ಆದಿತ್ಯ ರಾವ್ ಕತೆಯ ಚಿತ್ರದಲ್ಲಿ ಜೋಗಿ ಪ್ರೇಮ್..!

ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಆದಿತ್ಯ ರಾವ್ ಎನ್ನುವ ಭಯೋತ್ಪಾದಕನದ್ದೇ ಸುದ್ದಿ. ಮಂಗಳೂರು ವಿಮಾನ ನಿಲ್ದಾಣದಲ್ಲಿ ‌ಬಾಂಬ್ ಇರಿಸುವ ಮೂಲಕ ಪ್ರಯಾಣಿಕರು ಮತ್ತು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಈತನ ಬಗ್ಗೆ ಚಿತ್ರ ಬರುತ್ತಿರುವ ಸುದ್ದಿ ಹಬ್ಬಿದೆ.

‘ಜೋಗಿ’ ಪ್ರೇಮ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಖ್ಯಾತ ಬರಹಗಾರ, ಸಾಮಾಜಿಕ ಹೋರಾಟಗಾರರಾದ ಚಕ್ರವರ್ತಿ ಚಂದ್ರಚೂಡ್. ಅಂದಹಾಗೆ ಇದು ಆದಿತ್ಯರಾವ್ ಲೈಫ್ ಸ್ಟೋರಿ ಅಲ್ಲವಾದರೂ ಚಿತ್ರದಲ್ಲಿ ಮಂಗಳೂರಿನ ಘಟನೆಯನ್ನು ಕೂಡ ಒಳಪಡಿಸಲಾಗಿದೆಯಂತೆ. ಚಂದ್ರಚೂಡ್ ಅವರು ದಶಕದ ಹಿಂದೆ ‘ಜನ್ಮ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ ಬಳಿಕ ಡೈರೆಕ್ಟ್ ಮಾಡುತ್ತಿರುವ ಎರಡನೇ ಚಿತ್ರ ಇದು. ಇದರ ನಡುವೆ ಒಂದಷ್ಟು ಚಿತ್ರಗಳಿಗೆ ಕತೆ, ಚಿತ್ರಕತೆ ಬರೆದಿರುವ ಅವರ ಸ್ಕ್ರೀನ್ ಪ್ಲೇ ಮತ್ತು ಹಾಡುಗಳಿರುವ ‘ಮೇಲೊಬ್ಬ ಮಾಯಾವಿ’ ಸದ್ಯದಲ್ಲೇ ಬಿಡುಗಡೆಗೆ ತಯಾರಾಗಿದೆ.

ಚಿತ್ರದಲ್ಲಿ ಪ್ರೇಮ್ ಅವರು ನಿರ್ವಹಿಸುತ್ತಿರುವ ಪಾತ್ರ ಯಾವುದು ಮತ್ತು ಆದಿತ್ಯ ರಾವ್ ಕ್ಯಾರೆಕ್ಟರ್ ನಿಭಾಯಿಸುತ್ತಿರುವ ಕಲಾವಿದ ಯಾರು ಎನ್ನುವ ವಿಚಾರಗಳು ಇನ್ನೂ ಹೊರಗೆ ಬಂದಿಲ್ಲ. ಆದರೆ ‘ಆನೆ ಪಟಾಕಿ’ ಚಿತ್ರವನ್ನು ನಿರ್ಮಿಸಿದಂಥ ಸುರೇಶ್ ಅವರು ಈ ಚಿತ್ರದ ನಿರ್ಮಾಪಕರು ಎನ್ನುವ ಸುದ್ದಿ ಗಾಂದಿನಗರದಲ್ಲಿ‌ ಹಬ್ಬುತ್ತಿದ್ದು, ತಕ್ಷಣವೇ ಸಿನಿಕನ್ನಡ ಈ‌ ಮಾಹಿತಿಯನ್ನು ಓದುಗರಿಗೆ ನೀಡುತ್ತಿದೆ. ಸುರೇಶ್ ನಿರ್ಮಾಣದ ‘ಆನೆ ಪಟಾಕಿ’ ಚಿತ್ರದಲ್ಲಿ ಸೃಜನ್ ಲೋಕೇಶ್ ನಾಯಕರಾಗಿದ್ದರು. ಹೆಸರಲ್ಲಿ‌ ಪಟಾಕಿ ಇದ್ದರೂ ಚಿತ್ರ ಸದ್ದು ಮಾಡದೇ ಹೋಗಿತ್ತು. ಆದರೆ ಈ ಬಾರಿ ಬಾಂಬರ್ ನ ಕಾನ್ಸೆಪ್ಟ್ ‌ಇರುವ ಚಿತ್ರವನ್ನೇ ಮಾಡಲು ಹೊರಟಿದ್ದಾರೆ ಸುರೇಶ್‌. ಸಬ್ಜೆಕ್ಟ್ ಕಾರಣಕ್ಕಾಗಿಯೇ ಸದ್ದು ಮಾಡಲು ಆರಂಭಿಸಿರುವ ಈ ಚಿತ್ರಕ್ಕೆ ಜೋಗಿ ಪ್ರೇಮ್ ಕೂಡ ಕೈ ಜೋಡಿಸಿರುವ ಕಾರಣ ಬಾಕ್ಸ್ ಆಫೀಸ್ ಚಿಂದಿ‌ಮಾಡುವ ನಿರೀಕ್ಷೆಯಿದೆ.

