ನಾನು ಪಾತ್ರಗಳಿಂದ ಪಾತ್ರಗಳನ್ನು ವಿಭಿನ್ನವಾಗಿ ಆರಿಸಲು ಪ್ರಯತ್ನ ಮಾಡುತ್ತಾ ಇರುತ್ತೇನೆ. ಅವುಗಳಲ್ಲಿ ಗೋದ್ರಾ ತುಂಬ ಡಿಫರೆಂಟಾಗಿ ನಿಮ್ಮ ಮುಂದೆ ಬರಲಿದೆ. ಯಾಕೆಂದರೆ ಚಿತ್ರದಲ್ಲಿ ನಾನು ಮಾತ್ರವಲ್ಲ, ಪ್ರತಿಯೊಂದು ಪಾತ್ರಗಳು ಕೂಡ ಪ್ರಾಮುಖ್ಯತೆಯನ್ನು ಹೊಂದಿರುವಂಥ ಗಟ್ಟಿ ಚಿತ್ರಕತೆ ಇದು ಎಂದರು ನೀನಾಸಂ ಸತೀಶ್. ಅವರು ತಮ್ಮ ಆತ್ಮೀಯರಾದ ನಾಲ್ವರು ನಿರ್ಮಾಪಕರ ಮೂಲಕ ಗೋದ್ರಾ ಚಿತ್ರದ ಟೀಸರ್ ಬಿಡುಗಡೆ ಮಾಡಿಸಿ, ಮಾತನಾಡುತ್ತಿದ್ದರು.
`ನಿರ್ದೇಶಕರು ನನಗೆ ಚಿತ್ರದಲ್ಲಿ ಬೇರೆ ಬೇರೆ ಗೆಟಪ್ ಗಳಿವೆ ಎಂದು ಹೇಳಿದ್ದರು. ಆದರೆ ಇಷ್ಟೆಲ್ಲ ವೈವಿಧ್ಯತೆ ಇರುತ್ತದೆ ಎಂದು ಹೇಳಿರಲಿಲ್ಲ. ಯಾಕೆಂದರೆ ಕಾಲೇಜ್ ಹುಡುಗನಾಗಿ ಮತ್ತು ದಾಡಿ ಬಿಟ್ಟ ಯುವಕನಾಗಿ ಕಾಣಿಸಬೇಕಿತ್ತು. ಅದಕ್ಕಾಗಿ ತಿಂಗಳಾನುಗಟ್ಟಲೆ ಗಡ್ಡ ಬಿಡಬೇಕಾಯಿತು. ನಮ್ಮ ಚಿತ್ರ ತಡವಾಗಲು ಅದು ಕೂಡ ಒಂದು ಕಾರಣ ಎನ್ನಬಹುದು. ಅದರ ಜತೆಯಲ್ಲಿ ಸಿನಿಮಾದೊಳಗಿನ ಪ್ರಯಾಣ ಬೇರೆ ಬೇರೆ ಕಾಲಗಳಲ್ಲಿ ನಡೆಯುತ್ತದೆ. ಮಳೆಗಾಲ, ಬೇಸಿಗೆ ಕಾಲ ಹೀಗೆ ವಾತಾವರಣದ ವೈವಿಧ್ಯತೆ ತೋರಿಸಲು ಕೂಡ ಕಾಯಬೇಕಾಯಿತು’ ಎಂದು ಸತೀಶ್ ಹೇಳಿದರು. ಕರ್ನಾಟಕದ ಭಟ್ಕಳ, ಸಕಲೇಶಪುರ ಸೇರಿದಂತೆ ಕೇರಳ ಮತ್ತು ಆಂಧ್ರದಲ್ಲಿ ಚಿತ್ರೀಕರಿಸಲಾದ ಈ ಚಿತ್ರದಲ್ಲಿ ವಸಿಷ್ಠ ಸಿಂಹ ಮತ್ತು ಅಚ್ಯುತ್ ಕುಮಾರ್ ಕೂಡ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಅವರ ಕ್ಯಾರೆಕ್ಟರ್ ಕೂಡ ಚೆನ್ನಾಗಿ ಮೂಡಿ ಬಂದಿವೆ ಎಂದು ಅಭಿಪ್ರಾಯಪಟ್ಟರು.
`ಎರಡು ವರ್ಷಗಳಿಂದ ನನ್ನ ನಟನೆಯ ಗೋದ್ರಾ ಚಿತ್ರ ಬರುತ್ತಿದೆ ಎಂದು ನಾನು ಹೇಳುತ್ತಲೇ ಇದ್ದೇನೆ. ಕಡೆಗೂ ಆ ಕಾಲ ಈಗ ಹತ್ತಿರವಾಗಿದೆ. ಇದು ನನಗೆ ಮರಳಿ ಮನೆಗೆ ಬಂದ ಫೀಲ್ ಸಿಗುತ್ತಿದೆ.’ ಎಂದು ಶ್ರದ್ಧಾ ಶ್ರಿನಾಥ್ ಹೇಳಿದರು. `ಚಿತ್ರದಲ್ಲಿ ಕ್ರಾಂತಿ ತುಂಬಿದ ಹೋರಾಟದ ಬಗ್ಗೆ ಕತೆ ಇದೆ. ಹಾಗಂತ ನಾವು ನಕ್ಸಲಿಸಂಗೆ ಪ್ರೋತ್ಸಾಹ ನೀಡುವ ಚಿತ್ರ ಮಾಡಿದ್ದೇವೆ ಎಂದು ಹೇಳುವುದಿಲ್ಲ. ದೇಶದ ವಾಸ್ತವಿಕೆ ಸ್ಥಿತಿಗೆ ಚಿತ್ರ ಕನ್ನಡಿ ಹಿಡಿಯುತ್ತದೆ. ಅಂತಿಮ ಸಂದೇಶ ಏನು ಎನ್ನುವುದನ್ನು ಪರದೆಯ ಮೇಲೆ ನೋಡಿದರೇನೇ ಚಂದ’ ಎನ್ನುವುದು ನಿರ್ದೇಶಕ ನಂದೀಶ್ ಅವರ ಮಾತು. ಟೀಸರ್ ಬಿಡುಗಡೆಗೊಳಿಸಿದ ಬ್ಯೂಟಿಫುಲ್ ನೆನಪುಗಳು ನಿರ್ಮಾಪಕ ಪ್ರಸನ್ನ, ಭರಾಟೆ ಖ್ಯಾತಿಯ ಸುಪ್ರೀತ್ ಸೇರಿದಂತೆ ಕನ್ನಡದ ಒಂದಷ್ಟು ಯುವ ನಿರ್ಮಾಪಕರು ಹಾಗೂ ರಾಘು ಶಿವಮೊಗ್ಗ ಮೊದಲಾದ ನಿರ್ದೇಶಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.