ಮನಸೆಳೆವ `ಚಿಂಟು..!’

ನಟ, ಕತೆಗಾರ, ಪತ್ರಕರ್ತ,ನಿರೂಪಕ ಯತಿರಾಜ್ ಅವರು ಒಂದು ಕಿರುಚಿತ್ರವನ್ನು ಹೊರಗೆ ತಂದಿದ್ದಾರೆ. ಅದರ ಹೆಸರು ‘ಚಿಂಟು- ನಂಬಲಾಗದ ನಂಟು' ಸಾಮಾನ್ಯವಾಗಿ ಕಿರುಚಿತ್ರಕ್ಕೆ ಎಲ್ಲರೂ ಆಯ್ಕೆ ಮಾಡುವಂಥ ದೆವ್ವ, ಅಪರಾಧ, ಪ್ರೇಮ, ಮೋಸ ಮೊದಲಾದ ವಿಚಾರಗಳನ್ನು ಬದಿಗಿಟ್ಟು ಪ್ರಚಲಿತ ಸಮಸ್ಯೆಯೊಂದಕ್ಕೆ ಧ್ವನಿಯಾಗಿರುವುದು ‘ಚಿಂಟು’ ವಿಶೇಷ. ಅದೇ ಸಂದರ್ಭದಲ್ಲಿ ಖಾಸಗಿ ಶಾಲಾ ಶಿಕ್ಷಕರ ಕಷ್ಟದ ಬಗ್ಗೆ ಹೇಳುವಾಗಲೂ ಅದನ್ನೊಂದು ಡಾಕ್ಯುಮೆಂಟರಿಯಾಗಿಸದೆ ಲವಲವಿಕೆಯ ಕಿರುಚಿತ್ರ ಮಾಡಿರುವುದು ಯತಿರಾಜ್ ಹೆಗ್ಗಳಿಕೆ.

ಚಿಂಟು ಕಿರುಚಿತ್ರದಲ್ಲಿ ಯತಿರಾಜ್ ಒಬ್ಬ ರಸ್ತೆ ಬದಿಯ ಕೈಗಾಡಿ ಹಣ್ಣಿನ ವ್ಯಾಪಾರಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಆ ಹಣ್ಣಿನ ವ್ಯಾಪಾರಿಯ ಬದುಕು ಕೆಲವೇ ತಿಂಗಳುಗಳ ಹಿಂದೆ ಅದಾಗಿರಲಿಲ್ಲ. ಆತನ ಬದುಕಿನಲ್ಲಿ ನಡೆದ ಘಟನೆ ಏನು ಮತ್ತು ಮುಂದೆ ನಡೆಯುವುದೇನು ಎನ್ನುವುದನ್ನು ಚಿಂಟು ಕಿರುಚಿತ್ರದ ಮೂಲಕ ತೋರಿಸಲಾಗಿದೆ. ಕಿರುಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಪ್ರಧಾನ ಪಾತ್ರದಲ್ಲಿ ನಟಿಸಿರುವ ಯತಿರಾಜ್ ಅವರ ಬಗ್ಗೆ ಪ್ರಸ್ತಾಪಿಸಲೇಬೇಕು. ಯಾಕೆಂದರೆ ಚಿಂಟುವಿಗೆ ಎಲ್ಲವೂ ಅವರೇ.