ಪ್ರೇಮ್ ಮತ್ತು ಚಂದ್ರಚೂಡ್ ಸಂಬಂಧ!

ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಜೋಗಿ ಪ್ರೇಮ್ ನಟನಾಗಿ ಪಾತ್ರಗಳನ್ನು ‌ಒಪ್ಪಿಕೊಳ್ಳುವುದು ಕಡಿಮೆ. ಆದರೆ ಅವರಿಗೆ ಒಪ್ಪುವಂಥ ಒಂದು ಪಾತ್ರದೊಂದಿಗೆ ನಿರ್ದೇಶಕ ಚಂದ್ರಚೂಡ್ ಅವರು ಸಮೀಪಿಸಿದಾಗ ಪ್ರೇಮ್ ನಿರಾಕರಿಸಲೇ ಇಲ್ಲ. ಮಾತ್ರವಲ್ಲ ಪ್ರೇಮ್ ಮತ್ತು ಚಂದ್ರಚೂಡ್ ಅವರನ್ನು ಚಿತ್ರರಂಗದಲ್ಲಿ ಆಂತರಿಕವಾಗಿ ಬೆಸೆಯುವ ಒಂದು ಸಂಬಂಧ ಇದೆ. ಅದು ನಿರ್ಮಾಪಕ ಆನೇಕಲ್ ಬಾಲರಾಜ್ ಅವರದ್ದು. ಪ್ರೇಮ್ ಅವರು ‘ಕರಿಯ’ ಸಿನಿಮಾದ ಮೂಲಕ ಆನೇಕಲ್ ಬಾಲರಾಜ್ ಅವರಿಗೆ ನಿರ್ಮಾಪಕರಾಗಿ ದೊಡ್ಡದೊಂದು ಯಶಸ್ಸನ್ನು ನೀಡಿದ್ದರು. ದಶಕದ ಬಳಿಕ ಅದೇ ನಿರ್ಮಾಪಕರ ಪುತ್ರ ಸಂತೋಷ್ ಅವರನ್ನು ‌ನಾಯಕರನ್ನಾಗಿಸಿ ‘ಜನ್ಮ’ ಚಿತ್ರವನ್ನು ನಿರ್ದೇಶಿಸಿದವರು ಚಕ್ರವರ್ತಿ ಚಂದ್ರಚೂಡ್.

ಪ್ರೇಮ್ ನಿರ್ದೇಶನದ ಜೊತೆಗೆ ನಾಯಕರಾಗಿ ಕೂಡ ನಟಿಸಿದವರು. ಆದರೆ ತಂತ್ರಜ್ಞರಾಗಿಯೇ ಉಳಿದಿದ್ದ ಚಂದ್ರಚೂಡ್ ಇತ್ತೀಚೆಗೆ ತೆರೆಕಂಡ ‘ರಂಗನಾಯಕಿ’ ಚಿತ್ರದಲ್ಲಿ ನಟನಾಗಿಯೂ ಕಾಣಿಸಿಕೊಂಡಿದ್ದರು. ಇಬ್ಬರೂ ಹಾಡುಗಳನ್ನು ಕೂಡ ಬರೆದು ಮನಗೆದ್ದವರು. ಇಂಥ ಎರಡು ಮಂದಿ ಬಹುಮುಖ ಪ್ರತಿಭೆಗಳ ಸಂಗಮ ಮತ್ತು ಆದಿತ್ಯ ರಾವ್ ಎನ್ನುವ ಭಯೋತ್ಪಾದಕನ ಕಂಟೆಂಟ್ ಎಲ್ಲವೂ ಜತೆಗೆ ಸೇರಿದ ಕಾರಣ, ಸಿನಿಮಾ ಬಗ್ಗೆ ಈಗಲೇ ಜನರಿಗೆ ಕುತೂಹಲ ಮೂಡಿದೆ. ಸದ್ಯದಲ್ಲೇ ಚಿತ್ರದ ಬಗ್ಗೆ ಅಧಿಕೃತ ಮಾಹಿತಿಗಳು ಹೊರಗೆ ಬರಬಹುದು.

#Jogi_prem #Adithya_Rao #New_kannada_Film

##ಜೋಗಿ_ಪ್ರೇಮ್ #ಆದಿತ್ಯ_ರಾವ್ #ಚಂದ್ರಚೂಡ್ #ಮಂಗಳೂರು_ಬಾಂಬ್

Recommended For You

Leave a Reply

error: Content is protected !!
%d bloggers like this: