ಇದೇನಪ್ಪ ಜನವರಿಯಲ್ಲೇ ಏಪ್ರಿಲ್ ಬಗ್ಗೆ ಮಾತು ಅಂತ ಅನಿಸಬಹುದು. ಏಪ್ರಿಲ್ ಎನ್ನುವುದು ರಚಿತಾ ರಾಮ್ ನಾಯಕಿಯಾಗಿರುವ ಚಿತ್ರದ ಹೆಸರು. ಚಿತ್ರದಲ್ಲಿ ರಚಿತಾ ಹೆಸರು ಕೂಡ ಏಪ್ರಿಲ್ ಅಂತಾನೇ. ಆದರೆ ಫೂಲ್ ಮಾಡಿರುವುದು ಮಾತ್ರ ನಿಜದಲ್ಲಿ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಇದು ಈ ಜನವರಿಯ ವಿಚಾರವಲ್ಲ. ಅದರ ಹಿಂದೆ ಒಂದು ಕತೆಯೇ ಇದೆ.
ಏಪ್ರಿಲ್ ಎಂದು ಯೂ ಟ್ಯೂಬ್ ನಲ್ಲಿ ಹುಡುಕಿದರೆ ನಿಮಗೆ ಏಪ್ರಿಲ್ ಚಿತ್ರದ ಪೋಸ್ಟರ್ ಎರಡು ವರ್ಷಗಳ ಹಿಂದೆಯೇ ಪೋಸ್ಟ್ ಆಗಿರುವುದು ಕಾಣಿಸುತ್ತದೆ. ಆ ಪೋಸ್ಟರಲ್ಲಿ ರಚಿತಾರಾಮ್ ಮುಖ ಮಾತ್ರ ಕಾಣುತ್ತದೆ. ಅಂದರೆ ಶೀರ್ಷಿಕೆ ಮಾತ್ರವಲ್ಲ, ಪೂರ್ತಿ ಕತೆಯೇ ಮಹಿಳಾ ಪ್ರಾಧಾನ್ಯತೆ ಹೊಂದಿತ್ತು. ಆ ಖುಷಿಯನ್ನು ಸ್ವತಃ ರಚಿತಾ ರಾಮ್ ವರ್ಷದ ಹಿಂದೆಯೇ ಮಾಧ್ಯಮದ ಮಿತ್ರರೊಂದಿಗೆ ಖಾಸಗಿಯಾಗಿ ಹೇಳಿಕೊಂಡಿದ್ದರು. ಆದರೆ ಇಂದು ಮುಂಜಾನೆ ಚಿತ್ರದ ಮುಹೂರ್ತ ಸಮಾರಂಭ ನಡೆಯಬೇಕಾದರೆ ಇದು ಚಿರಂಜೀವಿ ಸರ್ಜ ನಾಯಕನಾಗಿರುವ ನಾಲ್ಕು ಆ್ಯಕ್ಷನ್ ಸೀನ್ಸ್ ಇರುವ ಚಿತ್ರವಾಗಿ ಹೆಸರಾಗಿದೆ! ಚಿತ್ರದಲ್ಲಿ ಚಿರು ಪೊಲೀಸ್ ಅಧಿಕಾರಿಯ ಪಾತ್ರ ನಿಭಾಯಿಸುತ್ತಿದ್ದಾರೆ. ಬಹುಶಃ ಇದೇ ಕಾರಣದಿಂದಲೇ ಇರಬಹುದು ರಚಿತಾ ರಾಮ್ ಮುಹೂರ್ತ ಸಮಾರಂಭಕ್ಕೆ ಹಾಜರಾಗಿರಲಿಲ್ಲ. ಆದರೆ ನಿರ್ದೇಶಕ ಸತ್ಯ ರಾಯಲ ಪ್ರಕಾರ ಹೈದರಾಬಾದ್ ನಿಂದ ಬಳಿಕ ರಚಿತಾರಾಮ್ ಅವರಿಗೆ ವಿಪರೀತ ಸುಸ್ತಾಗಿರುವ ಕಾರಣ ವಿಶ್ರಾಂತಿ ಪಡೆದುಕೊಂಡಿದ್ದಾರಂತೆ. ಇದು ನಿಜವಾ ಅಥವಾ ರಾಯಲ ರೈಲು ಬಿಟ್ಟಿದ್ದಾರ ಎನ್ನುವುದನ್ನು ಮುಂದಿನ ದಿನಗಳಲ್ಲಿ ರಚಿತಾ ಅವರೇ ಸ್ಪಷ್ಟಪಡಿಸಬೇಕು.
ಈ ಹಿಂದೆ ‘8 ಎಂ. ಎಂ’ ಚಿತ್ರ ನಿರ್ದೇಶಿಸಿದ್ದ ಸತ್ಯ ರಾಯಲ ಕತೆ, ಚಿತ್ರಕತೆ ಸ್ವತಃ ಬರೆದಿದ್ದು, ವಿದೇಶದಲ್ಲಿ ನಡೆದ ಘಟನೆಯೊಂದರಿಂದ ಪ್ರೇರಿತರಾಗಿ ಕಥಾ ತಂತು ಸೃಷ್ಟಿಯಾಯಿತೆಂದರು. ಕತೆ ಮೊದಲೇ ತಯಾರಾಗಿತ್ತು. ನಿರ್ಮಾಪಕರು “ಚಿರು ಚಿತ್ರಕ್ಕೆ ಎಷ್ಟು ಬಜೆಟ್ ಆದರೂ ಹಾಕುವುದಾಗಿ ಹೇಳಿದರು” ಎನ್ನುವ ಅವರ ಮಾತು ಬಹುಶಃ ಚಿರುಸರ್ಜ ಇರದಿದ್ದರೆ ಈ ಪ್ರಾಜೆಕ್ಟ್ ನಿರ್ಮಾಣವೇ ಆಗುತ್ತಿರಲಿಲ್ಲವೇನೋ ಎನ್ನುವ ಸಂದೇಹಕ್ಕೆ ಎಡೆಮಾಡಿದೆ. ಆದರೆ ವಾಸ್ತವದಲ್ಲಿ ರಚಿತಾ ರಾಮ್ ಇಂದು ಕನ್ನಡದ ನಂಬರ್ ಒನ್ ನಾಯಕಿಯಾಗಿ ಗುರುತಿಸಿಕೊಂಡಿದ್ದು, ಪರಭಾಷೆಗಳಲ್ಲಿ ಕೂಡ ನಟಿಸುತ್ತಿದ್ದಾರೆ. ನಟಿಸಿದ ಚಿತ್ರಗಳಿಗೆಲ್ಲ ಗೆಲುವು ತಂದು ಕೊಡುವ ರಚಿತಾ ಲಕ್ಕಿ ಎಂದೇ ಉದ್ಯಮದಲ್ಲಿ ಗುರುತಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