`ಬಿಗ್ ಬಾಸ್’ ಚಿತ್ರೀಕರಣ ಸ್ಥಗಿತಕ್ಕೆ ತೀರ್ಮಾನ!

ಇನ್ನೇನು ಮೂರು ವಾರದ ದಾಟಿದರೆ ಕನ್ನಡ ಕಿರುತರೆಯ ಜನಪ್ರಿಯ ರಿಯಾಲಿಟಿ ಶೋ `ಬಿಗ್‌ಬಾಸ್‌ ಸೀಸನ್‌’8ರ ಫಿನಾಲೇ ನಡೆಯುತ್ತಿತ್ತು. ಆದರೆ ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಯಾವುದೇ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣ ನಡೆಸದಂತೆ ಒಮ್ಮತದ ತೀರ್ಮಾನ ಕೈಗೊಂಡಿರುವುದಾಗಿ ಕರ್ನಾಟಕ ಟೆಲಿವಿಶನ್ ಅಸೋಸಿಯೇಶನ್ ಅಧ್ಯಕ್ಷ ಎಸ್.ವಿ ಶಿವಕುಮಾರ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಕೋವಿಡ್‌ 19 ಕಾರಣದಿಂದಾಗಿ ಕಿರುತೆರೆ ಉದ್ಯಮವು ಸಾಕಷ್ಟು ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಕಳೆದುಕೊಂಡಿದೆ. ಈ ಸೋಂಕು ಹರಡದಂತೆ ಸರ್ಕಾರ ಕೈಗೊಂಡಿರುವ ಕ್ರಮಕ್ಕೆ `ಕರ್ನಾಟಕ ಟೆಲಿವಿಶನ್ ಅಸೋಸಿಯೇನ್’ ಕೂಡ ಕೈ ಜೋಡಿಸುತ್ತಿದ್ದು, ದಿನಾಂಕ 10ರ ಸೋಮವಾರದಿಂದ ದಿನಾಂಕ 24ರ ಸೋಮವಾರದ ತನಕ ಹದಿನಾಲ್ಕು ದಿನಗಳ ಕಾಲ ಸಂಪೂರ್ಣವಾಗಿ ಚಿತ್ರೀಕರಣ ನಿಲ್ಲಿಸುವಂತೆ ನಿರ್ಧಾರಕ್ಕೆ ಬಂದಿದೆ.

ಬಿಗ್‌ಬಾಸ್‌ ಮೇಲೆ ಹಲವರ ಕಣ್ಣುರಿ!

ಏಪ್ರಿಲ್‌ ಅಂತ್ಯದಲ್ಲಿ ಘೋಷಿಸಲಾದ ಜನತಾ ಕರ್ಫ್ಯೂ ದಿನಗಳಿಂದಲೇ ರಾಜ್ಯದಲ್ಲಿ ಹಲವಾರು ಕನ್ನಡ ಧಾರಾವಾಹಿಗಳ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಮಾತ್ರವಲ್ಲ, ಇನ್ನುಳಿದವುಗಳು ಗುಟ್ಟಾಗಿ ಚಿತ್ರೀಕರಣ ಮುಂದುವರಿಸಿದ್ದವು. ಆದರೆ `ಬಿಗ್‌ಬಾಸ್’ ರಿಯಾಲಿಟಿ ಶೋಗೆ ಸಂಬಂಧಿಸಿದಂತೆ ಹಳೆಯ ಎಪಿಸೋಡ್‌ಗಳ ಪ್ರದರ್ಶನವೂ ಸಾಧ್ಯವಿಲ್ಲ, ಕಂತುಗಳ ಎಳೆದಾಟವೂ ಸಾಧ್ಯವಿಲ್ಲ, ಕೆಲವು ದಿನಗಳ ಕಾಲ ತಡೆ ಹಿಡಿದು ಮತ್ತೆ ಮುಂದುವರಿಸುವುದು ಕೂಡ ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಒಬ್ಬ ಸ್ಪರ್ಧಿಗೆ ನಾಲ್ಕು ಮಂದಿ ಛಾಯಾಗ್ರಾಹಕರನ್ನು ಬಳಸಿಕೊಂಡು ಅದ್ಧೂರಿಯಾಗಿ ಚಿತ್ರೀಕರಣ ನಡೆದೇ ಇರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು.

