ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ಒಂದು ಸ್ವಾಯತ್ತ ಸಂಸ್ಥೆಯಾಗಿರುವ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರ ಮತ್ತೆ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ರಂಗ ಪ್ರಯೋಗ ಪ್ರಸ್ತುತ ಪಡಿಸುತ್ತಿದೆ.
ನೂರನೇ ಬಾರಿಯ ದಾಖಲೆ ಪ್ರದರ್ಶನ
ಎನ್ ಎಸ್ ಡಿ ಬೆಂಗಳೂರು ಕೇಂದ್ರದ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ದಕ್ಷಿಣ ಭಾರತದ ಇತರ ರಾಜ್ಯಗಳ 75 ನಟರು ಸುಮಾರು 9 ಗಂಟೆಗಳ ಕಾಲ ಪ್ರದರ್ಶನ ನೀಡಲಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬಯಲಾಟ ಬಿಟ್ಟರೆ ರಾತ್ರಿ ಪೂರ್ತಿ ಪ್ರದರ್ಶನಗೊಳ್ಳುವ ಕಲಾ ಪ್ರಕಾರ ಇಂದು ಅಪರೂಪ. ಹಾಗಾಗಿ ಮಲೆಗಳಲ್ಲಿ ಮದುಮಗಳು ಅಪರೂಪ ಪ್ರದರ್ಶನವಾಗಲಿದೆ. ಜತೆಗೆ ನಾಲ್ಕು ವೇದಿಕೆಗಳಲ್ಲಿ ಪ್ರದರ್ಶನಗೊಳ್ಳುವುದು ಮತ್ತೊಂದು ವಿಶೇಷ. 2013ರಲ್ಲಿ ಆರಂಭಗೊಂಡ ಈ ಮಾದರಿಯ ಪ್ರದರ್ಶನವು ಇಂದು 86ನೆಯ ಪ್ರದರ್ಶನ ಕಾಣಲಿದ್ದು, ಫೆಬ್ರವರಿ 14ರಂದು 100ನೇ ಪ್ರದರ್ಶನ ಕಾಣಲಿದೆ ಎಂದು ನಿರ್ದೇಶಕ ಬಸವಲಿಂಗಯ್ಯ ತಿಳಿಸಿದರು.
ಮಲೆಗಳಲ್ಲಿ ಮದುಮಗಳು ಕಾದಂಬರಿಯ ನಾಟಕ ರೂಪ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಲಾಗಿದ್ದು ಜನವರಿ 20 ರಿಂದ ಫೆಬ್ರವರಿ 29 ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ನಾಟಕ ಪ್ರದರ್ಶನವಿರುತ್ತದೆ. ರಾತ್ರಿ 8 ರಿಂದ ಬೆಳಿಗ್ಗೆ 6 ರವರೆಗೆ ಪ್ರದರ್ಶನವಿದ್ದು ಒಟ್ಟು 80 ಕ್ಕೂ ಅಧಿಕ ಪಾತ್ರಧಾರಿಗಳು ಅಭಿನಯಿಸಲಿದ್ದಾರೆ. ಪ್ರತಿ ಪ್ರದರ್ಶನಕ್ಕೆ ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವ ವ್ಯವಸ್ಥೆಯಿದ್ದು 249 ರೂ ಟಿಕೆಟ್ ದರವಿರುತ್ತದೆ. ವಿದ್ಯಾರ್ಥಿಗಳು ವಿನಾಯಿತಿ ದರ 150ರೂಗಳಲ್ಲಿ ನಾಟಕ ನೋಡಬಹುದು ಎಂದು ತಿಳಿಸಲಾಗಿದೆ.
ಮಲೆಗಳಲ್ಲಿ ಮದುಮಗಳು ಎನ್ನುವ ವಿಸ್ಮಯ
ಕುವೆಂಪು ಅವರ ವಿರಚಿತ ಮನೆಗಳಲ್ಲಿ ಮದುಮಗಳು ಹತ್ತೊಂಬತ್ತನೆಯ ಶತಮಾನದ ಮಲೆನಾಡಿನ ಕತೆ. ಪ್ರಕೃತಿ ನಿಗೂಢ ತಾಣವಾದ ಹುಲಿಕಲ್ಲು ಗುಡ್ಡದ ಸುತ್ತ ಇರುವ ಹಳ್ಳಿಗಳ ಜೀವಜಾಲದ ಬದುಕಿನ ವಿವರಗಳೇ ತುಂಬಿಕೊಂಡಿರುವ ಅನನ್ಯ ಕಥನ ಇದು. ಆಧುನಿಕತೆಯ ಪ್ರವೇಶವು ಭಾರತೀಯ ಗ್ರಾಮ ಸಮಾಜದ ಬದುಕಿನಲ್ಲಿ ತಂದ ತಲ್ಲಣಗಳ ನಿರೂಪಣೆಯೇ ಇದರ ತಿರುಳು. ಅದನ್ನೇ ನಾಟಕವಾಗಿ ನೋಡುವ ಅವಕಾಶ ಪ್ರೇಕ್ಷಕರದ್ದಾಗಿದೆ.
ನಾಟಕಕ್ಕೆ ಶಶಿಧರ ಅಡಪ ಅವರ ಕಲಾನಿರ್ದೇಶನ ಮತ್ತು ಹಂಸಲೇಖ ಅವರ ಸಂಗೀತ ಇದೆ.ಈ ಬಗ್ಗೆ ಮಾಹಿತಿ ನೀಡಲು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ನಾಟಕಕಾರ ಕೆ ವೈ ನಾರಾಯಣ ಸ್ವಾಮಿ, ಇಲಾಖಾ ಕಾರ್ಯದರ್ಶಿ ಆರ್ ಜನ್ನು ಮೊದಲಾದವರು ಉಪಸ್ಥಿತರಿದ್ದರು.