
ಒಂದು ಕಾಲದಲ್ಲಿ ಕರ್ನಾಟಕದಲ್ಲಿ ನೋಡದಿರೋರೆ ಇಲ್ಲ ಎನ್ನುವ ಲೆವೆಲ್ ಗೆ ಹಿಟ್ ಆಗಿರುವಂಥ ಸಿನಿಮಾ ‘ಜನುಮದ ಜೋಡಿ’. ಥಿಯೇಟರ್ ನಲ್ಲಿ ವರ್ಷಗಟ್ಟಲೆ ಓಡಿದ ಆ ಸಿನಿಮಾವನ್ನು ಈಗ ನೋಡಬೇಕು ಎಂದರೆ ಟಿವಿಯಲ್ಲೇ ನೋಡಬೇಕು. ಹಾಗಾಗಿ ದರ್ಶನ್ ನೋಡಿದ್ದರಲ್ಲಿ ವಿಶೇಷ ಏನಿದೆ ಎಂದು ಕೇಳಬಹುದು. ನೋಡಿದ್ದರಲ್ಲಿ ವಿಶೇಷ ಏನೂ ಇಲ್ಲ; ಆದರೆ ಅದನ್ನು ಬಹಿರಂಗವಾಗಿ ಸಭೆಯೊಂದರಲ್ಲಿ ಹೇಳಿಕೊಂಡಿದ್ದು ಮಾತ್ರ ಖಂಡಿತವಾಗಿ ವಿಶೇಷವೇ.!
ಘಟನೆ ನಡೆದಿದ್ದು ಕಲಾವಿದರ ಸಂಘದ ರಾಜ್ ಕುಮಾರ್ ಭವನದಲ್ಲಿ. ಕೋಡ್ಲು ರಾಮಕೃಷ್ಣ ಅವರ ನಿರ್ದೇಶನದ ‘ಮತ್ತೆ ಉದ್ಭವ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ. ವೇದಿಕೆಯಲ್ಲಿ ದರ್ಶನ್ ಅವರೊಂದಿಗೆ ಅತಿಥಿಯಾಗಿ ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ.ಎನ್ ಸೀತಾರಾಮ್, ಹಿರಿಯ ಪತ್ರಕರ್ತ ಮತ್ತು ಸಾಹಿತಿಯಾದ ಜೋಗಿ ಮೊದಲಾದವರು ಕುಳಿತಿದ್ದರು.
ಆದರೆ ದರ್ಶನ್ ಅವರ ಬಾಯಲ್ಲಿ ‘ಜನುಮದ ಜೋಡಿ’ ಚಿತ್ರದ ಹೆಸರು ಬರಲು ಕಾರಣರಾಗಿದ್ದು ಮಾತ್ರ ಸಂಗೀತ ನಿರ್ದೇಶಕ ವಿ.ಮನೋಹರ್. ಯಾಕೆಂದರೆ ‘ಮತ್ತೆ ಉದ್ಭವ’ ಚಿತ್ರದ ಸಂಗೀತ ನಿರ್ದೇಶಕರು ಕೂಡ ಅವರೇ. ದರ್ಶನ್ ಅವರು ಕಾರ್ಯಕ್ರಮಕ್ಕೆ ಬರುತ್ತಲೇ ಅವರಿದ್ದೆಡೆ ತೆರಳಿ ಆತ್ಮೀಯವಾಗಿ ಮಾತನಾಡಿಸಿದ್ದ ಮನೋಹರ್ ಅವರು ಆ ಮೂಲಕ ದರ್ಶನ್ ಅವರೊಂದಿಗೆ ತಮಗಿರುವ ಬಾಂಧವ್ಯವನ್ನು ಹೊರಗೆಡಹಿದ್ದರು.
ದರ್ಶನ್ ಕೂಡ ಕುಳಿತಲ್ಲಿಂದ ಎದ್ದು ನಿಂತು ಮನೋಹರ್ ಅವರ ಹೊಟ್ಟೆ ಮುಟ್ಟಿ ತುಂಬ ಆತ್ಮೀಯವಾಗಿ ಮಾತನಾಡಿಸಿದ್ದು ಎಲ್ಲರ ಕಣ್ಣಿಗೆ ಕಾಣುತ್ತಿತ್ತು. ಬಹುಶಃ ಸೃಜನ್ ಅವರ ಕುಚಿಕು ಸ್ನೇಹಿತರಾಗಿರುವ ದರ್ಶನ್ ‘ಮಜಾ ಟಾಕೀಸ್’ ಪ್ರೇಕ್ಷಕನೂ ಹೌದಾಗಿರುವ ಕಾರಣ, ಆ ವೀಕ್ಷಣೆ, ಭೇಟಿಗಳು ತಂದ ಆತ್ಮೀಯತೆ ಇದಾಗಿರಬಹುದು ಎನ್ನುವಂತೆ ಭಾಸವಾಗುತ್ತಿತ್ತು. ಆದರೆ ವೇದಿಕೆ ಮೇಲೆ ದರ್ಶನ್ ಮಾತ್ರ ನೆನಪಿಸಿಕೊಂಡಿದ್ದು ಮನೋಹರ್ ಅವರ ಹಾಸ್ಯವನ್ನಲ್ಲ; ಸಂಗೀತವನ್ನು ಎನ್ನುವುದು ತುಂಬ ಸಾಂದರ್ಭಿಕವಾಗಿತ್ತು.
ಅವರು ಎಂಥ ಸಂಗೀತ ನಿರ್ದೇಶಕರು ಎನ್ನುವುದಕ್ಕೆ ‘ಮಣಿ ಮಣಿ ಮಣಿ ಮಣಿಗೊಂದು ಹಾರ’ ಎನ್ನುವ ಹಾಡೇ ಉದಾಹರಣೆ ಎನ್ನುವುದು ದರ್ಶನ್ ಅನಿಸಿಕೆಯಾಗಿತ್ತು. ಯಾಕೆಂದರೆ, ಅದು ಮೂಲತಃ ಹಾಡಾಗಿರಲಿಲ್ಲ. ಬರಗೂರು ರಾಮಚಂದ್ರಪ್ಪನವರು ಬರೆದ ಸಂಭಾಷಣೆಯಾಗಿತ್ತು. ಆ ಸಂಭಾಷಣೆಯನ್ನು ಬದಲಾಯಿಸದೇ ಅದರಲ್ಲೇ ರಾಗ ಹುಡುಕಿ ಅದನ್ನು ಹಾಡು ಮಾಡಿದ ಕೀರ್ತಿ ಮನೋಹರ್ ಅವರದ್ದು. ಪರದೆಯ ಮೇಲೆ ಎತ್ತಿನ ಗಾಡಿ ಓಡಿಸುವ ಶಿವರಾಜ್ ಕುಮಾರ್ ಮತ್ತು ಅದರಲ್ಲಿ ಕುಳಿತಿರುವ ಶಿಲ್ಪಾ ನಡುವೆ ನಡೆಯುವ ಸಂಭಾಷಣೆ ಅದು. ಶಿಲ್ಪಾ ಅವರಿಗೆ ಮಂಜುಳಾ ಗುರುರಾಜ್ ಕಂಠವಾಗಿದ್ದರೆ, ಶಿವಣ್ಣ ಖುದ್ದಾಗಿ ಹಾಡಿಕೊಂಡಿದ್ದರು. ಅದೇ ಎತ್ತಿನ ಬಂಡಿಯೊಳಗೆ ಪವಿತ್ರಾ ಲೋಕೇಶ್ ಕೂಡ ಇರುವ ಆ ದೃಶ್ಯ ಬಹುತೇಕ ಕನ್ನಡಿಗರಿಗೆ ಇಂದಿಗೂ ಸುಪರಿಚಿತ. ಹಾಡು ಸಿನಿಮಾದಲ್ಲಿ ಮಾತ್ರವಲ್ಲ; ಕ್ಯಾಸೆಟ್ ಮೂಲಕವೂ ದೊಡ್ಡ ಪ್ರಮಾಣದಲ್ಲಿ ಜನರನ್ನು ತಲುಪಿತ್ತು. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಟಿ ಎಸ್ ನಾಗಾಭರಣ ಅವರ ಬಹುದೊಡ್ಡ ಕಮರ್ಷಿಯಲ್ ಹಿಟ್ ಚಿತ್ರ ಅದಾಗಿತ್ತು. ಅಂಥದೊಂದು ಚಿತ್ರಕ್ಕೆ ಅಂಥದೊಂದು ಹಾಡು ನೀಡಿದ ಮನೋಹರ್ ಅವರ ಜಾಣ್ಮೆ ನಿಜಕ್ಕೂ ಅದ್ಭುತ. ಹಾಗಾಗಿಯೇ ದರ್ಶನ್ ಅದನ್ನು ನೆನಪಿಸಿಕೊಂಡರು. ”ಮೊನ್ನೆ ಟಿವಿಯಲ್ಲಿ ‘ಜನುಮದ ಜೋಡಿ’ ಸಿನಿಮಾ ನೋಡುವಾಗ ಎಲ್ರಿಗೂ ಅದನ್ನೇ ಹೇಳ್ತಿದ್ದೆ.. ಮನೋಹರ್ ಸರ್ ಅವರು ಇದರಲ್ಲೂ ಅದೇ ರೀತಿ ತಮ್ಮ ಕೈ ಚಳಕ ತೋರಿಸಿರ್ತಾರೆ ಅಂದ್ಕೋತೀನಿ” ಎಂದಿದ್ದಾರೆ ದರ್ಶನ್.


ಕರ್ನಾಟಕದಲ್ಲಿ ದರ್ಶನ್ ಅವರಿಗೆ ಇಂದು ಅಪಾರ ಅಭಿಮಾನಿಗಳಿದ್ದಾರೆ. ಕಳೆದ ಮೂರುವರೆ ದಶಕಗಳಿಂದ ಸ್ಟಾರ್ ಆಗಿ ಮೆರೆಯುತ್ತಿರುವ ಶಿವರಾಜ್ ಕುಮಾರ್ ಅವರ ಅಭಿಮಾನಿಗಳ ಬಗ್ಗೆ ಮಾತನಾಡುವುದೇ ಬೇಕಾಗಿಲ್ಲ. ಇವರಿಬ್ಬರೂ ಕನ್ನಡದ ಸಿನಿಮಾಗಳಲ್ಲಿ ಮಾತ್ರ ತಮ್ಮ ಗಮನ ನೆಟ್ಟಿರುವ ಕಾರಣ ಇಬ್ಬರಿಗೂ ಕಾಮನ್ ಅಭಿಮಾನಿಗಳು ಕೂಡ ಇದ್ದಾರೆ. ಆದರೆ ದರ್ಶನ್ ಮತ್ತು ಶಿವರಾಜ್ ಕುಮಾರ್ ಅವರು ಮುಹೂರ್ತ ಸಮಾರಂಭಗಳಲ್ಲಿ ಜತೆಯಾಗಿ ಕಾಣಿಸಿದ್ದು ಬಿಟ್ಟರೆ ಸಿನಿಮಾಗಳಲ್ಲಿ ಒಂದಾಗಿಲ್ಲ.
ಹಾಗಾಗಿ ಈ ಜೋಡಿ ಒಂದಾಗಿ ತೆರೆಯ ಮೇಲೆ ಬರಲಿ ಎಂದು ಹಾರೈಸುವವರಿಗೆ ಕೊರತೆಯೇ ಇಲ್ಲ. “ಜೊತೆಯಾಗಿ ನಟಿಸುವುದಿದ್ದರೆ ತನಗಿಂತ ಹಿರಿಯ ನಟರಾದ ಶಿವಣ್ಣನಿಗೆ ದೊಡ್ಡ ಪಾತ್ರವೇ ಇರಲಿ, ತಾನು ಸೈಡಲ್ಲೇ ಇರುತ್ತೇನೆ” ಎನ್ನುವ ದರ್ಶನ್ ಅವರ ವಿನಯವಂತಿಕೆಯ ಮಾತುಗಳನ್ನು ಈಗಾಗಲೇ ಕೇಳಿದ್ದೇವೆ. “ದರ್ಶನ್ ಅವರು ನನ್ನ ಜತೆಗೆ ನಟಿಸುವಾಗ ಅವರ ಸ್ಟಾರ್ ಡಮ್ ಗೆ ತಕ್ಕಂಥ ಪಾತ್ರವೇ ಇರಬೇಕು” ಎನ್ನುವ ಶಿವಣ್ಣನ ಹೃದಯ ತುಂಬಿದ ಮಾತನ್ನೂ ಕೇಳಿದ್ದೇವೆ. ಹಾಗಾಗಿ ಇಲ್ಲಿ ಪಾತ್ರದ ಹೆಚ್ಚು ಕಡಿಮೆ ಪ್ರಮಾಣದ ಮಾತನಾಡಿ ಜಗಳವಾಡುವ ಅಭಿಮಾನಿಗಳಿಗೆ ಕೆಲಸವಂತೂ ಇರುವುದಿಲ್ಲ. ಯಾಕೆಂದರೆ ಈ ಕಲಾವಿದರೇ ಪರಸ್ಪರ ಬಿಟ್ಟು ಕೊಡುವವರಲ್ಲ ಎಂದು ಸಾಬೀತಾಗಿದೆಯಲ್ಲ. ಮಾತ್ರವಲ್ಲ, ಎಲ್ಲವೂ ಸರಿಯಾಗಿದ್ದಿದ್ದರೆ ಈಗಾಗಲೇ ‘ಕುರುಕ್ಷೇತ್ರ’ ಚಿತ್ರದಲ್ಲಿ ಕರ್ಣನಾಗಿ ಶಿವಣ್ಣ ನಟಿಸಿರಬೇಕಿತ್ತು. ಆದರೆ ಅವಸರದಲ್ಲಿ ಕಾಲ್ಷೀಟ್ ಕೇಳಿದ್ದಕ್ಕಾಗಿ ಶಿವಣ್ಣ ಒಪ್ಪಿರಲಿಲ್ಲ. ಚಿತ್ರ ತೆರೆಗೆ ಬಂದ ಮೇಲೆ ದುರ್ಯೋಧನನಷ್ಟೇ ಗಮನ ಸೆಳೆದ ಪಾತ್ರ ಕರ್ಣನದಾಗಿತ್ತು. ಒಂದುವೇಳೆ ಶಿವಣ್ಣ ನಟಿಸಿದ್ದರೆ ಅದು ಕನ್ನಡಿಗರಿಗೆ ಇನ್ನಷ್ಟು ಆತ್ಮೀಯವಾಗುತ್ತಿತ್ತು ಎನ್ನುವುದರಲ್ಲಿ ಸಂದೇಹವೇ ಇರಲಿಲ್ಲ. ಆದರೆ ಎಲ್ಲಕ್ಕೂ ಕಾಲ ಕೂಡಿ ಬರಬೇಕು.
ಇದೀಗ ದರ್ಶನ್ ಅವರು ಮನೋಹರ್ ಅವರ ಸಂಗೀತವನ್ನು ಮೆಚ್ಚಿಕೊಂಡಿದ್ದಾರೆ. ಮಾತ್ರವಲ್ಲ, ಅದರಲ್ಲೂ ಶಿವಣ್ಣನ ಅನುಪಸ್ಥಿತಿಯಲ್ಲಿ ಅವರ ಚಿತ್ರ ನೋಡಿರುವುದನ್ನು ಹೇಳಿದ್ಧಾರೆ. ಯಾಕೆಂದರೆ “ಸಿನಿಮಾ ಅಂತ ಬಂದಾಗ ನಮಗೆಲ್ಲ ಇರೋದು ಕಾಂಪಿಟೇಶನ್ ಒಂದೇ. ಅದರಲ್ಲಿ ಹೆಲ್ದಿ ಪಲ್ದಿ ಅಂತ ಏನಿಲ್ಲ” ಎಂದಿದ್ದವರು ದರ್ಶನ್. ಅಂಥವರ ಬಾಯಿಯಿಂದ ‘ತಾನು ಮತ್ತೊಬ್ಬ ಸ್ಟಾರ್ ನ ಹಳೆಯ ಸಿನಿಮಾವನ್ನು ಈಗಲೂ ಮೆಚ್ಚಿಕೊಂಡು ನೋಡುತ್ತಿದ್ದೇನೆ’ ಎನ್ನುವ ಮಾತು ಹೊರಗೆ ಬಂದಿದ್ದೇ ವಿಶೇಷ. ಇನ್ನೇನು ವಿ ಮನೋಹರ್ ಅವರು ಸಂಗೀತ ನಿರ್ದೇಶಕರು ಮಾತ್ರವಲ್ಲ, ಈಗಾಗಲೇ ಶಿವರಾಜ್ ಕುಮಾರ್ ಅವರ ಸಿನಿಮಾವೊಂದನ್ನು ನಿರ್ದೇಶಿಸಿದಂಥವರು. ಅವರ ಬಳಿಯಲ್ಲಿ ಇಂದಿಗೂ ಕತೆ, ಕಾನ್ಸೆಪ್ಟ್ ಗಳಿಗಂತೂ ಕೊರತೆಯೇ ಇಲ್ಲ.
ಹಾಗಾಗಿ ಅವರೇ ಈ ಇಬ್ಬರನ್ನು ಸೇರಿಸಿ ಚಿತ್ರ ಮಾಡಿದರೆ ಅದು ಕನ್ನಡದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಬಹುದು ಎಂದು ನಿರೀಕ್ಷಿಸೋಣ.. ಅಲ್ಲವೇ..?

ಜನುಮದ ಜೋಡಿ ಸಂಪೂರ್ಣ ಸಿನಿಮಾ ನೋಡಿ
ಜನುಮದ ಜೋಡಿಯ ಸೂಪರ್ ಹಿಟ್ “ಮಣಿ ಮಣಿ ಮಣಿಗೊಂದು ದಾರ” ಹಾಡು ಕೇಳಿ