
ಸಪ್ಟೆಂಬರ್ 10ರಂದು ಜಾಗತಿಕ ಆತ್ಮಹತ್ಯಾ ನಿಯಂತ್ರಣ ದಿನ. ಅದೇ ಕಾರಣದಿಂದ ತಮ್ಮ ಚಿತ್ರಕ್ಕೆ `ಸಪ್ಟೆಂಬರ್ 10’ ಎಂದು ನಾಮಕರಣ ಮಾಡಿದ್ದಾರೆ ನಿರ್ದೇಶಕ ಓಂ ಸಾಯಿ ಪ್ರಕಾಶ್. ಚಿತ್ರದ ಪ್ರಧಾನ ದೃಶ್ಯವೊಂದನ್ನು ಉತ್ತರಹಳ್ಳಿಯ ಬಾಲಗಂಗಾಧರನಾಥ ಸ್ವಾಮಿ ಆಸ್ಪತ್ರೆಯ ಸಭಾಂಗಣದಲ್ಲಿ ಇತ್ತೀಚೆಗೆ ಚಿತ್ರೀಕರಿಸಲಾಯಿತು.
ಜಗತ್ತಿನಲ್ಲಿ ಪ್ರತಿ ಮೂರು ಸೆಕೆಂಡ್ ಗಳಿಗೆ ಒಂದರಂತೆ ಆತ್ಮಹತ್ಯೆ ನಡೆಯುತ್ತಿದೆ. ನಮ್ಮಲ್ಲಿ ಕೂಡ ಆತ್ಮಹತ್ಯೆಗಳಿಗೆ ಕೊರತೆಯಿಲ್ಲ. ಬಾಲ್ಯದಲ್ಲಿ ಪರೀಕ್ಷೆಯ ಸೋಲು, ಯೌವನದಲ್ಲಿ ಪ್ರೇಮದ ಸೋಲು, ಮಧ್ಯವಯಸ್ಸಿನಲ್ಲಿ ಸಂಸಾರದ ಸೋಲಿನ ಕಾರಣಗಳನ್ನು ನೀಡಿ ಜನತೆ ನಿತ್ಯ ಆತ್ಮಹತ್ಯೆಗೆ ಶರಣಾಗುತ್ತಲೇ ಇರುತ್ತಾರೆ. ರೈತರ ಆತ್ಮಹತ್ಯೆಗಳು ಕೂಡ ನಡೆಯುತ್ತವೆ. ಸರ್ಕಾರ ಆಮೇಲೆ ಪರಿಹಾರ ನೀಡುತ್ತದೆ. ಆದರೆ ಆತ್ಮಹತ್ಯೆಗೆ ಮುನ್ನವೇ ಪರಿಹಾರ ನೀಡಿ ನಿಯಂತ್ರಿಸಬಹುದಾದ ಮಾರ್ಗೋಪಾಯಗಳ ಬಗ್ಗೆ ಚರ್ಚಿಸುವಂಥ ಚಿತ್ರವೇ ಇದು ಎನ್ನುತ್ತಾರೆ ನಿರ್ದೇಶಕ ಸಾಯಿ ಪ್ರಕಾಶ್. ನಿಜಕ್ಕೂ ಇತ್ತೀಚೆಗೆ ಆತ್ಮಹತ್ಯೆ ಮಾಡುವವರಲ್ಲಿ ಉದ್ಯಮಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದಕ್ಕೆ ದೇಶಾದ್ಯಂತ ವ್ಯಾಪಕ ಕೈಗಾರಿಕೋದ್ಯಮಗಳು ಮುಚ್ಚಿ ಹೋಗಿ ಆರ್ಥಿಕ ಕುಸಿತವಾಗುತ್ತಿರುವುದು ಕೂಡ ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಆತ್ಮಹತ್ಯೆಯ ಗೀಳನ್ನು ಮನುಷ್ಯರಿಂದ ಹೇಗೆ ಹೊರಗಟ್ಟಬಹುದು ಎನ್ನುವುದನ್ನು ನಿರ್ದೇಶಕರು ಏಳು ಕತೆಗಳ ಮೂಲಕ ನಿರೂಪಿಸಲು ಪ್ರಯತ್ನ ನಡೆಸಿದ್ದಾರೆ.
ಇದುವರೆಗೆ ನೂರಾರು ಚಿತ್ರಗಳನ್ನು ನಿರ್ದೇಶಿಸಿರುವ ಸಾಯಿ ಪ್ರಕಾಶ್ , ನೂರನೇ ಚಿತ್ರದ ಸ್ಥಾನವನ್ನು ಪೆಂಡಿಂಗ್ ಇರಿಸಿದ್ದಾರೆ! ಆ ಸ್ಥಾನದಲ್ಲಿ ಒಂದು ಶಿವರಾಜ್ ಕುಮಾರ್ ಚಿತ್ರ ಮಾಡಬೇಕು ಎನ್ನುವುದು ಅವರ ಕನಸು. ಅದರ ನಡುವೆ ಕಾರ್ಗಿಲ್ ಯುದ್ಧದಲ್ಲಿ ಸೆಣಸಾಡಿರುವ ಕ್ಯಾಪ್ಟನ್ ಜಿಜಿ ರಾವ್ ಅವರಿಂದ ರಚಿಸಲ್ಪಟ್ಟ ಪುಸ್ತಕದ ಆಧಾರದಲ್ಲಿ ಹೊಸ ಚಿತ್ರ ಮಾಡುತ್ತಿರುವುದಾಗಿ ಸಾಯಿಪ್ರಕಾಶ್ ಹೇಳಿದ್ದಾರೆ. ಅದರ ಚಿತ್ರೀಕರಣವೂ ಶುರುವಾಗಿದೆ. ಶಶಿಕುಮಾರ್, ರಮೇಶ್ ಭಟ್, ಸಿಹಿಕಹಿ ಚಂದ್ರು ಮೊದಲಾದ ಹಿರಿಯ ಕಲಾವಿದರು ಚಿತ್ರದಲ್ಲಿದ್ದಾರೆ. ಜಾಗತಿಕ ಆತ್ಮಹತ್ಯ ನಿಯಂತ್ರಣಾ ದಿನವಾದ ಸಪ್ಟೆಂಬರ್ 10ರ ಕುರುಹಾಗಿ ಅದೇ ಹೆಸರನ್ನೇ ಚಿತ್ರಕ್ಕೆ ಇರಿಸಿಕೊಂಡಿದ್ದಾರೆ ಸಾಯಿ. ಚಿತ್ರ ನೋಡಿದ ಮೇಲೆಯಾದರೂ ಬದುಕಲು ಪ್ರೇರಣೆಯಾಗುವದೋ ಎಂದು ನೋಡಬೇಕು..!