ತಿಪಟೂರಲ್ಲಿ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿಸಿ ತಯಾರಾಗಿರುವ ಚಿತ್ರ ‘ನಾನು ಮತ್ತು ಗುಂಡ’. ಶಿವರಾಜ್ ಕೆ.ಆರ್ ಪೇಟೆ ಪ್ರಧಾನ ಪಾತ್ರದಲ್ಲಿರುವ ಈ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲು ಸಿದ್ಧವಾಗಿದೆ. ಬಿಡುಗಡೆ ಪೂರ್ವಭಾವಿಯಾಗಿ ಮಾಧ್ಯಮದೊಂದಿಗೆ ಮಾತನಾಡಿದ ಚಿತ್ರತಂಡ ನೀಡಿರುವ ಮಾಹಿತಿಗಳು ಇಲ್ಲಿವೆ.
ತಿಪಟೂರಿನಲ್ಲಿ ಒಬ್ಬ ರಿಕ್ಷಾ ಚಾಲಕ ನಾಯಿಯನ್ನು ಆತ ಹೋಗುವ ಎಲ್ಲ ಕಡೆಗೂ ಕರೆದೊಯ್ಯುತ್ತಾನೆ ಎನ್ನುವ ಸುದ್ದಿ ಸಿಕ್ಕಿತ್ತು. ಆತ ಮತ್ತು ನಾಯಿಯ ಬಾಂಧವ್ಯವನ್ನು ಕಿರುಚಿತ್ರ ಮಾಡಲು ಹೋಗಿದ್ದ ನಾವು, ಕತೆ ಮೂಡಿ ಬರುತ್ತಿರುವ ರೀತಿಯನ್ನು ನೋಡಿ ಅದನ್ನೇ ಒಂದು ಫೀಚರ್ ಫಿಲ್ಮ್ ಮಾಡಬಹುದು ಎನ್ನುವ ತೀರ್ಮಾನಕ್ಕೆ ಬಂದೆವು. ಹಾಗೆ ತಯಾರಾದ ಚಿತ್ರವೇ ನಾನು ಮತ್ತು ಗುಂಡ ಎಂದು ಚಿತ್ರದ ನಿರ್ಮಾಪಕ ರಘು ಹಾಸನ್ ತಿಳಿಸಿದರು. ಮೂಲತಃ ನಿರ್ದೇಶಕರಾಗಿರುವ ರಘು ಹಾಸನ್ ಈ ಚಿತ್ರವನ್ನು ನಿರ್ಮಿಸಿ, ಶ್ರೀನಿವಾಸ ತಿಮ್ಮಯ್ಯ ಅವರನ್ನು ನಿರ್ದೇಶಕರನ್ನಾಗಿಸಿದ್ದಾರೆ. ಶ್ರೀನಿವಾಸ ತಿಮ್ಮಯ್ಯ ಅವರು ಹೇಳುವ ಪ್ರಕಾರ, ಮನುಷ್ಯರ ನಡುವಿನ ಸಂಬಂಧಗಳು ದಿನೇದಿನೇ ನಂಬಿಕೆ ಕಳೆದುಕೊಳ್ಳುತ್ತಿವೆ. ಹಾಗಾಗಿ ಅವರು ಪರ್ಯಾಯ ನಂಬಿಕೆಗಾಗಿ ಸಾಕು ಪ್ರಾಣಿಗಳೊಂದಿಗೆ ಆತ್ಮೀಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಂಥದೊಂದು ಘಟನೆಯನ್ನು ಸ್ಪೂರ್ತಿಯಾಗಿ ಮಾಡಿದಂಥ ಕತೆ ಇದು. ಚಿತ್ರಕತೆಯಲ್ಲಿ ನಿರ್ಮಾಪಕ ರಘು ಹಾಸನ್ ಕೂಡ ಕೈ ಜೋಡಿಸಿದ್ದಾರೆ. ಅವರು ನಿರ್ಮಾಪಕರಾಗಿ ನನಗೆ ನಿರ್ದೇಶನದ ಅವಕಾಶ ನೀಡಿರುವುದಕ್ಕೆ ವಂದನೆಗಳು ಎಂದರು.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮತ್ತೋರ್ವ ನಟ ಜಿ.ಕೆ ಖ್ಯಾತಿಯ ಗೋವಿಂದೇ ಗೌಡ ಚಿತ್ರದಲ್ಲಿ ‘ಬೂರಿ’ ಎನ್ನುವ ಪಾತ್ರ ಮಾಡಿರುವುದಾಗಿ ತಿಳಿಸಿದರು. “ಹೆಸರಿಗೆ ತಕ್ಕಂತೆ ಸುಳ್ಳು ಹೇಳುತ್ತಾ ಬದುಕು ಸಾಗಿಸುವವನ ಪಾತ್ರ ನನ್ನದು. ನನಗೂ ನಾಯಿ ಜತೆಗೆ ಕಾಂಬಿನೇಶನ್ ದೃಶ್ಯಗಳು ಇವೆ” ಎಂದರು. ಚಿತ್ರಕ್ಕೆ ಸಂಗೀತ ನೀಡಿರುವ ಕಾರ್ತಿಕ್ ಶರ್ಮ ಹಿನ್ನೆಲೆ ಸಂಗೀತದಲ್ಲಿ ಹೆಚ್ಚು ಕೆಲಸ ಮಾಡಿರುವುದಾಗಿ ಹೇಳಿದರು. ಚಿತ್ರದಲ್ಲಿ ಐದು ಹಾಡುಗಳಿದ್ದು ಹಾಸ್ಯ, ನೋವು, ಡ್ಯುಯೆಟ್ ಹಾಡುಗಳಿದ್ದು ಮಾಧುರ್ಯ ಪೂರ್ಣ ಗೀತೆಗಳಿವೆ ಎಂದರು. ರೋಹಿತ್ ಮತ್ತು ರಮಣ್ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದು, ಶರತ್ ಚಕ್ರವರ್ತಿ ಸಂಭಾಷಣಾಕಾರರಾಗಿದ್ದಾರೆ.
ಚಿತ್ರದ ಪ್ರಮುಖ ಅಂಶವಾಗಿ ನಾಯಿಯೇ ಕಾಣಿಸಿಕೊಳ್ಳಲಿದೆ. ನಾಯಿ ಕೂಡ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದು, ಅದರ ಪೋಷಕರ ಅದನ್ನು ಪ್ರೀತಿಯಂದ ‘ಸಿಂಬ’ ಎಂದು ಕರೆಯುತ್ತಿದ್ದರು. ಶೀರ್ಷಿಕೆಯಲ್ಲಿನ ‘ಗುಂಡ’ ಎನ್ನುವ ಹೆಸರು ನಾಯಿಯನ್ನು ಪ್ರತಿನಿಧಿಸುತ್ತದೆಯಂತೆ.