
ಡಾರ್ಲಿಂಗ್ ಕೃಷ್ಣ ಎರಡೆರಡು ಶೇಡ್ ನಲ್ಲಿ ನಟಿಸಿರುವ ಚಿತ್ರ ‘ಲವ್ ಮಾಕ್ಟೈಲ್’ ಇದೇ ವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಚಿತ್ರದ ಬಿಡುಗಡೆಯ ಪೂರ್ವಭಾವಿಯಾಗಿ ನಡೆಸಲಾದ ಮಾಧ್ಯಮಗೋಷ್ಠಿಯಲ್ಲಿ ಒಂದಷ್ಟು ತಮಾಷೆಯ ಸಂಗತಿಗಳ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತು.
ಇದೊಂದು ಕಾಲೇಜ್ ಲವ್ ಸ್ಟೋರಿಯಾಗಿದ್ದು, ಚಿತ್ರ ನೋಡಿದ ಪ್ರತಿಯೊಬ್ಬರೂ ಒಂದಲ್ಲ ಒಂದು ಪಾತ್ರದ ಮೂಲಕ ತಮ್ಮನ್ನು ಗುರುತಿಸಿಕೊಳ್ಳುವಂತಿದೆ. ಹಾಗಾಗಿ ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದು ನಾಯಕ, ನಿರ್ದೇಶಕ ಕೃಷ್ಣ ಅವರು ಭವಿಷ್ಯ ನುಡಿದರು.
ನಾನು ಈ ಚಿತ್ರ ನಿರ್ಮಾಣದಲ್ಲಿ ಭಾಗಿಯಾಗುವ ಯೋಚನೆಯನ್ನೇ ಮಾಡಿರಲಿಲ್ಲ. ಆದರೆ ಶೂಟಿಂಗ್ ಶುರುವಾದ ನಾಲ್ಕನೇ ದಿನಕ್ಕೆ ನಿರ್ಮಾಣದಲ್ಲಿ ಪಾಲುದಾರಿಕೆ ವಹಿಸಿಕೊಳ್ಳಲು ಕೃಷ್ಣ ಹೇಳಿದ್ದಾಗಿ ಮಿಲನಾ ನಾಗರಾಜ್ ಹೇಳಿದರು. ಹಾಗಾಗಿ ಚಿತ್ರದ ನಟನೆಗೆ ಸಂಭಾವನೆ ತೆಗೆದುಕೊಂಡಿಲ್ಲ. ಕೃಷ್ಣನೂ ತೆಗೆದುಕೊಂಡಿಲ್ಲ. ಕಾಸ್ಟ್ಯೂಮ್, ಮೇಕಪ್ ವಿಚಾರಗಳನ್ನು ಕೂಡ ನಾವೇ ತೀರ್ಮಾನಿಸುತ್ತಿದ್ದ ಕಾರಣ ಆಗ ಅದೇನು ದೊಡ್ಡ ಖರ್ಚಾಗಿ ಅನಿಸಿರಲಿಲ್ಲ. ಆದರೆ ಬಿಡುಗಡೆಗೆ ಮೊದಲು ಚಿತ್ರ ಜನರನ್ನು ತಲುಪಬೇಕೆಂದು ಎಷ್ಟು ಪ್ರಮೋಶನ್ ಮಾಡಿದರೂ ಸಾಕಾಗುತ್ತಿಲ್ಲ. ನಿಜವಾಗಿ ನಿರ್ಮಾಪಕರ ಕಷ್ಟ ಈಗ ಅರ್ಥವಾಗುತ್ತಿದೆ” ಎಂದರು ಮಿಲನಾ.
ನಾಯಕಿಗೆ ಸೊಂಟ ನೋವು ನೀಡಿದ ಕೃಷ್ಣ!
ಚಿತ್ರದಲ್ಲಿ ಮತ್ತೋರ್ವ ನಾಯಕಿಯಾಗಿ ನಟಿಸುತ್ತಿರುವ ಅಮೃತಾ ಅಯ್ಯಂಗಾರ್ ತಾವು ನಾಯಕನನ್ನು ಬೆನ್ನ ಮೇಲೆ ಹೊರುವ ದೃಶ್ಯವಿತ್ತು. ಅದರಿಂದ ಹೇಗೆ ಸೊಂಟ ನೋವು ಶುರುವಾಯಿತು ಎಂದು ವಿವರಿಸಿದರು. “ನಾನು ಚಾಲೆಂಜಿಂಗ್ ಆಗಿ ಸ್ವೀಕರಿಸಿ ಮಾಡಲು ಒಪ್ಪಿಕೊಂಡಿದ್ದೆ. ಕೂಸುಮರಿ ಮಾಡೋದು ನನಗೆ ಹೊಸದೇನಾಗಿರಲಿಲ್ಲ. ಅದು ಕೂಡ ಒಮ್ಮೆ ಎತ್ತಿಕೊಂಡರೆ ಆಯ್ತು ತಾನೇ ಎಂದು ಒಪ್ಪಿಕೊಂಡಿದ್ದೆ. ಆದರೆ ಲಾಂಗ್ ಶಾಟ್, ಮಿಡ್ ಶಾಟ್ ಅಂತ ಕಡಿಮೆ ಅಂದರೂ 25 ಸಲ ಕೃಷ್ಣನನ್ನು ಹೊರಬೇಕಾಗಿ ಬಂತು. ನಿಜಕ್ಕೂ ನನಗೆ ಬೆನ್ನು ನೋವೇ ಶುರುವಾಗಿತ್ತು” ಎಂದರು ಅಮೃತಾ.
ನವನಟಿ ರಚನಾ ಚಿತ್ರದಲ್ಲಿ ಬಬ್ಲಿಯಾಗಿರುವ ಕಾಲೇಜ್ ಹುಡುಗಿಯ ಪಾತ್ರ ನಿಭಾಯಿಸಿದ್ದಾರಂತೆ. ಯುವ ನಟ ಧನುಷ್ ಪ್ರಣವ್ ಮಾತನಾಡಿ ತಾವು ನಾಯಕನ ಬಾಲ್ಯದ ದಿನಗಳನ್ನು ತೋರಿಸುವ ದೃಶ್ಯಗಳಲ್ಲಿ ಅಭಿನಯಿಸಿರುವುದಾಗಿ ಹೇಳಿದರು. ಅಭಿಲಾಷ್ ಎನ್ನುವ ಮೈಸೂರು ಹುಡುಗ ಚಿತ್ರದಲ್ಲಿ ತನ್ನದು ವಿಜಯ್ ಎನ್ನುವ ಪಾತ್ರ. ನಾಯಕ ಆದಿಯ ಸ್ನೇಹಿತನಾಗಿರುತ್ತೇನೆ ಎಂದರು.
ಚಿತ್ರವನ್ನು ಜಾಕ್ ಮಂಜು ರಾಜ್ಯಾದ್ಯಂತ ವಿತರಿಸುತ್ತಿದ್ದು, ಈಗಾಗಲೇ 80ರಷ್ಟು ಸಿಂಗಲ್ ಥಿಯೇಟರ್ ಗಳು ಬುಕ್ ಆಗಿವೆ. ಸುಮಾರು 150 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ನಿರೀಕ್ಷೆ ಇದೆ ಎಂದು ನಾಯಕ, ನಿರ್ದೇಶಕ ಮತ್ತು ನಿರ್ಮಾಪಕರಾದ ಡಾರ್ಲಿಂಗ್ ಕೃಷ್ಣ ತಿಳಿಸಿದರು.