ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 43ನೇ ವಾರ್ಷಿಕೋತ್ಸವ ಮತ್ತು
19ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಶನಿವಾರ ರಾಜ್ಯ ಕಲಾವಿದರ ಸಂಘದ ರಾಜ್ ಕುಮಾರ್ ಭವನದಲ್ಲಿ ನೆರವೇರಲಿದೆ.

ಪ್ರಶಸ್ತಿ ವಿಜೇತರು

ಹಿರಿಯ ಚಲನಚಿತ್ರ ನಿರ್ಮಾಪಕ ಕೆ. ಪ್ರಭಾಕರ್, ಹಿರಿಯ ಪತ್ರಕರ್ತೆ ಎಸ್.ಜಿ ತುಂಗರೇಣುಕ, ಖ್ಯಾತ ಹಿನ್ನೆಲೆ ಗಾಯಕಿ ಪಿ.ಸುಶೀಲ, ಹಿರಿಯ ನಿರ್ದೇಶಕ ಎಸ್ ಉಮೇಶ್, ಹಿರಿಯ ನಟಿ ಪ್ರಮೀಳಾ ಜೋಷಾಯ್, ಸಂಗೀತ ನಿರ್ದೇಶಕ ಸಾಗರ್ ಗುರುರಾಜ್, ನಿರ್ದೇಶಕ ಪಿ ಶೇಷಾದ್ರಿ, ಹಿರಿಯ ನಟ ಶ್ರೀನಿವಾಸ ಪ್ರಭು, ಚೊಚ್ಚಲ ನಿರ್ದೇಶನಕ್ಕೆ ರಮೇಶ್ ಇಂದಿರ, ಗೀತ ರಚನೆಕಾರ ಕಿನಾಲ್ ರಾಜ್, ಹಿರಿಯ ಪೋಷಕ ನಟ ರಮೇಶ್ ಭಟ್ ಈ ಬಾರಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಗಣ್ಯರ ಉಪಸ್ಥಿತಿ

ಸಮಾರಂಭದಲ್ಲಿ ಹಿರಿಯ ನಟಿ ಮತ್ತು ಮಾಜಿ ಸಚಿವೆ ಉಮಾಶ್ರೀ, ಹಿರಿಯ ಪತ್ರಕರ್ತೆ ಡಾ. ವಿಜಯಾ, ಚಲನಚಿತ್ರ ನಟ ರಾಘವೇಂದ್ರ ರಾಜ್ ಕುಮಾರ್, ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್ ಜೈರಾಜ್ , ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿರುತ್ತಾರೆ.

ಜನಪ್ರಿಯ ನಿರೂಪಕಿ ಅಪರ್ಣಾ ವಸ್ತಾರೆಯವರು ಕಾರ್ಯಕ್ರಮ ನಿರೂಪಿಸಲಿದ್ದು, ಪ್ರಶಸ್ತಿ ಪ್ರಧಾನಕ್ಕೂ ಅರ್ಧ ಗಂಟೆ ಮೊದಲು ಶ್ರೀಧರ್ ಸಾಗರ ಅವರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಾಘವೇಂದ್ರ ಚಿತ್ರವಾಣಿಯ ಬಗ್ಗೆ

ಗಾಂಧಿನಗರದಲ್ಲಿ ಗುರುತಿಸಿಕೊಂಡಿರುವ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ‘ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ’ ಕೂಡ ಒಂದು. 43 ವರ್ಷಗಳ ಇತಿಹಾಸವಿರುವ ರಾಘವೇಂದ್ರ ಚಿತ್ರವಾಣಿಯು 3000 ಚಿತ್ರಗಳಿಗೆ ಪ್ರಚಾರ ಕಾರ್ಯ ಮಾಡಿದಂಥ ಸಾಧನೆ ಮಾಡಿದೆ. ಇದರ
ಸಂಸ್ಥಾಪಕರು ಡಿ.ವಿ ಸುಧೀಂದ್ರ. 1976ರಲ್ಲಿ ‘ಸೊಸೆ ತಂದ ಸೌಭಾಗ್ಯ’ ಅಧಿಕೃತವಾಗಿ ಇವರ ಪ್ರಚಾರಕಾರ್ಯವನ್ನು ಪಡೆದ ಪ್ರಥಮ ಚಿತ್ರ. ಅವರ ಅಣ್ಣನ ಮಗನಾದ ವೆಂಕಟೇಶ್ ಅವರು ಚಿಕ್ಕಪ್ಪನ ಜಥೆಗೆ ವೃತ್ತಿರಂಗಕ್ಕೆ ಕಾಲಿಟ್ಟಿದ್ದು 1986ರಲ್ಲಿ. ಅಂದು ಸುಧೀಂದ್ರ ಅವರ ಪಾಲುದಾರಿಕೆಯಲ್ಲಿ ನಿರ್ಮಾಣಗೊಂಡ ‘ಒಲವಿನ ಉಡುಗೊರೆ’ ಚಿತ್ರದ ಸೆಟ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ವೆಂಕಟೇಶ್ ಆನಂತರ ಹಿಂದಿರುಗಿ ನೋಡಿಲ್ಲ. ಆಗ ಎಸ್ ಎಸ್ ಎಲ್ ಸಿ ರಜಾದಲ್ಲಿದ್ದ ವೆಂಕಟೇಶ್ ಅಲ್ಲಿಂದಲೇ ಶೂಟಿಂಗ್ ನಂಟು ಬೆಳೆಸಿಕೊಂಡರು. ಸುಧೀಂದ್ರ ಅವರ ನಿಧನದ ಬಳಿಕ ಸಂಪೂರ್ಣವಾಗಿ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡ ವೆಂಕಟೇಶ್ ಸುಧೀಂದ್ರ ವೆಂಕಟೇಶ್ ಹೆಸರಲ್ಲೇ ಗುರುತಿಸಿಕೊಂಡಿದ್ದಾರೆ.

ರಾಘವೇಂದ್ರ ಚಿತ್ರವಾಣಿಗೆ 25ನೇ ವರ್ಷ ತುಂಬಿದಾಗ ಸುಧೀಂದ್ರ ಅವರು ಆರಂಭಿಸಿದ ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿ 19ನೇ ವರ್ಷಕ್ಕೆ ಕಾಲಿಟ್ಟಿದೆ. ಹಿಂದೆ ಮೇ ತಿಂಗಳಲ್ಲಿ ನಡೆಸಲಾಗುತ್ತಿದ್ದ ಸಮಾರಂಭವನ್ನು ಸುಧೀಂದ್ರ ಅವರ ಸ್ಮರಣಾರ್ಥವಾಗಿ ಅವರ ಜನ್ಮದಿನವಾದ ಜನವರಿ 25ಕ್ಕೆ ಬದಲಾಯಿಸಿದ್ದಾರೆ ವೆಂಕಟೇಶ್. ಸಮಾರಂಭವು ಚಿತ್ರೋದ್ಯಮದ ಸಹಕಾರದೊಂದಿಗೆ ವೆಂಕಟೇಶ್, ಅವರ ಸಹೋದರ ವಾಸು ಮತ್ತು ಸುಧೀಂದ್ರ ಅವರ ಪುತ್ರ ಸುನೀಲ್ ಅವರ ಮುಂದಾಳುತನದಲ್ಲಿ ನೆರವೇರಲಿದೆ.

Recommended For You

Leave a Reply

error: Content is protected !!
%d bloggers like this: