
ರಶ್ಮಿಕಾ ಮಂದಣ್ಣ ನಟನೆಯ ‘ಚಲೋ’ ಎಂಬ ತೆಲುಗು ಚಿತ್ರದ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾದ ನಟ ನಾಗಶೌರ್ಯ. ಇದೀಗ ಅವರು ನಾಯಕರಾಗಿರುವ ‘ಅಶ್ವಥ್ಥಾಮ’ ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಅವರು ಚಿತ್ರದ ಬಗ್ಗೆ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇದು ತಮ್ಮ ಸ್ನೇಹಿತನ ಬದುಕಿನಲ್ಲಿ ನಡೆದಂಥ ಒಂದು ನೈಜ ಘಟನೆಯನ್ನು ಆಧಾರವಾಗಿಸಿ ತಯಾರು ಮಾಡಿರುವ ಚಿತ್ರ ಎಂದು ಮಾತು ಶುರು ಮಾಡಿದ ನಾಯಕ ನಾಗಚೈತನ್ಯ ಚಿತ್ರದ ಕತೆ, ಚಿತ್ರಕಥೆಯನ್ನು ತಾವೇ ರಚಿಸಿರುವುದಾಗಿ ಹೇಳಿದರು. ಮುಂಬೈನಲ್ಲಿ ತನ್ನ ಸ್ನೇಹಿತನ ತಂಗಿಗೆ ಉಂಟಾದ ಘಟನೆಯೇ ಕತೆಗೆ ಸ್ಫೂರ್ತಿ. ಆದರೆ ಆ ಘಟನೆ ತುಂಬಾ ಸೂಕ್ಷ್ಮವಾದ ಸಂಗತಿಯಾಗಿರುವ ಕಾರಣ ಅದರ ಬಗ್ಗೆ ಹೇಳಲಾರೆ. ಆದರೆ ಮಹಿಳೆಯರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವಂಥ ಸಬ್ಜೆಕ್ಟ್ ಇದು ಎಂದು ಮಾತ್ರ ಹೇಳಬಲ್ಲೆ ಎಂದರು ನಾಗ ಶೌರ್ಯ.
ಅಂದಹಾಗೆ ಚಿತ್ರವನ್ನು ಚಿಕ್ಕಮಗಳೂರಲ್ಲಿ ಕೂಡ ಶೂಟ್ ಮಾಡಲಾಗಿದೆ. ಮಹಿಳೆಯರ ಜವಾಬ್ದಾರಿ ವಹಿಸುವ ಕುರಿತಾದ ಚಿತ್ರವಾಗಿರುವ ಕಾರಣ ಕನ್ನಡಿಗರಿಗೂ ಇಷ್ಟವಾಗುವ ಭರವಸೆ ಇದೆ ಎಂದು ನಾಗಶೌರ್ಯ ಹೇಳಿದರು. ದ್ರೌಪತಿಯ ವಸ್ತ್ರಾಪಹರಣದ ಸಮಯದಲ್ಲಿ ಅದನ್ನು ವಿರೋಧಿಸುವ ಮಾತುಗಳನ್ನಾಡಿದ ವ್ಯಕ್ತಿ ಅಶ್ವಥ್ಥಾಮ. ಹಾಗಾಗಿ ಅಂಥದೊಂದು ಪ್ರತಿಭಟಿಸುವ ಧ್ವನಿಯ ಸಂಕೇತವಾಗಿ ಚಿತ್ರಕ್ಕೆ ಅಶ್ವಥ್ಥಾಮ ಎಂದು ಹೆಸರಿಡಲಾಗಿದೆ. ಹೊರತಾಗಿ ಪೌರಾಣಿಕ ಪಾತ್ರದೊಂದಿಗೆ ಬೇರೆ ಯಾವುದೇ ಸಂಬಂಧ ಇಲ್ಲ ಎಂದು ನಾಗ ಶೌರ್ಯ ತಿಳಿಸಿದರು. ಚಿತ್ರವನ್ನು ಕರ್ನಾಟಕದಾದ್ಯಂತ ಬಿಡುಗಡೆಗೊಳಿಸುತ್ತಿರುವ ರಾಕ್ಲೈನ್ ಸಂಸ್ಥೆಯ ಯತೀಶ್ ಮಾತನಾಡಿ, ಸದ್ಯಕ್ಕೆ 60 ಕೇಂದ್ರಗಳಲ್ಲಿ ಬಿಡುಗಡೆಗೊಳಿಸುವ ಯೋಜನೆ ಇದೆ ಎಂದರು.