ಹಿರಿಯ ನಾಟಕ ಕಲಾವಿದ ಕಯ್ಯ ವಸಂತ ಭಂಡಾರಿ ನಿಧನ

ಗಡಿನಾಡು ಕಾಸರಗೋಡು ಜಿಲ್ಲೆಯ ಹಾಗೂ ವರ್ಕಾಡಿ ಗ್ರಾಮದಲ್ಲಿ ರಾಜಕೀಯ ಮತ್ತು ಕಲಾರಂಗದಲ್ಲಿ ಗುರುತಿಸಿಕೊಂಡ ಹಿರಿಯ ಕಯ್ಯ ವಸಂತ ಭಂಡಾರಿ(78) ನಿಧನರಾಗಿದ್ದಾರೆ.

ದೇಶ ಸ್ವಾತಂತ್ರ್ಯ ಪಡೆದ ದಿನವೇ ಜನಿಸಿದ್ದ ವಸಂತ ಭಂಡಾರಿ, ಜೀವನದ ಉದ್ಧಕ್ಕೂ ಒಬ್ಬ ನೈಜ ಭಾರತೀಯ ನಾಗರಿಕನಾಗುವ ತುಡಿತ ಪ್ರದರ್ಶಿಸಿದವರು. ಕಳೆದ ಒಂದಷ್ಟು ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಭಂಡಾರಿಯವರು ಬಂಟ್ವಾಳದ ಇರಾದಲ್ಲಿರುವ ಪುತ್ರಿಯ ಮನೆಯಲ್ಲಿ ಬುಧವಾರ ಸಂಜೆ ನಿಧನರಾಗಿದ್ದಾರೆ. ಪತ್ನಿ ಗುಲಾಬಿ ಸೇರಿದಂತೆ ಮಕ್ಕಳಾಸ ಪ್ರವೀಣ್, ಪ್ರತಿಭ ಮತ್ತು ಪ್ರಮೀಳಾ ಹಾಗೂ ತುಂಬು ಕುಟುಂಬವನ್ನು ಅಗಲಿದ್ದಾರೆ.

ವಸಂತ ಭಂಡಾರಿಯವರ ಅಗಲಿಕೆಗೆ ಅಪಾರ ಸಂಖ್ಯೆಯಲ್ಲಿ ಜನತೆ ಕಣ್ಣೀರಾಗಿದೆ. ಇವರು ವ್ಯಕ್ತಿಯಾಗಿ ಮಾತ್ರವಲ್ಲ ವಿವಿಧ ಸಂಘಟನೆಗಳ‌ ಶಕ್ತಿಯಾಗಿ ಗುರುತಿಸಿಕೊಂಡವರು‌. ಪಾತೂರು ಸೂರ್ಯೇಶ್ವರ ದೇವಸ್ಥಾನದ ಟ್ರಸ್ಟಿಯಾಗಿಯೂ ಕಾರ್ಯನಿರ್ವಹಿಸಿದ್ದರು. ‘ಸೂರ್ಯೇಶ್ವರ ಕಲಾವೃಂದ’ದ ಜವಾಬ್ದಾರಿ ವಹಿಸಿ ಕಲಾತಂಡವಾಗಿ ಬೆಳೆಯಲು ಕಾರಣರಾದವರು. ತಂಡದ ನಾಟಕಗಳಲ್ಲಿ ಹಲವಾರು ವರ್ಷಗಳಿಂದ ಜಮೀನ್ದಾರ, ರಾಜಕಾರಣಿ, ಖಳನಾಯಕನ ಪಾತ್ರಗಳಿಗೆ ರಾಯಭಾರಿ ಎನಿಸಿದ್ದರು.
ಬಾಕ್ರಬೈಲಿನಲ್ಲಿ ಸುಮಾರು ಮೂರೂವರೆ ದಶಕಗಳಿಂದ ಆಚರಿಸಲಾಗುತ್ತಿರುವ ಸಾರ್ವಜನಿಕ ಗಣೇಶೋತ್ಸವದ ಚುಕ್ಕಾಣಿ ಹಿಡಿದವರಲ್ಲೊಬ್ಬರಾಗಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯ ಬಾಕ್ರಬೈಲ್ ವಿಭಾಗದ ಸ್ಥಾಪಕ ಸದಸ್ಯರಾಗಿ ಗುರುತಿಸಿಕೊಂಡವರು. ಬಾಕ್ರಬೈಲಿನಲ್ಲಿ ಕೇರಳ ಹಾಲು ಒಕ್ಕೂಟದ ಸಹಕಾರಿ ಸಂಘದ ಸ್ಥಾಪಕರೆಂದೇ ಹೇಳಬಹುದು. ವರ್ಕಾಡಿ ಬಂಟರ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು. ಸ್ಥಳೀಯವಾಗಿ ಭಾರತೀಯ ಜನತಾ ಪಕ್ಷದ ಹಿರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.

ಜಾನಪದ ಕ್ರೀಡೆಗಳಲ್ಲಿಯೂ ಆಸಕ್ತಿ ಹೊಂದಿದ್ದ ಕಯ್ಯ ವಸಂತ ಭಂಡಾರಿಯವರು ಕಂಬಳದ ಕೋಣಗಳನ್ನು ಸಾಕುವ, ಓಡಿಸಬಲ್ಲ ಮಾತ್ರವಲ್ಲ ಆರೈಕೆ ಮಾಡಬಲ್ಲಂಥ ವಿಶೇಷ ಜ್ಞಾನ ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿ ಹೆಸರು ಮಾಡಿದ್ದರು. ದುಶ್ಚಟಗಳಿಂದ ಸದಾ ದೂರವಿದ್ದು ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡು ಎಲ್ಲ ರೀತಿಯಿಂದಲೂ ಸಾರ್ವಜನಿಕರಿಗೆ ಮಾದರಿಯಾಗಿದ್ದರು. ಆದರೆ ವಿಪರ್ಯಾಸ ಎನ್ನುವಂತೆ ಕಳೆದ ಒಂದಷ್ಟು ಸಮಯದಿಂದ ಇವರನ್ನು ದೈಹಿಕವಾಗಿ ಕಾಡಿದ ಕಾಯಿಲೆ ಇವರನ್ನು ಇಹಲೋಕದಿಂದಲೇ ದೂರ ಮಾಡಿದೆ. ಶುಕ್ರವಾರ ಬೆಳಿಗ್ಗೆ 10ಗಂಟೆಗೆ ಬಾಕ್ರಬೈಲು ಕಯ್ಯದ ಸ್ವಗೃಹದ ಪರಿಸರದಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಲಿದೆ.

Recommended For You

Leave a Reply

error: Content is protected !!