ಯುವ ನಿರ್ದೇಶಕರಲ್ಲಿ ಸದಭಿರುಚಿಯ ಯಶಸ್ವಿ ಚಿತ್ರಗಳನ್ನು ನೀಡಿ ಗುರುತಿಸಿಕೊಂಡವರು ಮಂಜು ಸ್ವರಾಜ್. ಅದೇ ರೀತಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಒಟ್ಟು 16 ಸಿನಿಮಾಗಳನ್ನು ನಿರ್ಮಿಸಿ ಜನಪ್ರಿಯರಾಗಿರುವ ನಿರ್ಮಾಪಕ ಎಸ್.ವಿ ಬಾಬು ಸಂಗಮದಲ್ಲಿ ಕಳೆದ ವರ್ಷಾಂತ್ಯದಲ್ಲಿ ತೆರೆಗೆ ಬಂದಂಥ ಚಿತ್ರ `ಮನೆ ಮಾರಾಟಕ್ಕಿದೆ’. ಚಿತ್ರದ ಗೆಲುವಿನ ಸಂಭ್ರಮವನ್ನು ಕಲಾವಿದರ ಭವನದಲ್ಲಿ ಹಂಚಿಕೊಳ್ಳಲಾಯಿತು.

ಚಿಕ್ಕಣ್ಣ, ಸಾಧು ಕೋಕಿಲ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಸೇರಿದರೆ ಎಷ್ಟು ಮನರಂಜನೆ ಸಿಗಬಹುದು ಎನ್ನುವುದಕ್ಕೆ ಉದಾಹರಣೆಯಾದ ಚಿತ್ರ ಮನೆ ಮಾರಾಟಕ್ಕಿದೆ. ಅದರ ಜತೆಯಲ್ಲಿಯೇ ಮನುಷತ್ವ ಕಳೆದುಕೊಂಡ ವ್ಯಕ್ತಿಯೊಳಗಿನ ದೆವ್ವ ಹೇಗೆ ಪಿಶಾಚಿಗಳಿಗಿಂತಲೂ ಭೀಕರ ಎನ್ನುವುದನ್ನು ತೋರಿಸಿಕೊಟ್ಟಂಥ ಚಿತ್ರ ಮನೆ ಮಾರಾಟಕ್ಕಿದೆ. ಬಹುಶಃ ಈ ಕಾರಣಗಳಿಂದಲೇ ಇರಬಹುದು ಪ್ರೇಕ್ಷಕರ ಮನ್ನಣೆಗೆ ಪಾತ್ರವಾದ ಈ ಚಿತ್ರತಂಡದ ಎಲ್ಲರನ್ನು ಅಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಿರ್ದೇಶಕ ಮಂಜು ಸ್ವರಾಜ್, ಸಂಗೀತ ನಿರ್ದೇಶಕ ಅಭಿಮಾನ್ ರಾಯ್, ಪ್ರಧಾನ ಪಾತ್ರಧಾರಿಗಳಾದ ಚಿಕ್ಕಣ್ಣ, ಸಾಧು ಕೋಕಿಲ, ರವಿಶಂಕರ್ ಗೌಡ, ರಾಜೇಶ್ ನಟರಂಗ, ತಬಲಾ ನಾಣಿ, ನೀನಾಸಂ ಅಶ್ವಥ್, ಕಾರುಣ್ಯಾ ರಾಮ್, ಕರಿಸುಬ್ಬು, ಅಮೃತಾ ಅಯ್ಯರ್, ಬಾಲನಟಿ ಪ್ರಶ್ವಿತಾ, ಸಾಹಿತಿ ಕೆ.ಕಲ್ಯಾಣ್ ಮೊದಲಾದವರು ಉಪಸ್ಥಿತರಿದ್ದು ಸಂಭ್ರಮ ಹಂಚಿಕೊಂಡರು. ಅದರಲ್ಲಿ ಕೂಡ ಚಿತ್ರರಂಗಕ್ಕೆ ಬಂದು ಬಹಳ ವರ್ಷಗಳಾದ ಬಳಿಕ ಯಶಸ್ಸಿನ ಸ್ಮರಣಿಕೆಯನ್ನು ಕೈ ಸೇರಿಸಿಕೊಳ್ಳಲು ಸಾಧ್ಯವಾಗಿರುವುದಕ್ಕೆ ಕಾರುಣ್ಯಾ ಮತ್ತು ರವಿಶಂಕರ್ ಗೌಡ ಭಾವನಾತ್ಮಕವಾಗಿ ಮಾತನಾಡಿದರು.
ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗರ್ಹ ಚಿತ್ರ ಮಾಡುವುದರ ಜತೆಗೆ ನಟನಾಗಿಯೂ ಜನಪ್ರಿಯರಾಗಿರುವ ನಿರ್ದೇಶಕ ರಿಷಭ್ ಶೆಟ್ಟಿ ಯಶಸ್ವಿ ಸಂಭ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು. ತಾವು ನಿರ್ದೇಶಕರಾಗಿ ಪ್ರಥಮ ಹೆಜ್ಜೆ ಇಟ್ಟಂಥ `ರಿಕ್ಕಿ’ ಚಿತ್ರಕ್ಕೆ ಎಸ್ ವಿ ಬಾಬು ಅವರೇ ನಿರ್ಮಾಪಕರಾಗಿದ್ದನ್ನು ಅವರು ನೆನಪಿಸಿಕೊಂಡರು. ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಅವರು ಸ್ಮರಣಿಕೆಗಳನ್ನು ವಿತರಿಸಿದರು. ಬಿಗ್ ಬಾಸ್ ಶೋನಲ್ಲಿರುವ ಕುರಿ ಪ್ರತಾಪ್ ಮತ್ತು ಮಾಧ್ಯಮಗಳಿಂದ ದೂರವಾಗಿರುವ ಶ್ರುತಿ ಹರಿಹರನ್ ಅನುಪಪಸ್ಥಿತಿ ಎದ್ದು ಕಾಣುತ್ತಿತ್ತು.