ಮತ್ತೊಂದು ಕಡೆಯಲ್ಲಿ ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾದ ನಿರೂಪಕ ಕಿಚ್ಚ ಸುದೀಪ್ ಅವರು ಅನಾರೋಗ್ಯದ ಕಾರಣ ಎರಡು ವಾರಗಳ ಕಾಲ ಚಿತ್ರೀಕರಣಕ್ಕೆ ಹಾಜರಾಗಿರಲಿಲ್ಲ. ಮಾತ್ರವಲ್ಲ ಮುಂದುವರಿದ ವಾರಗಳಲ್ಲಿ ಲಾಕ್ಡೌನ್ ಕಾರಣಕ್ಕಾಗಿ ಅವರು ಮನೆ ಬಿಟ್ಟು ಹೊರಟಿರಲಿಲ್ಲ. ಇದೀಗ ಲಾಕ್ಡೌನ್ ನಿಯಮಗಳು ಇನ್ನಷ್ಟು ಕಟ್ಟು ನಿಟ್ಟಾಗಿವೆ. ಮಾತ್ರವಲ್ಲ, ಸುದೀಪ್ ಅವರನ್ನು ಕಾಡಿದ ಅನಾರೋಗ್ಯ ಕೊರೊನಾ ಆಗಿತ್ತೇ ಎನ್ನುವುದನ್ನು ಇದುವರೆಗೂ ತಿಳಿಸಿಲ್ಲ. ಇವೆಲ್ಲದರ ಜೊತೆಗೆ ಹಿಂದಿನ ಹಾಗೆ ಸೆಲೆಬ್ರಿಟಿ ಸ್ಪರ್ಧಿಗಳು ಕೂಡ ಇರದೆ, ವೀಕ್ಷಕರು ಕೂಡ ಶೋ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಈ ಎಲ್ಲ ಕಾರಣದಿಂದಾಗಿ ಶೋ ಅರ್ಧದಲ್ಲೇ ಸ್ಥಗಿತಗೊಳ್ಳುವ ಸಾಧ್ಯತೆ ಎದ್ದುಕಾಣುತ್ತಿದೆ.

ಕಳೆದ ಬಾರಿ ಮಲಯಾಳಂ ಶೋ ಅರ್ಧಕ್ಕೆ ನಿಂತಿತ್ತು!

ಬಿಗ್ ಬಾಸ್ ಕನ್ನಡ ಅರ್ಧಕ್ಕೆ ನಿಂತಲ್ಲಿ ಕನ್ನಡಿಗರಿಗೆ ಇದು ಮೊದಲ ಅನುಭವ ಆಗಿರಬಹುದು. ಆದರೆ ಮಲಯಾಳಂನಲ್ಲಿ ಇದೇ ಕಾರಣಕ್ಕಾಗಿ ಕಳೆದ ವರ್ಷವೇ ಬಿಗ್‌ಬಾಸ್‌ ಸ್ಥಗಿತಗೊಂಡಿತ್ತು. ಮತ್ತು ವಿಜೇತರನ್ನು ಘೋಷಿಸದೇ ಸ್ಪರ್ಧಾಳುಗಳನ್ನು ಮನೆಗೆ ಕಳುಹಿಸಲಾಗಿತ್ತು. ಅಂದಹಾಗೆ ಈ ಬಾರಿಯೂ ಕೇರಳದಲ್ಲಿ ಬಿಗ್‌ಬಾಸ್‌ ಕೊನೆಯ ವಾರ ತಲುಪಿದೆ. ಅಲ್ಲಿ ಇದು ಮೂರನೇ ಸೀಸನ್ ಆಗಿದ್ದು ನಿರಂತರ ನಿರೂಪಕರಾಗಿ ಮೋಹನ್‌ ಲಾಲ್‌ ಇದ್ದಾರೆ.

ಕರ್ನಾಟಕ ಟೆಲಿವಿಶನ್ ಅಸೋಸಿಯೇಶನ್‌ ಚಿತ್ರೀಕರಣ ಸ್ಥಗಿತಗೊಳಿಸಲು ಹೇಳಿರುವುದು ಮಾತ್ರವಲ್ಲದೆ, ಒಂದು ವೇಳೆ ಕೋವಿಡ್ ನಿಯಮ ಉಲ್ಲಂಘಿಸಿ ಚಿತ್ರೀಕರಿಸಿದರೆ ವಾಹಿನಿಗಳು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಈ ಬಗ್ಗೆ ಕಲರ್ಸ್ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ಪ್ರತಿಕ್ರಿಯಿಸಿದ್ದು, ನಾಳೆ ಅಂದರೆ ಭಾನುವಾರ ಬಿಗ್ ಬಾಸ್ ಮನೆಯೊಳಗಿರುವ 11 ಸದಸ್ಯರನ್ನು ಹೊರಗೆ ಕರೆದು ವಿಷಯ ತಿಳಿಸಿ ಸುರಕ್ಷಿತವಾಗಿ ಮನೆಗೆ ಕಳಿಸಿಕೊಡಲಾಗುವುದು ಎಂದಿದ್ದಾರೆ. ಅಲ್ಲಿಗೆ ಶೋ ಅರ್ಧದಲ್ಲೇ ಮುಗಿಯುತ್ತಿರುವುದು ಖಚಿತವಾಗಿದೆ.

Recommended For You

Leave a Reply

error: Content is protected !!
%d bloggers like this: