ಹೆಸರು ಯೋಗೇಶ್ ರಾಜ್. ಆದರೆ ಜನರು ಗುರುತಿಸುವುದು ಅರ್ಜುನ್ ಎಂದೇ. ಅದಕ್ಕೆ ಕಾರಣ ಎಂಟು ವರ್ಷಗಳ ಹಿಂದೆ ಪ್ರಸಾರವಾದ ‘ಅಕ್ಕ’ ಧಾರಾವಾಹಿ. ಅದರಲ್ಲಿ ಅರ್ಜುನ್ ಹೆಸರಿನಿಂದ ಮಹಿಳಾ ಮಣಿಗಳ ಕಣ್ಮಣಿಯಾದಂಥ ಪಾತ್ರಧಾರಿ. ಇದೀಗ ಕಾಲೇಜ್ ಹುಡುಗಿಯರು ಕೂಡ ಕಣ್ಣರಳಿಸಿ ನೋಡುವ ಸಿಕ್ಸ್ ಪ್ಯಾಕ್ ಗಾತ್ರಧಾರಿ! ಈ ಬದಲಾವಣೆಗೆ ಹೆಸರು ಡೆಡಿಕೇಶನ್ ಅಥವಾ ಆತ್ಮ ಸಮರ್ಪಣೆ.
ಯಶಸ್ಸನ್ನು ‘ಚೇಸ್’ ಮಾಡುತ್ತಿರುವ ಪಯಣ
ಬಣ್ಣದ ಲೋಕದಲ್ಲಿ ಮೊದಲ ಐದು ವರ್ಷ ಕಿರುತೆರೆ ಮತ್ತು ಇದೀಗ ಮೂರು ವರ್ಷಗಳಿಂದ ಬೆಳ್ಳಿತೆರೆಯಲ್ಲಿ ತಾರೆಯಾಗುವ ಬೆಳವಣಿಗೆ. ಈ ದಾರಿಯಲ್ಲಿ ದೊರಕಿದ್ದು ಮೂರು ವಿಭಿನ್ನ ಚಿತ್ರಗಳು. ಮೊದಲನೇ ಚಿತ್ರ ದಿನಕರ ತೂಗುದೀಪ ಅವರ ಬ್ಯಾನರ್ ನಲ್ಲಿ ‘ಮದುವೆಯ ಮಮತೆಯ ಕರೆಯೋಲೆ’. ಆದರೆ ನಾಯಕನಾಗಿದ್ದು ಎರಡು ವರ್ಷಗಳ ಹಿಂದೆ ತೆರೆಕಂಡ ‘ಏನೆಂದು ಹೆಸರಿಡಲಿ’ ಚಿತ್ರದ ಮೂಲಕ. ‘ಅತೃಪ್ತ’ ಎನ್ನುವುದು ನಾಯಕನಾಗಿ ದೊರಕಿದ ಎರಡನೇ ಚಿತ್ರ. ಆದರೆ ಆತ್ಮತೃಪ್ತನಾಗಿದ್ದು ಸಪ್ಟೆಂಬರ್ ನಲ್ಲಿ ಬಿಡುಗಡೆಯಾದ ನನ್ನ ಪ್ರಕಾರ ಚಿತ್ರದಿಂದ. ಕಿಶೋರ್, ಪ್ರಿಯಾಮಣಿ ಹೀಗೆ ಬಹುತಾರಾಗಣದ ಆ ಚಿತ್ರದಲ್ಲಿ ಸೆಕೆಂಡ್ ಲೀಡ್ ಆಗಿ ಮಯೂರಿಗೆ ಜೋಡಿಯಾಗಿ ನಿರ್ವಹಿಸಿದ ಪಾತ್ರ ವೀಕ್ಷಕರ ಮನಸೆಳೆದಿತ್ತು. ಇದೀಗ ಮುಂದಿನ ತಿಂಗಳು ‘ಚೇಸ್’ ಎನ್ನುವ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಆ ಚಿತ್ರದ ಎರಡು ವಿಭಿನ್ನ ಶೇಡ್ ಪಾತ್ರಕ್ಕಾಗಿ 5 ಕೆ.ಜಿ ತೂಕ ಇಳಿಸಿಕೊಂಡಿದ್ದರು. ಆದರೆ ಐದು ತಿಂಗಳ ಹಿಂದೆ ಬಂದಂಥ ಅಫರ್ ಒಂದು ಅವರನ್ನು ಬರೋಬ್ಬರಿ 12 ಕೆ.ಜಿ ಮೈತೂಕ ಕಡಿಮೆಗೊಳಿಸಲು ಪ್ರೇರಣೆಯಾಗಿದೆ.
