
ಚಿತ್ರ: ಭುವನಂ ಗಗನಂ
ನಿರ್ದೇಶನ: ಗಿರೀಶ್ ಮೂಲಿಮನಿ
ನಿರ್ಮಾಣ: ಮುನೇಗೌಡ
ತಾರಾಗಣ: ಪೃಥ್ವಿ ಅಂಬಾರ್, ಪ್ರಮೋದ್ , ರಚೆಲ್ ಮೊದಲಾದವರು
ಭುವನಂ ಗಗನಂ ಎನ್ನುವ ಹೆಸರಲ್ಲಿ ಇಬ್ಬರು ನಾಯಕರ ಚಿತ್ರ. ಹಾಗಾದರೆ ಈ ನಾಯಕರ ಹೆಸರು ಭುವನ್ ಮತ್ತು ಗಗನ್ ಎಂದೇ? ಖಂಡಿತ ಅಲ್ಲ. ಅಭಿಷೇಕ್ ಮತ್ತು ರಾಮ್ ಎನ್ನುವ ಇಬ್ಬರು ಭಾನು ಭೂಮಿ ಅಂತರದ ವ್ಯಕ್ತಿತ್ವ ಹೊಂದಿರುವ ಯುವಕರ ಕತೆ. ಇಲ್ಲಿ ರಾಮ್ ಗೆ ಭೂಮಿ ತೂಕದ ಹೆಣ್ಣು ಭುವಿಯ ಬೆಂಬಲ ಇದೆ. ಅಭಿಷೇಕ್ ಗೆ ನಂದಿನಿ ಇದ್ದಾಳೆ!
ಕನ್ಯಾಕುಮಾರಿಗೆ ಕಾರಲ್ಲಿ ಒಂಟಿ ಪಯಣ ಶುರು ಮಾಡಿದ ಅಭಿಷೇಕ್ ಗೆ ದಾರಿಯಲ್ಲಿ ಜತೆಯಾಗುವವನು ರಾಮ್. ಮಂಗಳೂರು ಕರಾವಳಿ ಕಡೆಯ ವಿಶೇಷ ಚೇತನದ ಈ ಯುವಕನ ಮಾತು, ಮುಗ್ದತೆ ಕಂಡು ಅಭಿಷೇಕ್ ಗೆ ಆತ್ಮೀಯತೆ ಮೂಡುತ್ತದೆ. ತನ್ನ ಪ್ರೇಮಕತೆಯನ್ನು ಹೇಳುತ್ತಾನೆ. ಕಾಲೇಜ್ ವಿದ್ಯಾರ್ಥಿಯಾಗಿರುವಾಗಲೇ ಪ್ರೀತಿಸಿ ಮನೆಯವರ ವಿರೋಧ ಎದುರಿಸಿ ವಿವಾಹಿತರಾದ ಒಂದು ಸಾಮಾನ್ಯ ಪ್ರೇಮಕತೆ ಅದು.
ಮಧ್ಯಂತರದ ತನಕ ಇದೇ ಕತೆ ಸಾಗುತ್ತದೆ. ಮುನಿಸಿ ಕನ್ಯಾಕುಮಾರಿ ಸೇರಿದ ಪತ್ನಿಯನ್ನು ವಾಪಾಸು ಕರೆತರಲು ಯತ್ನಿಸುವ ಅಭಿಯ ಪ್ರಯತ್ನ ಒಂದೆಡೆ. ವಿಶೇಷ ಚೇತನ ಎಂದು ಮಗುವಾಗಿದ್ದಾಗಲೇ ತನ್ನನ್ನು ತೊರೆದು ಹೋದ ತಾಯಿಯನ್ನು ನೋಡಲೆಂದು ಹೊರಟ ರಾಮ್ ಕತೆ ಇನ್ನೊಂದು. ಇವರಿಬ್ಬರು ತಮ್ಮ ಗುರಿ ತಲುಪುತ್ತಾರ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್.
ಅಭಿ ಮತ್ತು ನಂದಿಯದು ಸಾಮಾನ್ಯ ಪ್ರೇಮಕತೆ. ಆದರೆ ಅದನ್ನು ಸಹಜಗೊಳಿಸುವಂತೆ ಆಪ್ತಗೊಳಿಸುವಂತೆ ಮಾಡುವಲ್ಲಿ ನಿರ್ದೇಶನ ಮತ್ತು ಸಂಭಾಷಣೆ ಪ್ರಮುಖ ಪಾತ್ರವಹಿಸಿದೆ. ಅದೇ ರೀತಿ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಕೂಡ ಆಪ್ಯಾಯಮಾನ ಅನಿಸುತ್ತದೆ. ಆಸ್ಪತ್ರೆ ಸೇರಿದ ಪತ್ನಿಯನ್ನು ನೋಡಲು ಬರುವ ಅಭಿ ಅಲ್ಲಿ ಎದುರಾಗುವ ಅಚ್ಚರಿಯ ದೃಶ್ಯಗಳಿಗೆ ತನ್ನ ಮುಖದಲ್ಲಿ ತೋರುವ ಪ್ರತಿಕ್ರಿಯೆ ಅದ್ಭುತ. ಅಭಿಯಾಗಿ ಪ್ರಮೋದ್ ಜೀವಿಸಿದ್ದಾರೆ ಎಂದೇ ಹೇಳಬಹುದು.
ಪೃಥ್ವಿ ಅಂಬಾರ್ ನಿರ್ವಹಿಸಿರುವ ಅಭಿಯ ಪಾತ್ರವೇ ‘ಛಾಲೆಂಜಿಂಗ್’ ಅನಿಸುವಂಥದ್ದು. ಇಂಥದೊಂದು ಪಾತ್ರದಲ್ಲು ಕೂಡ ಪೃಥ್ವಿಯ ನೃತ್ಯ ಪ್ರತಿಭೆಯನ್ನು ಸಮರ್ಥವಾಗಿ ಬಳಸಲು ಅವಕಾಶ ನೀಡಿ ನಿರ್ದೇಶಕ ತನ್ನ ಬುದ್ಧಿವಂತಿಕೆ ತೋರಿದ್ದಾರೆ.
ನಂದಿನಿ ಪಾತ್ರದಲ್ಲಿ ರಚೇಲ್ ತಾನು ಸ್ಟಾರ್ ನಟಿಯಾಗಬಲ್ಲ ನಟಿ ಎಂದು ತೋರಿಸಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವರಂಥ ಪೋಷಕ ಪಾತ್ರಗಳನ್ನು ಕೂಡ ರುಚಿಗೆ ತಕ್ಕಂತೆ ಬಳಸಿರುವ ನಿರ್ದೇಶಕರ ರೀತಿ ಅಭಿನಂದನಾರ್ಹ. ಚಿತ್ರದ ಕಾಲಾವಧಿ ತುಸು ದೀರ್ಘ ಎನ್ನುವುದನ್ನು ಹೊರತುಪಡಿಸಿದರೆ ಇದೊಂದು ಸಿನಿಪ್ರಿಯರಿಗೆ ಇದೊಂದು ಉತ್ತಮ ಆಯ್ಕೆ ಎಂದೇ ಹೇಳಬಹುದು.