ಶೂಟಿಂಗ್‌ ಸ್ಪಾಟ್:‌ `ಕಬ್ಜ’ ಚಿತ್ರದ ಪೂರ್ತಿ ಫೈಟಿಂಗ್ ನದ್ದೇ ಸುರಿಮಳೆ..!

ಐ ಲವ್ ಯು’ ಚಿತ್ರದ ಮೂಲಕ ರಿಯಲ್ ಸ್ಟಾರ್ ಅವರೊಂದಿಗೆ ಸೇರಿ ಪ್ರೇಮಪಾಠ ಹೇಳಿದ ನಿರ್ದೇಶಕ ಆರ್ ಚಂದ್ರು ಇದೀಗ ಕಬ್ಜ ಚಿತ್ರದ ಮೂಲಕ ಯುದ್ಧದ ಹೊಸ ಅಧ್ಯಾಯ ತೆರೆದಿದ್ದಾರೆ. ಅಲ್ಲಿ ಅಲ್ ಖೈದಾದವರು, ತಮಿಳು ಉಗ್ರರು, ವಿದೇಶೀ ಖಳರು ಎಲ್ಲರನ್ನೂ ಗುಡ್ಡೆ ಹಾಕಿದಂಥ ಸನ್ನಿವೇಶವಿತ್ತು. ಅವರನ್ನೆಲ್ಲ ಸೇರಿಸಿದ ಜಾಗ ಬೆಂಗಳೂರಿನ ಮಿನರ್ವ ಮಿಲ್ ನ ಒಳಾವರಣ. ಅವರ ಹೊಡೆದಾಟದ ದೃಶ್ಯವನ್ನು  ಸಾಹಸ ಸಂಯೋಜಕ ರವಿವರ್ಮ ಅವರು ನಿರ್ದೇಶಿಸುತ್ತಿದ್ದರು. ಸ್ಥಳಕ್ಕೆ ಸಿನಿಕನ್ನಡ’ ಭೇಟಿ ನೀಡಿ ಅಲ್ಲಿನ ಶೂಟಿಂಗ್‌ ದೃಶ್ಯಗಳನ್ನು ಗಮನಿಸಿ ಇಲ್ಲಿ ಅಕ್ಷರ ರೂಪ ನೀಡಿದೆ.

ಮಿನರ್ವ ಮಿಲ್ ನಲ್ಲಿ ಚಿತ್ರಕ್ಕಾಗಿ ಸುಮಾರು ಒಂಬತ್ತರಷ್ಟು ಸೆಟ್ ಗಳನ್ನು ಹಾಕಿ ಚಿತ್ರೀಕರಣ ಮಾಡಲಾಗುತ್ತದೆ. ಯಾಕೆಂದರೆ ಇದು 1947ರ ಕಾಲ ಘಟ್ಟದಿಂದ ಹಂತ ಹಂತವಾಗಿ ಮುಂದುವರಿಯುವ ಕತೆಯನ್ನು ಹೊಂದಿದೆ. ರೆಟ್ರೋ ಕಾಲದ ವಸ್ತು, ಸ್ಥಳಗಳನ್ನು ಆರಿಸಿಕೊಂಡು ಹೋಗಿ ಚಿತ್ರೀಕರಿಸುವುದು ಕಷ್ಟವಾಗಿರುವ ಕಾರಣ ಎಲ್ಲವನ್ನು ಕೂಡ ಒಂದೇ ಜಾಗದಲ್ಲಿ ಚಿತ್ರೀಕರಿಸಲಾಗುತ್ತಿದೆ.

ಹಾಗಂತ ರೆಟ್ರೋ ಕತೆಯಲ್ಲಿ ಎಲ್ಲವನ್ನು ಪಕ್ಕಾ ಲೆಕ್ಕಾಚಾರ ಹಾಕಿ ಕೂರದೇ ಸ್ವಾತಂತ್ರ್ಯ ಬಳಸಿಕೊಂಡು ಫ್ಯಾಂಟಸಿ ಕೂಡ ಬೆರೆಸಲಾಗಿದೆಯಂತೆ. ಅಂದರೆ ಯುದ್ಧದ ಶಸ್ತ್ರಾಸ್ತ್ರಗಳ ಬಳಕೆಯ ವಿಚಾರಕ್ಕೆ ಬಂದರೆ ಈಗಿನ ಕಾಲದ ಆಯುಧಗಳನ್ನು ಕೂಡ ತೋರಿಸಲಾಗಿದೆಯಂತೆ. ಅಂದಹಾಗೆ ಅದಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರವಾಗಲೀ, ಎತ್ತರದ ಗಡ್ಡಧಾರಿ ಖಳರ ಗುಂಪಿಗೆ ಕೆಜಿಎಫ್ ಆಗಲೀ ಸ್ಪೂರ್ತಿಯಲ್ಲ. ಇದು ಬೇರೆಯ ಚಿತ್ರ ಎನ್ನುವುದು ನಿರ್ದೇಶಕ ಚಂದ್ರು ಅವರ ಮಾತು.

”ಚಿತ್ರದಲ್ಲಿ ಸಾಹಸಕ್ಕೆ ಪ್ರಾಧಾನ್ಯತೆ ಇರುವ ಕಾರಣವೇ ಚಿತ್ರವನ್ನು ಒಪ್ಪಿಕೊಂಡೆ. ಆ್ಯಕ್ಷನ್ ಕಂಟಿನ್ಯು ಆಗಿರುವ ಕಾರಣ ಸಪರೇಟ್ ಶೆಡ್ಯೂಲ್ ಹಾಕಿಕೊಂಡಿಲ್ಲ. ಸೆಟ್ ವರ್ಕ್ ಎಲ್ಲ ತುಂಬ ಚೆನ್ನಾಗಿ ಮಾಡಿದ್ದಾರೆ” ಎಂದು ಸಾಹಸ ಸಂಯೋಜಕ ರವಿವರ್ಮ ಹೇಳಿದರು. 
ಚಿತ್ರಕ್ಕೆ ರವಿ ಬಸ್ರೂರು ಅವರ ಸಂಗೀತ ಇದೆ. ಮೂರು ದಿನಗಳ ಚಿತ್ರೀಕರಣಕ್ಕೆ ಹಾಕಿದ್ದ ಯೋಜನೆ ಈಗ ವಾರಗಟ್ಟಲೆ ಮುಂದುವರಿಯುತ್ತಿದೆ. ಹಾಗಾಗಿ ಖಚಿತ ಯೋಜನೆ ಹಾಕಿಕೊಳ್ಳಲು ಸಾಧ್ಯವಾಗಿಲ್ಲ. ಆದರೂ ಇದೇ ವರ್ಷ ತೆರೆಗೆ ತರುವ ಪ್ರಯತ್ನ ನಡೆದಿರುವುದಾಗಿ ಆರ್ ಚಂದ್ರು ತಿಳಿಸಿದರು.

  • ಶಶಿಕರ ಪಾತೂರು

Recommended For You

Leave a Reply

error: Content is protected !!
%d bloggers like this: