ಭಕ್ತ ಪ್ರಹ್ಲಾದದ ಸ್ಫೂರ್ತಿಯಲ್ಲಿ ‘ಮಹಾವತಾರ್ ನರ್ ಸಿಂಹ’

‘ಮಹಾವತಾರ್ ನರ್ ಸಿಂಹ’ ಹೆಸರು ಕೇಳಿ ಇದು ಯಾವ ಭಾಷೆಯ ಸಿನಿಮಾ ಎಂದು ಮೂಗು ಮುರಿಯಬೇಡಿ. ಖಂಡಿತವಾಗಿ ಇದು ಕನ್ನಡದ್ದೇ ಸಿನಿಮಾ. ಖ್ಯಾತ ನಿರ್ಮಾಣ ಸಂಸ್ಥೆ ಪ್ರಸ್ತುತ‌ ಪಡಿಸುತ್ತಿರುವ ಈ ಚಿತ್ರ ಮೂಲತಃ ಹಿಂದಿಯಲ್ಲಿ ತಯಾರಾದಂಥ ಅನಿಮೇಷನ್‌ ಚಿತ್ರ. ಇದೇ ಕಾರಣದಿಂದಲೇ ಹಿಂದಿಯ ಉಚ್ಚಾರಣೆಗೆ ತಕ್ಕ ಹಾಗೆ ಇಟ್ಟಿರುವ ಹೆಸರನ್ನು ಕನ್ನಡದಲ್ಲೂ ಉಳಿಸಿಕೊಳ್ಳಲಾಗಿದೆ.

ಇದು ಕನ್ನಡದ್ದೇ ಚಿತ್ರ ಎಂದ ಚಿತ್ರ ತಂಡ

ಹೆಸರು ನೋಡಿದರೆ ಪರಭಾಷೆ ಚಿತ್ರದಂತೆ ಇದ್ದರೂ ಇದು ಭಾವನಾತ್ಮಕವಾಗಿ ಕನ್ನಡಿಗರ ಸಿನಿಮಾ ಎನ್ನುತ್ತಾರೆ ನಿರ್ದೇಶಕ ಅಶ್ವಿನ್ ಕುಮಾರ್. ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶ್ವಿನ್ ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ಈ ಚಿತ್ರದ ತಯಾರಿಗೂ ಮೊದಲೇ ತಾವು ಪುನೀತ್ ರಾಜ್ ಕುಮಾರ್ ಭಕ್ತ ಪ್ರಹ್ಲಾದನಾಗಿ ನಟಿಸಿರುವ ಚಿತ್ರ ನೋಡಿದ್ದಾಗಿ ಹೇಳುತ್ತಾರೆ ಅಶ್ವಿನ್. ವಿಶೇಷ ಏ‌ನು ಅಂದರೆ ಕನ್ನಡ ಮಾತುಗಳನ್ನು ಕೂಡ ಈ ಬಾಲಿವುಡ್ ನಿರ್ದೇಶಕ ಅರ್ಥಮಾಡಿಕೊಳ್ಳುತ್ತಾರೆ. ಚಿತ್ರದ ಮುಂದಿನ ಭಾಗಗಳ ಪ್ರಚಾರಕ್ಕೆ ಬರುವಾಗ ಕನ್ನಡ ಕಲಿತು ಬರುವ ಭರವಸೆಯನ್ನು ನೀಡಿದ್ದಾರೆ. ಮುಂದಿನ‌ ಹನ್ನೊಂದು ವರ್ಷಗಳಲ್ಲಿ ವಿಷ್ಣುವಿನ ಏಳು ಅವತಾರಗಳನ್ನು ಇದೇ ರೀತಿ ಅನಿಮೇಷನ್ ಮೂಲಕ ಹೊರತರುವುದಾಗಿ ಅಶ್ವಿನ್ ಹೇಳಿದ್ದಾರೆ.

ಅಶ್ವಿನ್ ಕುಮಾರ್ ಪತ್ನಿ ಶಿಲ್ಪಾ ಧವನ್ ಈ ಚಿತ್ರದ ನಿರ್ಮಾಪಕರು. ನಾವಿಬ್ಬರೂ ಲೈಫ್ ಪಾರ್ಟ್ನರ್ಸ್ ಮಾತ್ರವಲ್ಲ ಬಿಸ್ನೆಸ್ ಪಾರ್ಟ್ನರ್ಸ್ ಕೂಡ ಹೌದು ಎಂದರು. ನಮಗೆ ಈ ಸಿನಿಮಾವನ್ನು ಜಗತ್ತಿಗೆ ಕೊಂಡೊಯ್ಯಲು ದೊಡ್ಡ ಪ್ರೊಡಕ್ಷನ್ ಹೌಸ್ ಬೇಕಾಗಿತ್ತು.‌ ಕಾಂತಾರ ನೋಡಿದ ಮೇಲೆ ಹೊಂಬಾಳೆಯೇ ಸೂಕ್ತ ಅನಿಸಿತ್ತು. ಜುಲೈ 25ರಂದು ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ ಎಂದರು.

ಹೊಂಬಾಳೆ ಫಿಲ್ಮ್ಸ್ ವತಿಯಿಂದ ಮಾತನಾಡಿದ ಕಾರ್ಯಕಾರಿ‌ ನಿರ್ಮಾಪಕ ಆದರ್ಶ್ “ಕರ್ನಾಟಕದಲ್ಲಿ ಸುಮಾರು 70 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಹೆಚ್ಚು ಕನ್ನಡ ಭಾಷೆಗಳಲ್ಲಿಯೇ ಇರುತ್ತವೆ” ಎಂದರು.

Recommended For You

Leave a Reply

error: Content is protected !!