ಖಾಸಗಿ ಶಾಲಾ ಶಿಕ್ಷಕರಿಗೆ ಭವಿಷ್ಯವೇ ಇಲ್ಲ ಎನ್ನುವಂಥ ಪರಿಸ್ಥಿತಿ ತಂದಿರುವ ಶಾಲಾ ಆಡಳಿತ ಮಂಡಳಿಗಳು, ಶಿಕ್ಷಕರನ್ನು ನಿರ್ದೆಯೆಯಿಂದ ಕೆಲಸದಿಂದ ತೆಗೆದು ಹಾಕುತ್ತಿರುವುದು ಇಲ್ಲಿನ ಪ್ರಧಾನ ವಿಷಯ. “ನಿಮಗೆ ಕಷ್ಟವಾಗುತ್ತೆ ಅಂತ ನಾವು ನಷ್ಟ ಮಾಡಿಕೊಳ್ಳೋಕಾಗುತ್ತಾ? ನಾವೂ ಬ್ಯಾಂಕ್ ಲೋನ್ ಕಟ್ಟಬೇಕು. ನಿಮಗೆ ಸಂಬಳ ಕೊಡಲು ಸರ್ಕಾರದಿಂದ ಏನು ಆರ್‌ಟಿ ಎ ಫಂಡ್ ರಿಲೀಸ್ ಮಾಡಿಲ್ಲ.” ಎನ್ನುವ ನೈಜ ಸಂಭಾಷಣೆ ರಚಿಸುವುದರ ಜತೆಗೆ ಕಲಾವಿದರಿಂದ ನೈಜ ನಟನೆಯನ್ನು ಹೊರತಂದಿರುವ ‘ಕಲಾವಿಧ’ದ ಯತಿರಾಜ್ ಖಂಡಿತವಾಗಿ ಅಭಿನಂದನಾರ್ಹರು. “ಅಪ್ಪಾ; ಇವತ್ತಾದರೂ ನಿಮಗೆ ಸಂಬಳ ಕೊಟ್ಟರಾ?” ಎಂದು ಮಗು ಕೇಳುವಾಗ ಅಪ್ಪನಾಗಿ ತೋರಬೇಕಾದ ಅಸಹಾಯಕತೆ ದೃಶ್ಯ ಪ್ರತಿ ಪ್ರೇಕ್ಷಕರ ಮನಸಿಗೆ ನಾಟುವಂತಿದೆ. ಅಂದಹಾಗೆ ಯತಿರಾಜ್ ಅವರಿಗೆ ಈ ಕತೆಗೆ ನಿಜ ಬದುಕಿನಲ್ಲಿ ಸೆಕ್ಯಟಿರಿಟಿಯಾಗಿ ಕೆಲಸ ಮಾಡುತ್ತಿರುವ ರಾಜಾನಾಯಕ್ ಶಿಕ್ಷಕರ ಬದುಕೇ ಪ್ರೇರಣೆಯಂತೆ.

ಹೌದು; ಸರ್ಕಾರ ಖಾಸಗಿ ಶಾಲಾ ಶಿಕ್ಷಕರ ಬಗ್ಗೆ ಕಾಳಜಿ ತೋರಿಸಿಲ್ಲ. ಸರ್ಕಾರ ಬಿಡಿ; ಯಾರ ಬಗ್ಗೆಯೂ ಕಾಳಜಿ ತೋರಿಸಿಲ್ಲ. ದಿನಗೂಲಿ ನೌಕರರು ನಡೆದು ನಡೆದೇ ಬೀದಿ ಹೆಣವಾಗಿರುವುದು ಇನ್ನೂ ನಮ್ಮ ಕಣ್ಣೆದುರಲ್ಲೇ ಇದೆ. ಇಂಥ ಸಂದರ್ಭದಲ್ಲಿ ನಮ್ಮೊಳಗಿನ ಮಾನವೀಯತೆ ಹೇಗೆ ವ್ಯಕ್ತವಾಗಬೇಕು ಎನ್ನುವುದನ್ನು ಯತಿರಾಜ್ ಚಿಂಟು ಮೂಲಕ ತೋರಿಸಿಕೊಟ್ಟಿದ್ದಾರೆ. ಅಂದಹಾಗೆ ಅವರು ಇದೊಂದು ಕಿರುಚಿತ್ರ ಮಾತ್ರವಲ್ಲ, ತಮ್ಮ `ಕಲಾವಿಧ’ ಸಂಸ್ಥೆಯ ಕಡೆಯಿಂದ ಹೊರತಂದಿರುವ ಪ್ರತಿಯೊಂದು ಕಿರುಚಿತ್ರದಲ್ಲಿಯೂ ಒಂದೊಂದು ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಬೈಕ್ ಸೈಲೆನ್ಸರ್ ಗೆ ಎಕ್ಸೆಟ್ರಾ ಸೌಂಡ್ ಹಾಕಿಸಿ ಕಿರಿಕಿರಿ ಮಾಡುವ ಯುವಕರಿಗೆ ಅದು ಎಷ್ಟು ತಪ್ಪು ಎನ್ನುವ ಬಗ್ಗೆ, ಕೊರೊನಾ ಸಮಯದಲ್ಲಿ ಪೊಲೀಸ್, ವೈದ್ಯರ ವೃತ್ತಿಬದ್ಧತೆಯ ಬಗ್ಗೆ ಹೀಗೆ ವಿವಿಧ ವಿಚಾರಗಳಲ್ಲಿ ಅವರು ನೀಡಿರುವ ಕಿರುಚಿತ್ರಗಳು ಪರಿಣಾಮಕಾರಿಯಾಗಿ ಮೂಡಿ ಬಂದಿರುವುದು ಖುಷಿಯ ಸಂಗತಿ.

