರಿಸಿರುವ ತಂತ್ರಜ್ಞರು ಪ್ರಶಂಸಾರ್ಹರು. ಅಂತ್ಯದಲ್ಲಿ ಶರಣ್ ಹೊಸ ಸಿನಿಮಾದ ಸೂಚನೆ ನೀಡಿರುವುದು ಕನ್ನಡದ ಪ್ರೇಕ್ಷಕರಿಗೆ, ವಿಷ್ಣುವರ್ಧನ್ ಅಭಿಮಾನಿಗಳಿಗೆ ಉಡುಗೊರೆಯಾಗಿ ಕಾಣಬಹುದು.