
ಗಡಿನಾಡು ಹೆಸರಲ್ಲಿ ಸುದ್ದಿಯಾಗಿರುವ ಚಿತ್ರ ಇದೇ ವಾರ ತೆರೆಗೆ ಬರಲು ಸಿದ್ಧವಾಗಿದೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರವನ್ನು ಕತೆಯಾಗಿರಿಸಿ ತೆರೆಗೆ ಬರುತ್ತಿರುವ ಈ ಚಿತ್ರವು ತೆರೆಕಾಣದಂತೆ ತಮಗೆ ಬೆದರಿಕೆ ಕರೆ ಬಂದಿರುವುದಾಗಿ ಚಿತ್ರದ ನಿರ್ದೇಶಕ ನಾಗ್ ಹುಣಸೋಡು ಅವರು ಆಪಾದಿಸಿದ್ದಾರೆ. ಬಿಡುಗಡೆಪೂರ್ವ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.
ಚಿತ್ರ ಶೂಟಿಂಗ್ ಆರಂಭಿಸಿದ ದಿನಗಳಿಂದಲೇ ಶೀರ್ಷಿಕೆ ಬದಲಾಯಿಸುವಂತೆ ಬಂದಿದ್ದ ಕರೆಗಳು ಇದೀಗ ಚಿತ್ರ ಬಿಡುಗಡೆಯಾಗದಂತೆ ತಡೆಯಾಜ್ಞೆ ತರುವ ತನಕ ಮುಂದುವರಿದಿದೆ. ಈ ಬಗ್ಗೆ ನಿರ್ದೇಶಕರು ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅವರು ಕರೆ ಬಂದಿದ್ದ ನಿರ್ದೇಶಕರ ಮನೆಯ ವ್ಯಾಪ್ತಿಯಲ್ಲಿ ಅಂದರೆ ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವಂತೆ ಹೇಳಿದ್ದಾರಂತೆ. ಪತ್ರಿಕಾಗೋಷ್ಠಿಯ ಬಳಿಕ ದೂರು ನೀಡಲು ಹೋಗುವುದಾಗಿ ನಿರ್ದೇಶಕರು ಹೇಳಿದ್ದಾರೆ. ಅಂದಹಾಗೆ ತಮಗೆ ಬಂದ ಕರೆಯ ರೆಕಾರ್ಡ್ ಅನ್ನು ನಿರ್ದೇಶಕರು ಮಾಧ್ಯಮದ ಮುಂದೆ ಕೇಳಿಸಿದಾಗ ಮಾತನಾಡಿದವರು ತಮ್ಮ ಹೆಸರು ಪ್ರೊಫೆಸರ್ ಬಿ.ಕೆ ರಾವ್ ಬೈಂದೂರು ಎಂದು ಹೇಳಿರುವಂತೆ ಕೇಳಿಸಿದೆ. ಗಡಿವ್ಯಾಪ್ತಿಯ ಸಮಿತಿಗೆ ಅಧ್ಯಕ್ಷರಾಗಿದ್ದು, ಗಡಿ ಪದ ಉಪಯೋಗಿಸಿ ಯಾವುದೇ ಚಿತ್ರ ತೆರೆಕಂಡಾಗ ಅದು ಒಂದು ಗಡಿ ಭಾಗದ ಜನರಲ್ಲಿ ಅಸಮಾಧಾನ ಮೂಡಿಸುತ್ತದೆ. ಹಾಗೆ ಅಶಾಂತಿಯ ವಾತಾವರಣಕ್ಕೆ ಕಾರಣವಾಗುವ ಚಿತ್ರವನ್ನು ನಾವು ತಡೆಯುವುದಾಗಿ ಅವರು ಹೇಳಿಕೊಂಡಿದ್ದಾರೆ.
ಬಳಿಕ ಮಾತನಾಡಿದ ನಿರ್ಮಾಪಕ ವಸಂತ್ ಮುರಾರಿ ದಳವಾಯಿ ಇದು ಒಂದು ನೈಜ ಘಟನೆಯನ್ನು ಆಧಾರಿಸಿ ತಯಾರಾದ ಚಿತ್ರ. ಇದರಲ್ಲಿ ಗಡಿಭಾಗದ ಸಮಸ್ಯೆಯನ್ನು ಕೂಡ ಹೇಳಲಾಗಿದೆ ಎಂದರು. ಚಿತ್ರದ ನಾಯಕರಾಗಿ ಪ್ರಭು ಸೂರ್ಯ ನಟಿಸಿದ್ದು, ನಾಯಕಿಯಾಗಿ ಸಂಚಿತಾ ಪಡುಕೋಣೆ ಅಭಿನಯಿಸಿದ್ದಾರೆ. ಚಿತ್ರದಲ್ಲಿ ತಮ್ಮದು ಮರಾಠಿ ಹುಡುಗಿಯ ಪಾತ್ರ ಎಂದು ಅವರು ಹೇಳಿದರು. ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರವು ಇದೇ ಶುಕ್ರವಾರ ರಾಜ್ಯಾದ್ಯಂತ ನೂರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.