ದ್ವಿಭಾಷೆಗಳಲ್ಲಿ ತೆರೆಕಾಣಲಿದೆ ಹೊಸ ಚಿತ್ರ..!
ಇಷ್ಟು ವರ್ಷದ ಪ್ರಯತ್ನಕ್ಕೆ ಫಲ ಕೊಡುವ ಕಾಲ ಬಂದಿದೆ. ಯೋಗೇಶ್ ರಾಜ್ ಪ್ರತಿಭೆ ಈಗ ಎಲ್ಲರ ಗಮನ ಸೆಳೆದಿದೆ. ಇದು ಪ್ಯಾನ್ ಇಂಡಿಯಾ ಚಿತ್ರಗಳ ಕಾಲ. ಈತನ ಪ್ರತಿಭೆ ಕಂಡಾಗ ಎರಡು ಭಾಷೆಗಳ ಪ್ರೇಕ್ಷಕರನ್ನು ನಿಭಾಯಿಸಬಲ್ಲ ಪ್ರತಿಭೆ ಎನ್ನುವ ಸತ್ಯ ನಿರ್ದೇಶಕರಿಗೆ ಅರಿವಾಗಿದೆ. ಹಾಗಾಗಿ ತಮ್ಮ ದ್ವಿಭಾಷಾ ಪ್ರಾಜೆಕ್ಟ್ ಗೆ ಇವರನ್ನೇ ನಾಯಕರಾಗಿಸಿದ್ದಾರೆ. ಆದರೆ ಇಂದು ಮಾಸ್ ಚಿತ್ರದ ನಾಯಕನಿಗೆ ಅಭಿನಯ ಮಾತ್ರವಲ್ಲ; ದೇಹದಾರ್ಢ್ಯತೆ ಕೂಡ ಆಕರ್ಚಕವಾಗಿರಬೇಕಾದ ಅನಿವಾರ್ಯತೆ ಇದೆ. ಅಂಥದೊಂದು ನಿರೀಕ್ಷೆ ಅವರಿಂದ ಎದುರಾಗಿದ್ದೇ, ಅರ್ಜುನ್ ಈ ರೀತಿಯ ಒಂದು ಟ್ರಾನ್ಸಫರ್ಮೇಶನ್ ಗೆ ತಯಾರಾಗಿದ್ದಾರೆ. ಐದೇ ತಿಂಗಳಲ್ಲಿ ಮೈ ಹುರಿ ಮಾಡಿಕೊಂಡು ಅಚ್ಚರಿ ಸೃಷ್ಟಿಸಿರುವ ಅರ್ಜುನ್, ಅದರ ಕ್ರೆಡಿಟ್ ಅನ್ನು ಸಂಪೂರ್ಣವಾಗಿ ತಮ್ಮ ಜಿಮ್ ಕೋಚ್ ಅವರಿಗೆ ಸಮರ್ಪಿಸಿದ್ದಾರೆ. ಅವರ ಹೆಸರು ಶ್ರೀನಿವಾಸ್ ಗೌಡ. “ಅವರ ಗೈಡ್ಲೈನ್ಸ್ ನಲ್ಲಿ ಆರು ತಿಂಗಳು ಕಷ್ಟ ಪಟ್ಟು ಒದ್ದಾಡಿ ಹೀಗೆ ತಯಾರಾಗಿದ್ದೇನೆ. ಅವರು ಈಗಾಗಲೇ ಧನಂಜಯ್, ರಕ್ಷಿತ್ ಶೆಟ್ಟಿ ಮೊದಲಾದವರಿಗೆ ಟ್ರೈನ್ ಮಾಡಿದ್ದಾರೆ. ನನಗೂ ಅವರ ಮೂಲಕ ಟ್ರೈನಿಂಗ್ ಪಡೆದಿರುವುದಕ್ಕೆ ಹೆಮ್ಮೆಯಾಗಿದೆ” ಎನ್ನುತ್ತಾರೆ. ನಮಗೂ ಅಷ್ಟೇ ಯೋಗೇಶ್ ರಾಜ್; ನಿಮ್ಮಂಥ ಸಮರ್ಪಣಾ ಮನೋಭಾವದ ಪ್ರತಿಭಾವಂತ ನಟನನ್ನು ಪಡೆದಿರುವುದಕ್ಕೆ ಹೆಮ್ಮೆ ಇದೆ.