ರವಿಚಂದ್ರನ್ ನಟನೆಯ ಬಹುನಿರೀಕ್ಷಿತ `ರವಿಬೋಪಣ್ಣ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಮಲಯಾಳಂನ `ಜೋಸೆಫ್’ ಚಿತ್ರದ ರಿಮೇಕ್ ಎಂದು ಗುರುತಿಸಲ್ಪಟ್ಟಿದ್ದರೂ ಬಿಡುಗಡೆಯಾದ ಟೀಸರ್ ಕಂಡಾಗ, ಸಂಪೂರ್ಣವಾಗಿ ಮೂಲ ಚಿತ್ರವು ರವಿಚಂದ್ರನ್ ಶೈಲಿಗೆ ಬದಲಾಗಿರುವುದು ಎದ್ದು ಕಾಣುತ್ತದೆ.
ಕ್ರೇಜಿಸ್ಟಾರ್ ನಿರ್ದೇಶನ ಎಂದಮೇಲೆ ಹಾಗೆಯೇ. ಯಶಸ್ವಿ ಚಿತ್ರವನ್ನು ರಿಮೇಕ್ ಮಾಡಿದರೂ ಸಹ, ಮೂಲ ಚಿತ್ರಕ್ಕೆ ತಮ್ಮದೇ ಶೈಲಿಯ ಬದಲಾವಣೆಗಳನ್ನು ತರುವ ಮತ್ತು ಆ ಮೂಲಕ ಕನ್ನಡದ ಸಿನಿಮಾ ಪ್ರೇಕ್ಷಕರನ್ನು ತನ್ನ ಅಭಿಮಾನಿಗಳನ್ನಾಗಿಸುವ ಕಲೆ ರವಿಚಂದ್ರನ್ ಅವರಿಗೆ ಸಿದ್ಧಿಸಿದೆ. ಆ ನಿಟ್ಟಿನಲ್ಲಿ ‘ರವಿ ಬೋಪಣ್ಣ’ ಕೂಡ ಗೆಲುವಿನ ನಿರೀಕ್ಷೆ ಮೂಡಿಸಿದೆ.
ವಿ ಗ್ರೂಪ್ ಕಡೆಯಿಂದ ಸಮರ್ಪಿಸಲಾಗಿರುವ ಟೀಸರ್ ನಲ್ಲಿ `ರವಿ ಬೋಪಣ್ಣ’ ಚಿತ್ರವು `ದೃಶ್ಯ 2’ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಆದರೆ ಇದು ದೃಶ್ಯ ಸಿನಿಮಾದ ಎರಡನೇ ಭಾಗ ಅಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಮತ್ತೆ ಅಂಥದೇ ಸಹಜ, ಸಸ್ಪೆನ್ಸ್ ತುಂಬಿದ ಕೌಟುಂಬಿಕ ಚಿತ್ರವೊಂದನ್ನು ನೀಡುವ ಭರವಸೆಯನ್ನು ರವಿಚಂದ್ರನ್ ಅವರು ಈ ಮೂಲಕ ತೋರಿಸಿದ್ದಾರೆ. ಟೀಸರ್ ನಲ್ಲಿ ಒಂದು ಅಪಘಾತದ ದೃಶ್ಯ ಮತ್ತು ಕನ್ನಡಿಯಲ್ಲಿ ಬಂದು ಹೋಗುವ ಸುದೀಪ್ ಮುಖ ಸದ್ಯದ ಮಟ್ಟಿಗೆ ಕುತೂಹಲ ಮೂಡಿಸಿರುವಂಥ ಅಂಶಗಳಾಗಿವೆ. ಕಿಚ್ಚ ಸುದೀಪ್ ಚಿತ್ರದಲ್ಲಿ ಒಂದು ದೃಶ್ಯದಲ್ಲಿ ಬಂದು ಹೋಗುವ ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಆದರೆ ಅದು ಚಿತ್ರಕ್ಕೆ ತುಂಬ ಶಕ್ತಿ ನೀಡುವಂಥ ಪಾತ್ರ ಎಂದು ರವಿಚಂದ್ರನ್ ಈ ಹಿಂದೆಯೇ ಹೇಳಿದ್ದರು.
‘ಮಲ್ಲ’ ಚಿತ್ರದ ಮೂಲಕ ಸಂಭಾಷಣೆಯಿಂದ ಗಮನ ಸೆಳೆದಿದ್ದ ನಟ ಮೋಹನ್ ಅವರ ಕಾಂಬಿನೇಶನ್ ಈ ಚಿತ್ರದಲ್ಲಿಯೂ ಇದೆ. ಸಂಭಾಷಣೆಯ ಜತೆಗೆ ಸ್ನೇಹಿತನ ಪಾತ್ರವೊಂದನ್ನು ಕೂಡ ಮೋಹನ್ ನಿಭಾಯಿಸಿದ್ದಾರೆ. ಸರ್ಕಾರ್ ಮತ್ತು ಅಜಿತ್ ಚಿತ್ರದ ನಿರ್ಮಾಪಕರು. ರವಿಚಂದ್ರನ್ ಅವರ ಕಣ್ಣುಗಳು ಎಂದೇ ವಿಶೇಷಿಸಲ್ಪಡುವ ಜಿಎಸ್ ವಿ ಸೀತಾರಾಮ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ರವಿಚಂದ್ರನ್ ಅವರು ನಾಯಕರಾಗಿ ನಟಿಸಿ, ನಿರ್ದೇಶಿಸುವುದರ ಜತೆಗೆ ಸಂಗೀತ, ಸಾಹಿತ್ಯ ಮತ್ತು ಸಂಕಲನದ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಸಂಗೀತಕ್ಕೆ ಕೀಬೋರ್ಡ್ ಸಂಯೋಜಕರಾಗಿ ಗೌತಮ್ ಶ್ರೀವತ್ಸ, ಕಾರ್ಯಕಾರಿ ನಿರ್ಮಾಪಕರಾಗಿ ಜಗದೀಶ್ ಮತ್ತು ಹೊಸಮನೆ ಮೂರ್ತಿಯವರ ಕಲಾನಿರ್ದೇಶನ ಇದೆ. ನವೆಂಬರ್ ಒಂದರಂದು ಹೊರತರಲಾದ ಈ ಟೀಸರ್ ಕೊನೆಗೆ ರಾಜ್ಯೋತ್ಸವದ ಶುಭಾಶಯ ಕೋರಲಾಗಿದೆ.