ಇತ್ತೀಚೆಗಷ್ಟೇ ನಿಧನರಾದ ಕನ್ನಡದ ಹಿರಿಯ ನಟಿ ಬಿ ಸರೋಜಾದೇವಿ. ಇವರ ಹೆಸರಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಘೋಷಿಸುವಂತೆ ನಟಿ, ರಾಜಕಾರಣಿ ತಾರಾ ಅನುರಾಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ನೀಡಿದ್ದಾರೆ.
ತಾರಾ ನೀಡಿರುವ ಮನವಿಯಲ್ಲಿ “ಈಗಾಗಲೇ ಕನ್ನಡ ಚಿತ್ರರಂಗದ ಪ್ರತಿಭೆಗಳಿಗೆ ರಾಜ್ಯ ಪ್ರಶಸ್ತಿಗಳನ್ನು ಚಿತ್ರರಂಗದ ಕೆಲವು ಮಹನೀಯರ ಹೆಸರಿನಲ್ಲಿ ಕೊಟ್ಟು ಗೌರವಿಸಲಾಗುತ್ತಿದೆ. ಇತ್ತೀಚೆಗೆ ಅಭಿನಯ ಶಾರದೆ ಜಯಂತಿಯವರ ಹೆಸರಲ್ಲೂ ಪ್ರಶಸ್ತಿಗಳನ್ನು ನೀಡುತ್ತಿರುವುದಕ್ಕೆ ಅಭಿನಂದನೆಗಳು. ಈ ನಿಟ್ಟಿನಲ್ಲಿ ನನ್ನ ಮನವಿ ಏನೆಂದರೆ ಬಿ ಸರೋಜಾದೇವಿಯವರ ಹೆಸರಿನಲ್ಲೂ ಪ್ರಶಸ್ತಿಗಳನ್ನು ನೀಡಬೇಕು” ಎಂದಿದ್ದಾರೆ. ಮುಖ್ಯಮಂತ್ರಿಗಳು ಖುದ್ದಾಗಿ ತಾರಾರಿಂದ ಮನವಿ ಸ್ವೀಕರಿಸಿದ್ದಾರೆ. ಮಾತ್ರವಲ್ಲ, ಸರಣಿಯಲ್ಲಿ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭಗಳು ಕೂಡ ಶೀಘ್ರದಲ್ಲೇ ಆಯೋಜನೆಯಾಗಲಿವೆ. ಈ ಎಲ್ಲವನ್ನೂ ಗಮನಿಸಿದರೆ ತಾರಾ ಮನವಿ ಈಡೇರುವ ಭರವಸೆ ಸೃಷ್ಟಿಯಾಗಿದೆ.

ಪಂಚಭಾಷಾ ತಾರೆ ಬಿ ಸರೋಜಾದೇವಿ ಜುಲೈ 14ರಂದು ಇಹಲೋಕ ತ್ಯಜಿಸಿದ್ದರು. ಐದು ದಶಕಕ್ಕೂ ಅಧಿಕ ಕಾಲ ಸಕ್ರಿಯ ನಟಿಯಾಗಿದ್ದ ಸರೋಜಾದೇವಿ ಐದು ಭಾಷೆಗಳಲ್ಲಿ ನಟಿಸಿ, ದೇಶದ ಮೊದಲ ಲೇಡಿ ಸುಪರ್ ಸ್ಟಾರ್ ನಟಿ ಎಂದೇ ಗುರುತಿಸಿಕೊಂಡವರು. ಪದ್ಮಶ್ರೀ, ಪದ್ಮಭೂಷಣ ಪುರಸ್ಕೃತರಾದ ಈ ನಟಿಯ ಹೆಸರನ್ನು ಭವಿಷ್ಯದ ಸಿನಿಮಾ ಕಲಾರಂಗದಲ್ಲಿ ಚಿರಸ್ಥಾಯಿಗೊಳಿಸುವ ತಾರಾ ಅವರ ಈ ಪ್ರಯತ್ನಕ್ಕೆ ಸಿನಿಪ್ರಿಯರ ಪ್ರಶಂಸೆ ವ್ಯಕ್ತವಾಗಿದೆ.