‘ಚಿಂಟು’ ತಂಡದ ಬಗ್ಗೆ

ಬಾಲ ಕಲಾವಿದರಾದ ಮಹಸ್ವಿನ್, ಶ್ರಾವ್ಯ ಕಿರಣ್, ಸಂಜಯ್ ನಾಯಕ್, ಮೇಘನಾ, ಮನಸ್ವಿ, ವರುಣ್ ನಾಯಕ್, ಖುಷಿ, ಶ್ರುತಿ, ದಿಲೀಪ್ ನಾಯಕ್ ಜತೆಗೆ ಯತಿರಾಜ್, ಪ್ರಿಯಾ ತರುಣ್, ಜಾಹ್ನವಿ, ರಾಜಾ ನಾಯಕ್ ಮತ್ತು ಗಂಗಾಧರ ಭಟ್. ಬಸವೇಶ್ವರ ನಗರ, ಬಜಾರ್ ಸ್ಟ್ರೀಟ್, ಸುಂಕದ ಕಟ್ಟೆ ಮತ್ತು ವಿಜಯಾ ಪಬ್ಲಿಕ್ ಸ್ಕೂಲ್ ಮೊದಲಾದೆಡೆಗಳಲ್ಲಿ ಎರಡು ದಿನಗಳಲ್ಲಿ ಚಿತ್ರೀಕರಣ ಪೂರ್ತಿಗೊಳಿಸಲಾಗಿರುವ ಈ ಆರು ನಿಮಿಷಗಳ ಕಿರುಚಿತ್ರಕ್ಕೆ ಛಾಯಾಗ್ರಾಹಕರು ಪೃಥ್ವಿರಾಜ್. ಸಂಕಲನಕಾರ ಅರುಣ್ ಮತ್ತು ಹಿನ್ನೆಲೆ ಸಂಗೀತ ನೀಡಿದವರು ಮಂಗಳ ಗೌರಿ. ನಿರ್ಮಾಣ `ಕಲಾವಿಧ.’

ಚಿಂಟು ಕಥಾತಂತುವಲ್ಲೇ ಹೇಳಿದಂತೆ ಈ ಲಾಕ್ಡೌನ್ ಬಹಳ ಮಂದಿಗೆ ತೊಂದರೆ ನೀಡಿದೆ. ಅದರಲ್ಲಿ ಕಲಾವಿದರ ಕಷ್ಟವೂ ದೊಡ್ಡ ಮಟ್ಟದಲ್ಲಿದೆ. ಯತಿರಾಜ್ ಅವರಂಥ ಪ್ರತಿಭಾವಂತರನ್ನು ಈ ಕಿರುಚಿತ್ರ ನೋಡುವ ಮೂಲಕ ನಾವು ಪ್ರೋತ್ಸಾಹಿಸಬಹುದು. ಈಗಾಗಲೇ ಐದಾರು ನಿಮಿಷಗಳ ಇವರ ಕಿರುಚಿತ್ರಗಳು ವಾಟ್ಸ್ಯಾಪ್ ಮೂಲಕ ಡೌನ್ಲೋಡ್ ರೂಪದಲ್ಲಿ ಓಡಾಡುತ್ತಿವೆ. ಆದರೆ ಅಲ್ಲಿ ಒಂದು ವೇಳೆ ನೀವು ನೋಡಿದ್ದರೂ ಯೂಟ್ಯೂಬ್ ಮೂಲಕ ಉತ್ತಮ ಗುಣಮಟ್ಟದಲ್ಲಿರುವ ಕಿರುಚಿತ್ರಗಳನ್ನು ನೋಡಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಸಿನಿಕನ್ನಡದ ವಿನಂತಿ.

Recommended For You

Leave a Reply

error: Content is protected !!